ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರಿಗೆ ರಾಜ್ಯದ ವೈದ್ಯರ ಬೆಂಬಲವಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಎಚ್. ಎನ್. ರವೀಂದ್ರ ಬಹಿರಂಗ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಎಚ್. ಎನ್. ರವೀಂದ್ರ, ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ನಿಯಮವಾಳಿಯಂತೆ ನಾವು ನಮ್ಮ ಬೆಂಬಲ ನೀಡಲಿದ್ದೇವೆ. ಈ ನಿಯಮದಂತೆ ವೈದ್ಯರು ಡಾ. ಯತೀಂದ್ರ ಪರ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು. ಡಾ. ಯತೀಂದ್ರ ಮಾತ್ರವಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಎಲ್ಲ ವೈದ್ಯರಿಗೂ ಪಕ್ಷಾತೀತಾವಾಗಿ ಬೆಂಬಲ ನೀಡಲು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ನಿರ್ಧರಿಸಿರುವುದಾಗಿ ಡಾ. ಎಚ್. ಎನ್. ರವೀಂದ್ರ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದಿಂದ 20-25 ವೈದ್ಯರು ಈ ಬಾರಿ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ ಡಾ. ಎಚ್. ಎನ್. ರವೀಂದ್ರ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸುಧಾರಣೆ, ಆಸ್ಪತ್ರೆಗಳ ಅಭಿವೃದ್ಧಿ, ಗರ್ಭಿಣಿಯರ ಪೌಷ್ಟಿಕತೆ ಮುಂತಾದ ವಿಚಾರಗಳಿಗೆ ಆದ್ಯತೆ ನೀಡಿ ಸಂಘದಿಂದ 5 ಜನ ತಜ್ಞರ ತಂಡದಿಂದ ಆರೋಗ್ಯ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.