ಹಾಸನ : ಯಾರು ಎಷ್ಟೇ ವಿರೋಧ ಮಾಡಿದರೂ ಎತ್ತಿನಹೊಳೆ ಯೋಜನೆ ಮೂಲಕ ಏಳು ಜಿಲ್ಲೆಗಳಿಗೆ ನೀರು ಹರಿಸುತ್ತೇವೆ. ಇದರಲ್ಲಿ ಯಾವುದೇ ಸ್ವಂತ ಹಿತಾಸಕ್ತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ರಾಜ್ಯ ಪ್ರವಾಸದ 20ನೇ ದಿನವಾದ ಗುರುವಾರ ಜಿಲ್ಲೆಯ ಅರಸೀಕೆರೆ ವಿಧಾನಸಭೆ ಕ್ಷೇತ್ರದಲ್ಲಿ 1400 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಎತ್ತಿನಹೊಳೆಯಿಂದ ಅರಸೀಕೆರೆ, ಬೇಲೂರು, ಹಾಸನ ಒಳಗೊಂಡು ಏಳು ಜಿಲ್ಲೆಗಳಲ್ಲಿ 520-600 ಕೆರೆಗಳು ತುಂಬುತ್ತವೆ. ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳಲ್ಲಿ ಕುಡಿಯುವ ನೀರು ದೊರೆಯುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊಳವೆ ಬಾವಿ 1600-1700 ಅಡಿ ಕೊರೆದರೂ ನೀರು ಸಿಗದು. ಈ ಸಮಸ್ಯೆ ನಿವಾರಿಸಲು 13000 ಕೋಟಿ ರೂ.ಗಳನ್ನು ಎತ್ತಿನಹೊಳೆ ಯೋಜನೆಗೆ ಖರ್ಚು ಮಾಡುತ್ತಿದ್ದೇವೆ. ಅದಕ್ಕೆ ಮಂಜೂರಾತಿ ಕೊಟ್ಟಿದ್ದು ನಮ್ಮ ಸರ್ಕಾರ ಎಂದರು. ಆದರೆ ಪ್ರತಿಪಕ್ಷದವರು ನೀರು ಬರೋಲ್ಲ ಎಂದು ಅಪಪ್ರಚಾರ ಮಾಡುತ್ತಾರೆ. ಎತ್ತಿನಹೊಳೆಯಿಂದ 24.1 ಟಿಎಂಸಿ ನೀರು ದೊರೆಯುತ್ತದೆ. ನೇತ್ರಾವತಿ ನದಿಯಿಂದ 600 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತದೆ. ಅದರಲ್ಲಿ 24.1 ಟಿಎಂಸಿ ನೀರು ತೆಗೆದು ಈ ಭಾಗಕ್ಕೆ ನೀಡುತ್ತೇವೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಮೂಲಕ ಅರಸೀಕೆರೆಯ ಕೆರೆಗಳಿಗೂ ನೀರು ಬರುತ್ತದೆ. ಬೇಲೂರಿಗೆ 0.129 ಟಿಎಂಸಿ ನೀರು ಕುಡಿಯುವ ನೀರು ದೊರೆಯುತ್ತದೆ. ಅರಸೀಕೆರೆಗೆ 1.32 ಟಿ.ಎಂ.ಸಿ.ನೀರು ಕೊಟ್ಟಿದ್ದೇವೆ. ಕೆರೆಗಳನ್ನು ತುಂಬಿಸಲು, ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿದ್ದೇವೆ. 34 ಕೆರೆಗಳನ್ನು ತುಂಬಿಸುತ್ತೇವೆ. 55 ಕಿ.ಮೀ. ನಾಲೆ ಅರಸೀಕೆರೆಯಲ್ಲಿ ಆಗುತ್ತದೆ. ಇದಕ್ಕೆ 1240 ಕೋಟಿ ರೂ. ಖರ್ಚಾಗುತ್ತದೆ. ಇದರಿಂದ ಅಂತರ್ಜಲ, ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗುತ್ತದೆ ಎಂದು ವಿವರಣೆ ನೀಡಿದರು.
ಎತ್ತಿನಹೊಳೆ ಯೋಜನೆ ಆಗುವುದಿಲ್ಲ, ವೈಜ್ಞಾನಿಕವಾಗಿ ನೀರು ಬರುವುದಿಲ್ಲ. ನಾವು ಅಧಿಕಾರಕ್ಕೆ ಬಂದರೆ ಯೋಜನೆ ನಿಲ್ಲಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ. ಯಾರೇ ಈ ರೀತಿ ಹೇಳಿದರೂ ಅದನ್ನು ನಂಬಬೇಡಿ ಎಂದು ಜೆಡಿಎಸ್ ನಾಯಕರ ವಿರುದ್ಧ ಹರಿಹೈದರು.
ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಎತ್ತಿನಹೊಳೆಯ ನೀರಿನ ಲಭ್ಯತೆಯನ್ನು ಐಐಎಸ್ಸಿಯ ತಜ್ಞರಾದ ರಾಮ್ ಪ್ರಸಾದ್, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೈಡ್ರಾಲಜಿ, ಕರ್ನಾಟಕ ಪವರ್ ಕಾರ್ಪೊರೇಷನ್, ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ನೀಡಿರುವ ವರದಿಗಳು ದೃಢೀಕರಿಸಿವೆ. ಈ ಎಲ್ಲ ವರದಿಗಳನ್ನು ಕೇಂದ್ರ ಜಲ ಆಯೋಗ ಅನುಮೋದಿಸಿದೆ. ಇಷ್ಟು ಆದ ಮೇಲೆಯೂ ಯೋಜನೆ ವಿರೋಧಿಸುವುದು ರಾಜಕೀಯ ಎಂದು ವಿರೋಧಿಗಳನ್ನು ಅಣುಕಿಸಿದರು.
ಯಾರು ಎಷ್ಟೇ ವಿರೋಧ ಮಾಡಿದರೂ ಈ ಯೋಜನೆ ಕಾರ್ಯಗತ ಮಾಡುತ್ತೇವೆ. ಏಳು ಜಿಲ್ಲೆಗೆ ನೀರು ಕೊಡುತ್ತೇವೆ. ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರುಗಳಲ್ಲಿ ನೀರಿಗೆ ಹಾಹಾಕಾರವಿದೆ. ಅಲ್ಲಿ ನದಿಗಳಿಲ್ಲ. ಅಲ್ಲಿಯ ಜನರ ಬವಣೆ ನಿವಾರಿಸುವುದು ಸರ್ಕಾರದ ಕರ್ತವ್ಯ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಹೇಳಿದರು.