ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಕರೋನಾ ಕಷ್ಟಸ್ಥಿತಿ ತಿಳಿಸಿದ ಡಿ.ಕೆ. ಶಿವಕುಮಾರ್

ದೇಶದಲ್ಲಿ ರೌದ್ರಾವತಾರ ತಾಳಿರುವ ಕೊರೋನಾ ಪರಿಸ್ಥಿತಿ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳ ಲ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿಸಿಕೊಟ್ಟಿದ್ದಾರೆ.  

Last Updated : Apr 11, 2020, 03:35 PM IST
ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಕರೋನಾ ಕಷ್ಟಸ್ಥಿತಿ ತಿಳಿಸಿದ ಡಿ.ಕೆ. ಶಿವಕುಮಾರ್ title=

ಬೆಂಗಳೂರು: ಹೊಸದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷಗಾದಿ ವಹಿಸಿಕೊಂಡಿರುವ ಮಾಜಿ‌ ಸಚಿವ ಡಿ.ಕೆ. ಶಿವಕುಮಾರ್ ಕೊರೋನಾ ಪರಿಸ್ಥಿತಿ ಎದುರಿಸಲು ತಮ್ಮ ಪಕ್ಷವನ್ನು ಕೆಳಹಂತದಿಂದ ಸಜ್ಜುಗೊಳಿಸುತ್ತಿದ್ದಾರೆ. ಕೊರೋನಾ ಪರಿಸ್ಥಿತಿ ನಿರ್ವಹಣೆಗೆಂದೇ ವಾರ್ ರೂಂ ರಚಿಸಿರುವ ಅವರು ಸ್ವತಃ ಖುದ್ದಾಗಿ ವಾರ್ ರೂಂನಲ್ಲಿ ಕುಳಿತು ವಾರ್ ಮೂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ನಡುವೆ ದೇಶದಲ್ಲಿ ರೌದ್ರಾವತಾರ ತಾಳಿರುವ ಕೊರೋನಾ ಪರಿಸ್ಥಿತಿ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳ ಲ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ (DK Shivakumar), ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿಸಿಕೊಟ್ಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ತಳಮಟ್ಟಕ್ಕೆ ಇಳಿದು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಕೊರೋನಾ (Coronavirus) ವಿರುದ್ಧ ಹೋರಾಡುತ್ತಿದೆ. ಇದಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚಿಸಲಾಗಿದೆ. ವಾರ್ ರೂಮ್ ಹಾಗೂ ಸಹಾಯವಾಣಿ ಆರಂಭಿಸಿ, ಜನರಿಗೆ ಸಹಾಯಹಸ್ತ ನೀಡಲಾಗುತ್ತಿದೆ. ಮುಂದೆ ಒದಗಬಹುದಾದ ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಮಾರ್ಗೋಪಾಯಗಳನ್ನು ರೂಪಿಸಲು ವಿಷನ್ ಕರ್ನಾಟಕ ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಯಾವ ದಿಕ್ಕಿನತ್ತ ಸಾಗಬೇಕು ಎಂಬುದರ ಬಗ್ಗೆ ಪರಿಹಾರೋಪಾಯಗಳನ್ನು ಈ ಸಮಿತಿ ನೀಡಲಿದೆ. ಈ ಎಲ್ಲ ಸಮಿತಿಗಳನ್ನು ಹಿರಿಯ ನಾಯಕ ನೇತೃತ್ವದಲ್ಲೇ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇರುವ ಕಡೆಯೇ ಸಂವಿಧಾನ ಓದುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲು ಡಿಕೆಶಿ ಕರೆ

ಜನರಿಗೆ ನೆರವು ನೀಡುವುದು, ಸರ್ಕಾರದ ವೈಫಲ್ಯಗಳನ್ನು ಗುರುತಿಸುವುದು, ಸರ್ಕಾರೇತರ, ಸ್ವಯಂ ಸೇವಾ ಸಂಸ್ಥೆಗಳು ಏನು ಮಾಡುತ್ತಿವೆ ಎಂಬುದರ ಬಗ್ಗೆ ಕಣ್ಗಾವಲು ಇಟ್ಟಿದ್ದೇವೆ. ‌ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರಿಗೆ ನೀಡಿರುವ ಭರವಸೆಗಳು ಈಡೇರಿಲ್ಲ. ಅವು ಕೇವಲ ಕಾಗದದ ಮೇಲಷ್ಟೇ ಉಳಿದಿವೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಹಾಗೂ ಸರಕಾರವನ್ನು ಎಚ್ಚರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಹೆಸರು ಮಾಡಿದೆಯಾದರೂ ಜನರಿಗೆ ಆರೋಗ್ಯ ಸೌಲಭ್ಯ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಎರಡು ಜಿಲ್ಲೆಗಳಿಗೆ ಮಾತ್ರ ಆಹಾರ ಧಾನ್ಯಗಳು ತಲುಪಿದ್ದು, ಬೇರೆ ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳಿಗಾಗಿ ಜನ ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರ್ಥಿಕ ವಿಚಾರವಾಗಿ ಕೇಂದ್ರ ಸರ್ಕಾರ ಏನೆಲ್ಲಾ ಘೋಷಣೆಗಳನ್ನು ಮಾಡಿದ್ದರೂ ಆ ಬಗ್ಗೆ ಬ್ಯಾಂಕ್ಗಳಿಗೆ ಸೂಕ್ತ ನಿರ್ದೇಶನವೇ ರವಾನೆಯಾಗಿಲ್ಲ. ಕೆಲವೇ ಕೆಲವು ಪ್ರದೇಶಗಳ ಜನರಿಗೆ ಸಾವಿರ, ಐನೂರು  ರೂಪಾಯಿ ತಲುಪಿರುವುದು ಬಿಟ್ಟರೆ ಬೇರೆ ಯಾವುದೇ ಆರ್ಥಿಕ ನೆರವು ರಾಜ್ಯದ ಜನರನ್ನು ತಲುಪಿಲ್ಲ. ವಿರೋಧ ಪಕ್ಷವಾಗಿ ನಾವು ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ರಾಜ್ಯ ಮಟ್ಟದಿಂದ ಗ್ರಾಮಗಳ ಮಟ್ಟದವರೆಗೂ ನಮ್ಮ ಪಕ್ಷದ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದು, ನಿರೀಕ್ಷೆಗೂ ಮೀರಿ ಸಹಾಯ ಮಾಡಿ ಜನರ ಮನಸ್ಸು ಗೆಲ್ಲುತ್ತಿದ್ದಾರೆ ಎಂದಿದ್ದಾರೆ.

ಮಾತಿಗೆ ತಕ್ಕಂತೆ ಕೋಮು ಸಾಮರಸ್ಯ ಕದಡುವರ ವಿರುದ್ದ ಕ್ರಮ ಕೈಗೊಳ್ಳಿ: ಬಿಎಸ್‌ವೈಗೆ ಡಿಕೆಶಿ ಸಲಹೆ

ಬಿಜೆಪಿ ನಾಯಕರು ಹೇಗೆ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಒಂದು ತಂಡ ಕೆಲಸ ಮಾಡುತ್ತಿದ್ದು, ಈ ವಿಚಾರದಲ್ಲಿ ಸಾಧ್ಯವಾದಷ್ಟು ಸರ್ಕಾರದ ವಿರುದ್ಧ ದಾಳಿ ನಡೆಸುತ್ತಿದ್ದೇವೆ. ಪ್ರತಿನಿತ್ಯ ನಮ್ಮ ನಾಯಕರ ತಂಡ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದಾರೆ. ಇನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸರ್ವಪಕ್ಷ ಸಭೆ ಕರೆಯಲು ಆಗ್ರಹಿಸಿದ್ದೇವೆ. ಇದರ ಜತೆಗೆ ಸರ್ಕಾರದೊಳಗಿನ ಭಿನ್ನಾಭಿಪ್ರಾಯಗಳನ್ನು ನಾವು ಬಹಿರಂಗಗೊಳಿಸುತ್ತಿದ್ದೇವೆ. ರಾಜ್ಯದಲ್ಲಿ ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷ ಕಾಂಗ್ರೆಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಹೇಳಿದ್ದಾರೆ.

