ಬೆಂಗಳೂರು: ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಐಟಿ ದಾಳಿ ವೇಳೆ ಸಾಕ್ಷಿ ನಾಶಕ್ಕೆ ಯತ್ನಿಸಿದ್ದರು ಎಂಬ ಐಟಿ ಅಧಿಕಾರಿಗಳ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಆರ್ಥಿಕ ಅಪರಾಧಗಳ ನ್ಯಾಯಮೂರ್ತಿ ಮೋಹನ್ ಶಾಂತಪ್ಪ ಆಳ್ವಾ, ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದ್ದಾರೆ.
ಡಿಕೆಶಿ ವಿರುದ್ಧ ಐಪಿಸಿ ಸೆಕ್ಷನ್ 201, 204ರ ಅಡಿ ಸಾಕ್ಷ್ಯನಾಶ ಪ್ರಕರಣ ಹಾಗೂ ಐಟಿ ಕಾಯ್ದೆ 276 ಸಿ1 ಉದ್ದೇಶ ಪೂರ್ವಕ ಆದಾಯ ತೆರಿಗೆ ವಂಚನೆ ಅಡಿಯಲ್ಲಿ ಎರಡು ಎಫ್ಐಆರ್ ದಾಖಲು ಮಾಡಲು ನ್ಯಾಯಾಲಯ ಸಿಬಿಐ ಪೊಲೀಸರಿಗೆ ಸೂಚನೆ ನೀಡಿದೆ. ಸದ್ಯ ಡಿಕೆಶಿ ಜಾಮೀನಿಗಾಗಿ ಯತ್ನಿಸುತ್ತಿದ್ದು, ಜಾಮೀನು ಸಿಗದೆ ಇದ್ದಲ್ಲಿ ಜೈಲು ಸೇರುವ ಸಾಧ್ಯತೆ ಇದೆ.
2017ರಲ್ಲಿ ಈಗಲ್ ಟನ್ ರೆಸಾರ್ಟ್ ನಲ್ಲಿ ಐಟಿ ದಾಳಿ ವೇಳೆ ಮಹತ್ವದ ದಾಖಲೆಗಳಿರುವ ಪೇಪರ್ ಗಳನ್ನು ಡಿಕೆಶಿ ಹರಿದುಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ಅಧಿಕಾರಿಗಳ ಮುಂದೆ ಪೇಪರ್ ಹರಿದು ಹಾಕಿದ್ದ ಡಿಕೆಶಿಯಿಂದ ತಕ್ಷಣ ಪೇಪರ್ ಕಿತ್ತು ಪರಿಶೀಲನೆ ಮಾಡಿದ್ದ ಐಟಿ ಅಧಿಕಾರಿಗಳಿಗೆ ಅದರಲ್ಲಿ 18 ಕೋಟಿ ನನಗೆ ಬರಬೇಕು ಎಂದು ಬರೆದಿದ್ದ ಮಹತ್ವದ ಮಾಹಿತಿ ದೊರೆತಿತ್ತು. ಡಿ.ಕೆ.ಶಿವಕುಮಾರ್ ಹರಿದಿದ್ದ ಪೇಪರ್ ನಲ್ಲಿ ಸಿಕ್ಕಿರುವ ಪ್ರಮುಖ ಅಂಶಗಳ ಆಧಾರದ ಮೇಲೆ ಪ್ರಾಸಿಕ್ಯೂಶನ್ ಗೆ ಅನುಮತಿ ಕೋರಲಾಗಿತ್ತು.