ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ

ಇಂತಹ ದೂರು, ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಅಹವಾಲು ಸಮಿತಿಯನ್ನೇ ರಚಿಸಲಾಗಿದೆ. ಅಹವಾಲು, ಸಮಸ್ಯೆ ಹೇಳಿಕೊಂಡವರಿಗೆ ಸಹಾಯ, ಅವರ ಪರ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದ್ದೇವೆ. 

Written by - Prashobh Devanahalli | Last Updated : Apr 25, 2022, 04:05 PM IST
  • ಪ್ರಿಯಾಂಕ್ ಖರ್ಗೆಗೆ ಸಿಐಡಿ ನೊಟೀಸ್ ಜಾರಿ
  • ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ
  • ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆಳೆದಿದ್ದ ಕಾಂಗ್ರೆಸ್‌ ವಕ್ತಾರ
ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ title=
DK Shivakumar

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆಳೆದ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೊಟೀಸ್ ಜಾರಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭಗಳು. ನಾವು ವಿರೋಧ ಪಕ್ಷದಲ್ಲಿದ್ದು, ರಾಜ್ಯದುದ್ದಗಲಕ್ಕೂ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮಗೂ ಬೇರೆ ಬೇರೆ ಮೂಲಗಳಿಂದ ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ ಎಂದರು.

ಇದನ್ನು ಓದಿ: ಕೋವಿಡ್ 4ನೇ ಅಲೆ ಆತಂಕ: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.. ಹೀಗಿದೆ ಸಭೆಯ ಹೈಲೈಟ್ಸ್‌

ಇಂತಹ ದೂರು, ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಅಹವಾಲು ಸಮಿತಿಯನ್ನೇ ರಚಿಸಲಾಗಿದೆ. ಅಹವಾಲು, ಸಮಸ್ಯೆ ಹೇಳಿಕೊಂಡವರಿಗೆ ಸಹಾಯ, ಅವರ ಪರ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮೂರು ವರ್ಷದಿಂದ ಸರ್ಕಾರದ ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಬಂದಿದ್ದು, ಒಂದೊಂದೇ ವಿಚಾರವನ್ನು ನಾವು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದರು.

ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ನಮಗೆ ಮಾಹಿತಿ ಬಂದಾಗ ಅಧಿವೇಶನದಲ್ಲಿ ನಮ್ಮ ಶಾಸಕರಿಂದ ಪ್ರಶ್ನೆ ಕೇಳಿಸಿದೆವು. ಆಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ. ನಂತರ ಅನೇಕರು ನನ್ನನ್ನು ಭೇಟಿ ಮಾಡಿ, ಯಾರಿಗೆ ಎಷ್ಟು ಅಂಕ ಬಂದಿದೆ ಎಂದು ಉತ್ತರ ಪತ್ರಿಕೆ ತೋರಿಸಿದರು. 

ಕಲಬುರ್ಗಿಗೆ ಸಂಬಂಧಿಸಿದ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ಶಾಸಕರಲ್ಲ. ಪಕ್ಷದ ವಕ್ತಾರರೂ ಹೌದು. ಕೆಲವು ವಿಚಾರವನ್ನು ಕೃಷ್ಣಭೈರೇಗೌಡರಿಂದ, ಮತ್ತೆ ಕೆಲವು ವಿಚಾರವನ್ನು ಬಿ.ಎಲ್ ಶಂಕರ್ ಅವರಿಂದ, ಮೈಸೂರಿನ ಲಕ್ಷ್ಮಣ್ ಅವರಿಂದ ಮಾತನಾಡಿಸುತ್ತೇವೆ. ಮತ್ತೆ ಕೆಲವು ವಿಚಾರಗಳಲ್ಲಿ ನಾನು, ಸಿದ್ದರಾಮಯ್ಯನವರು ಮಾತನಾಡುತ್ತೇವೆ. ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ ಎಂದರು.

ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ನಮ್ಮ ದಲಿತ ನಾಯಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಇದು ನಮಗಾಗುತ್ತಿರುವ ಅನ್ಯಾಯ ಎಂದು ಅನೇಕ ದಲಿತ ಮುಖಂಡರು ರಾಜ್ಯಾದ್ಯಂತ ಧರಣಿ ಮಾಡುವುದಾಗಿ ನನ್ನ ಮನೆಗೇ ಬಂದು ಹೇಳುತ್ತಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಆಸ್ಕರ್ ಫರ್ನಾಂಡೀಸ್ ಅವರ ಜಾಗಕ್ಕೆ ಟ್ರಸ್ಟಿಯಾಗಿ ಮೂರು ತಿಂಗಳ ಹಿಂದೆ ನೇಮಕವಾಗಿದ್ದಾರೆ. ಅವರಿಗೆ ಇಡಿ ನೋಟೀಸ್ ಜಾರಿ ಮಾಡಿ, ಬೆಳಗ್ಗೆ-ರಾತ್ರಿ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಹಾಗಾದರೆ ಇವರ ವಿರುದ್ಧ ಯಾರೂ ಧ್ವನಿ ಎತ್ತಬಾರದೇ? ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿರುವವರೆಲ್ಲ ಸತ್ಯಹರಿಶ್ಚಂದ್ರರೇ? ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಅಕ್ಷಯ ತೃತೀಯ ಸಂದರ್ಭದಲ್ಲಿ ಮುಸಲ್ಮಾನ ವ್ಯಾಪಾರಿಗಳಿಂದ ಚಿನ್ನಾಭರಣ ಖರೀದಿ ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದನ್ನೆಲ್ಲಾ ನೋಡಿಯೂ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ರಾಜ್ಯದ ಆರ್ಥಿಕತೆ ಏನಾಗಬೇಕು? ವ್ಯಾಪಾರ ವಹಿವಾಟುಗಳನ್ನು ಜಾತಿ, ಧರ್ಮದ ಬಣ್ಣ ಕಟ್ಟಿ ಮಾಡಲು ಸಾಧ್ಯವೇ? ರಾಜ್ಯದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ, ಅಶಾಂತಿ ಹೆಚ್ಚಾಗುತ್ತದೆ. ರಾಜಕೀಯ ಪಕ್ಷವಾಗಿ ನಾವು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಎಂದರು. 

ಪ್ರಿಯಾಂಕ್ ಖರ್ಗೆ ಅವರು ನೋಟಿಸ್ ಜಾರಿಯಾದ ತಕ್ಷಣವೇ ನಮಗೆ ಮಾಹಿತಿ ನೀಡಿದ್ದು, ನಾನು, ಶಾಸಕಾಂಗ ಪಕ್ಷದ ನಾಯಕರು, ರಾಷ್ಟ್ರೀಯ ನಾಯಕರು ಚರ್ಚಿಸಿ ಈ ನೋಟೀಸ್ ಗೆ ಅಂಜುವ ಅಗತ್ಯವಿಲ್ಲ ಎಂದು ಹೇಳಿದ್ದೇವೆ. ಅವರು ಬರಲಿ, ನಾವು ಎಲ್ಲವನ್ನು ಎದುರಿಸುತ್ತೇವೆ.

ಸಚಿವರ ಜತೆ ಫೋಟೋ ತೆಗೆಸಿಕೊಂಡು, ಈ ಅಕ್ರಮದ ಪ್ರಮುಖ ಆರೋಪಿಗಳನ್ನು ತನಿಖಾಧಿಕಾರಿಗಳು ಮೊದಲು ತನಿಖೆ ಮಾಡಲಿ. ಇವರು ಕಳ್ಳರನ್ನು ಹಿಡಿಯಬೇಕೇ ಹೊರತು, ಅಕ್ರಮ ಬಯಲಿಗೆಳೆದವರಿಗೆ ನೋಟೀಸ್ ನೀಡುವುದಲ್ಲ. ಇವರಿಗೆ ನಾವು ಯಾವ ಸಹಕಾರ ನೀಡಬೇಕು? ತಪ್ಪು ಮಾಡಿದವರನ್ನು ಹಿಡಿಯುವುದು ನಿಮ್ಮ ಜವಾಬ್ದಾರಿ. ಅಕ್ರಮ ಬಯಲು ಮಾಡಿದ ನಾಯಕರಿಗೆ ನೋಟೀಸ್ ಜಾರಿ ಮಾಡಿ ಮುಂದೆ ಯಾರೂ ನಿಮ್ಮ ವಿರುದ್ಧ ಧ್ವನಿ ಎತ್ತದಂತೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಹೆದರಿಸುತ್ತಿದ್ದೀರಾ? ಪ್ರಾಣ ಹೋದರೂ ಸರಿಯೇ, ನಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ.

ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತವಿದ್ದು, ಯುವಕರು, ಬಡವರು, ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿ ಸರ್ಕಾರ ಕುತಂತ್ರ ಮಾಡುವುದನ್ನು ನಿಲ್ಲಿಸಬೇಕು.

ಪಿಎಸ್ಐ ನೇಮಕ ಅಕ್ರಮದಲ್ಲಿ ಬಿಜೆಪಿಯವರೇ ಪ್ರಮುಖ ಆರೋಪಿಯಾಗಿದ್ದು, ನಮಗೆ ಅವರು ಯಾರು ಎಂದು ಗೊತ್ತೇ ಇಲ್ಲ ಎಂದು ಸಚಿವರು ಹೇಳಿದ್ದರು. ಆದರೆ ಮರುದಿನವೇ ಆರೋಪಿ ಜತೆ ಅವರು ಇರುವ, ಆರೋಪಿ ಮನೆಗೆ ಭೇಟಿ ಕೊಟ್ಟಿರುವ ಫೋಟೋಗಳು ಪ್ರಚಾರವಾಗಿವೆ. ಗೃಹ ಸಚಿವರು, ಬಿಜೆಪಿ ನಾಯಕರ ಜತೆಗೆ ಈ ಆರೋಪಿ ಇರುವ ಫೋಟೋಗಳಿವೆ. ಇವೆಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ನರ್ಸಿಂಗ್ ಕೌನ್ಸಿಲ್‌ಗೆ ನಾಮನಿರ್ದೇಶನ, ದಿಶಾ ಸಮಿತಿಗೆ ಬಿಜೆಪಿ ನಾಯಕರನ್ನೇ ನೇಮಕ ಮಾಡಿದ್ದು, ಈಗ ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅಕ್ರಮ ನೇಮಕಾತಿಯ ಅಂಗಡಿ ತೆರೆದಿರುವುದರಿಂದ ಬ್ಲಾಕ್ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಹೋಗಿದ್ದಾರೆ. ಈ ಅಕ್ರಮವನ್ನು ನಾವು ಬಯಲಿಗೆಳೆದು ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಒಳಪಡಿಸಿ ಎಂದು ಹೇಳಿದರೆ, ತಪ್ಪಿತಸ್ಥರನ್ನು ಹಿಡಿಯುವ ಬದಲು ಅಕ್ರಮ ಬಯಲಿಗೆಳೆದವರಿಗೆ ನೊಟೀಸ್ ಜಾರಿ ಮಾಡಿದ್ದಾರೆ ಎಂದರು. 

ಈ ಅಕ್ರಮ ಬಯಲಿಗೆಳೆದ ಬೆನ್ನಲ್ಲೇ ಎಷ್ಟೆಲ್ಲ ನೇಮಕಾತಿ ಅಕ್ರಮಗಳು ಬೆಳಕಿಗೆ ಬರುತ್ತಿವೆ ನೀವೇ ನೋಡಿ. ಪಿಎಸ್ಐ, ಎಫ್ ಡಿಎ, ಪಿಡಬ್ಲ್ಯೂಡಿ ನೇಮಕಾತಿ ಅಕ್ರಮಗಳು ಬೆಳಕಿಗೆ ಬಂದಿವೆ. ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಅವರು ನೀರಾವರಿ ಇಲಾಖೆ ಟೆಂಡರ್ ನಲ್ಲಿ ಶೇ. 20 ರಷ್ಟು ಕಮಿಷನ್ ಅಕ್ರಮ ನಡೆದಿದೆ ಎಂದರು. ಈ ವಿಚಾರದಲ್ಲಿ ಎಸಿಬಿ ಅವರು ಪ್ರಕರಣ ದಾಖಲಿಸಿ, ಅವರಿಗೆ ಯಾಕೆ ನೊಟೀಸ್ ನೀಡಲಿಲ್ಲ?ಯತ್ನಾಳ್ ಅವರು ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ್ದಾರೆ. ಅವರಿಗೆ ಯಾಕೆ ನೊಟೀಸ್ ಜಾರಿ ಮಾಡಲಿಲ್ಲ?  ರಾಜ್ಯದಲ್ಲಿ ಏನಾಗುತ್ತಿದೆ? ಮುಖ್ಯಮಂತ್ರಿಗಳಿಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆಯೋ, ಇಲ್ಲವೋ? ಈ ಪ್ರಕರಣದಲ್ಲಿ ಆರೋಪಿಯಾಗಿರುವರಿಂದ ಸನ್ಮಾನ ಮಾಡಿಸಿಕೊಂಡಿದ್ದೀರಲ್ಲಾ ನಿಮಗೂ ಅವರಿಗೂ ಹೇಗೆ ಸಂಪರ್ಕ ಎಂದು ತನಿಖಾಧಿಕಾರಿಗಳು ಗೃಹ ಸಚಿವರಿಗೆ ನೊಟೀಸ್ ಜಾರಿ ಮಾಡಬೇಕಿತ್ತು. ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ. 

ಇದನ್ನು ಓದಿ: ʼBird Singing: ಹ್ಯಾರಿ ಪಾಟರ್‌ ಫ್ಯಾನ್‌ ಈ ಪಕ್ಷಿ: ಶಿಲ್ಲೆ ಹೊಡೆಯುತ್ತಾ ಹಾಡುತ್ತೆ ಈ ʼಜೆಫಿರ್‌ʼ

ಇನ್ನು ಬಮೂಲ್ ಅಕ್ರಮದ ಬಗ್ಗೆ ಮಾತನಾಡಿದ ಅವರು, ‘ಸಹಕಾರ ಸಚಿವರು ನಮ್ಮ ಜತೆ ಬೆಳೆದ ನಾಯಕರಾಗಿದ್ದು, ನಮ್ಮ ಕ್ಷೇತ್ರವೂ ಈ ವ್ಯಾಪ್ತಿಯಲ್ಲಿರುವುದರಿಂದ ಸಚಿವರಿಗೆ ಕರೆ ಮಾಡಿ ಈ ವಿಚಾರವಾಗಿ ಗಮನಹರಿಸುವಂತೆ ತಿಳಿಸಿದ್ದೇನೆ. ಅವರು ಕೂಡ ಈ ವಿಚಾರದ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದು, ತನಿಖೆ ಮಾಡುತ್ತಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅವರಿಗೆ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ. ನಮ್ಮ ಅನೇಕ ಯುವಕರು ಹಲವು ವಿಚಾರ ಹೇಳುತ್ತಿದ್ದು, ಅವೆಲ್ಲವೂ ನಿಜ ಎಂದು ನಂಬಲು ಸಾಧ್ಯವಿಲ್ಲ. ಸತ್ಯಾಂಶ ಏನು ಎಂಬುದು ತಿಳಿಯಬೇಕು. ಕಾರ್ಯದರ್ಶಿ ರವಿ ಅವರು ನಾನು ಕಂಡ ಬಹಳ ಪ್ರಾಮಾಣಿಕ ವ್ಯಕ್ತಿ. ಅಂತಹವರ ಕೈಕೆಳಗೇ ಈ ರೀತಿ ಅಕ್ರಮ ನಡೆಯುತ್ತಿದೆ. ಅವರು ಏನು ಮಾಡುತ್ತಿದ್ದಾರೆ? ಅವರು ಸಾಕಷ್ಟು ಪಾರದರ್ಶಕರಾಗಿದ್ದು, ನಾನು ಇಂಧನ ಸಚಿವನಾಗಿದ್ದಾಗ 30-40 ಸಾವಿರ ನೇಮಕ ಮಾಡಿದ್ದು, ಒಂದು ಚೂರು ರಾಜಿಯಾಗಲು ಅವಕಾಶ ನೀಡಿರಲಿಲ್ಲ. ಆಗ ಯಾವುದೇ ಅಪಸ್ವರಗಳೂ ಕೇಳಿ ಬಂದಿರಲಿಲ್ಲ. ಈಗ ಅವರು ಸುಮ್ಮನೆ ಕೂತಿದ್ದಾರೆ ಎಂದರೆ ಹೇಗೆ? ಈ ವಿಚಾರವಾಗಿ ಒಂದು ಪಟ್ಟಿ ಸಿದ್ಧವಾಗುತ್ತಿದ್ದು, ಈ ಬಗ್ಗೆ ನಂತರ ಮಾತನಾಡುತ್ತೇನೆ’ ಎಂದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News