ಆರ್ಥಿಕ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ತಜ್ಞರ ಸಲಹೆ ಪಡೆಯುವಂತೆ ನೀವು ನೀಡಿದ್ದ ಸಲಹೆಯನ್ನು ನಾವು ರಾಜ್ಯ ಮಟ್ಟದಲ್ಲೂ ಅಳವಡಿಸಿಕೊಂಡಿದ್ದೇವೆ. ಈ ಸಮಸ್ಯೆ ಮುಗಿದ ಬಳಿಕ ಆರ್ಥಿಕ ಸವಾಲು ಎದುರಿಸಲು ಹಾಗೂ ಪ್ರಗತಿ ಸಾಧಿಸಲು ಯಾವ ದಿಕ್ಕಿನಲ್ಲಿ ಸಾಗಬೇಕು, ಯಾವ ನೀತಿ ರೂಪಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ರಚಿಸಲು ವಿಷನ್ ಕರ್ನಾಟಕ ಎಂಬ ಸಮಿತಿ ರಚಿಸಲಾಗಿದೆ. ಈ ಸಭೆಯಲ್ಲಿ ಭಾಗವಹಿಸುವ ಮುನ್ನ ಹಿರಿಯ ನಾಯಕರು, ಎಲ್ಲ ಜಿಲ್ಲಾಧ್ಯಕ್ಷರು ಹಾಗೂ ವಾರ್ ರೂಮ್ ಸದಸ್ಯರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ್ಕ ಸಭೆ ನಡೆಸಿದ್ದೇನೆ. ಪ್ರತಿನಿತ್ಯ ಇವರ ಜತೆ ಸಭೆ ನಡೆಸಿ, ಆಯಾ ಪ್ರದೇಶಗಳ ಪರಿಸ್ಥಿತಿ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಮಲಗಿದೆ, ಸಚಿವ ಈಶ್ವರಪ್ಪ ಎಲ್ಲಿದ್ದಾರೋ ಗೊತ್ತಿಲ್ಲ: ಡಿ‌.ಕೆ. ಶಿವಕುಮಾರ್

 ಲಾಕ್​​ಡೌನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಬೇರೆ ಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಅವುಗಳ ಅಭಿಪ್ರಾಯ ಪಡೆಯದೇ  ಲಾಕ್​​ಡೌನ್ (Lockdown) ಘೋಷಣೆ ಮಾಡಿದೆ. ಈ ವಿಚಾರದಲ್ಲಿ ನೀವು ನಿಮ್ಮ ತೀರ್ಮಾನ ಕೈಗೊಳ್ಳಿ. ನಾವು ಹಸ್ತಕ್ಷೇಪ ಮಾಡುವುದು ಬೇಡ. ನಾಳೆ ಏನೇ ಆದರೂ ಅವರು ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಅವರು ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಲಿ. ನಂತರ ಅದಕ್ಕೆ ಅವರೇ ಹೊಣೆಗಾರರಾಗಲಿ. ಈಗಾಗಲೇ ರಾಷ್ಟ್ರೀಯ ಮಟ್ಟದಿಂದ ಬ್ಲಾಕ್ ಮಟ್ಟದವರೆಗೂ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ನಾವು ತಿಳಿಸಿದ್ದು, ಇದಕ್ಕೆ ಬದ್ಧರಾಗಿರೋಣ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ನಾನು ನರೇಗಾ ಯೋಜನೆ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸಿದ್ದು, ಗ್ರಾಮೀಣ ಭಾಗಗಳಲ್ಲಿ ಒಂದೇ ಕುಟುಂಬದ 3-4 ಮಂದಿ ವೈಯಕ್ತಿಕ ಉದ್ಯೋಗ ಮಾಡಲು ನೆರವು ನೀಡಬೇಕು. ಆಮೂಲಕ ಒಂದು ಕುಟುಂಬ ತಿಂಗಳಿಗೆ 30 ರಿಂದ 40 ಸಾವಿರ ರುಪಾಯಿ ಸಂಪಾದಿಸಬಹುದು ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದೇವೆ. ಅದರ ಅನುಷ್ಠಾನಕ್ಕೆ ಒತ್ತಡವನ್ನೂ ಹೇರಿದ್ದೇವೆ ಎಂದು ಹೇಳಿದ್ದಾರೆ.

Trending News