ಚಾಮರಾಜನಗರ: ಸಗಣಿಗೆ ಕೃಷಿ ಚಟುವಟಿಕೆಯಲ್ಲಿ ವಿಶೇಷ ಮಹತ್ವ, ಧಾರ್ಮಿಕವಾಗಿಯೂ ಪವಿತ್ರ ಸ್ಥಾನವಿದೆ. ಅದೇ ಸಗಣಿಯನ್ನು ಕೈಯಲ್ಲಿ ಹಿಡಿಯುವುದೆಂದರೆ ಕೆಲವರಿಗೆ ಇರಿಸುಮುರಿಸು. ಆದರೆ, ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ನಡೆದ 'ಗೊರೆ ಹಬ್ಬ'ದಲ್ಲಿ ಸಗಣಿಯ ಗುಡ್ಡದಲ್ಲೇ ಹೊರಲಾಡಿ, ಸಗಣಿ ಉಂಡೆಗಳನ್ನು ಎರಚಾಡಿಕೊಳ್ಳುತ್ತಾ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ : UK Prime Minister: ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ
ಗ್ರಾಮದಲ್ಲಿ ಸಹಬಾಳ್ವೆ ಬೆಸೆಯುವ ಈ ಗೊರೆಹಬ್ಬವನ್ನು ಕನ್ನಡಿಗರೇ ಹೆಚ್ಚಿರುವ ಗುಮ್ಮಟಾಪುರದಲ್ಲಿ ಹಲವಾರು ತಲೆಮಾರುಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿ ಮಾರನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬ ನೋಡಲು ಸಾವಿರಾರು ಮಂದಿ ಬರುತ್ತಾರೆ. ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ. ಇಂದು ಮಧ್ಯಾಹ್ನ 3ಕ್ಕೆ ಪ್ರಾರಂಭವಾದ ಈ ಹಬ್ಬ ಸುಮಾರು ಒಂದೂವರೆ ತಾಸುಗಳ ಕಾಲ ನಡೆದು ನೂರಾರು ಯುವಕರು-ಹಿರಿಯರು ದಪ್ಪ ದಪ್ಪ ಸಗಣಿ ಉಂಡೆ ಕಟ್ಟಿ ಪರಸ್ಪರ ಹೊಡೆದಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ಹಬ್ಬದ ಹಿನ್ನೆಲೆ ಏನು..?
ಗ್ರಾಮದ ಬೀರೇಶ್ವರ ಸ್ವಾಮಿಯ ಇಷ್ಟಾರ್ಥವಾಗಿ ಗೊರೆಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿರಿಯರ ಪ್ರಕಾರ, ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ದೇವರ ಗುಡ್ಡನೊಬ್ಬ ಬಂದಿದ್ದ. ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತ್ತಂತೆ. ಆಗ ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ ಕಾಣಿಸಿಕೊಂಡು ದೀಪಾವಳಿ ಹಬ್ಬವಾದ ಮರುದಿನವೇ ಗೊರೆಹಬ್ಬ ಮಾಡುವಂತೆ ಹೇಳಿತು ಎಂಬ ಪ್ರತೀತಿ ಇದೆ. ಅಲ್ಲದೆ, ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ದೇವಸ್ಥಾನ ಕಟ್ಟಿ ಗೊರೆಹಬ್ಬವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ : PM Kisan ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರಿಗೂ ಸಿಗುತ್ತಾ 6,000 ರೂ.! ನಿಯಮ ಏನು ಹೇಳುತ್ತೆ?
ಗೊರೆ ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯನ್ನು ತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಗಣಿ ಎರಚಾಡುವ ಬೀರಪ್ಪನ ಗುಡಿವರೆಗೆ ಕರೆ ತರಲಾಗುತ್ತದೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿ ಎಲ್ಲರೂ ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹಿಯ್ಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಸಂಭ್ರಮಿಸಿ ಕೇಕೆ ಹಾಕುವುದು ನಡೆದುಕೊಂಡ ಬಂದ ರೂಢಿ. ಹಿರಿಯರ ಸಂಪ್ರದಾಯದಂತೆ ಪ್ರತೀವರ್ಷ ಗೊರೆ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಹಬ್ಬದಲ್ಲಿ ಜಾತಿಬೇಧವಿಲ್ಲದೇ ಸಹೋದರತೆ ಮರೆಯುತ್ತಾ, ಸಹಬಾಳ್ವೆ ನಡೆಸುತ್ತಾ, ಹಿಂದಿನ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗೊರೆಹಬ್ಬ ಆಚರಿಸಿ ಬೀರೇಶ್ವರನನ್ನು ಬೇಡಿಕೊಂಡರೆ ಒಳಿತಾಗಲಿದೆ ಎಂಬುದು ನಂಬಿಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.