ಮಹಿಳಾ ಸಾಂತ್ವನ ಕೇಂದ್ರಗಳನ್ನುಸರ್ಕಾರ ಬಂದ್ ಮಾಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Sep 6, 2021, 04:07 PM IST
  • ರಾಜ್ಯದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಬಂದ್ ಮಾಡಿರುವುದು ಅಕ್ಷಮ್ಯ
  • ಆರ್ಥಿಕ ಕೊರತೆಯ ನೆಪವೊಡ್ಡಿ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಟಿರುವುದು ಮಹಿಳಾ ವಿರೋಧಿ ಕ್ರಮ
  • ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು
ಮಹಿಳಾ ಸಾಂತ್ವನ ಕೇಂದ್ರಗಳನ್ನುಸರ್ಕಾರ ಬಂದ್ ಮಾಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ  title=
ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಆಕ್ರೋಶ (Photo Courtesy: Twitter/@Zee News)

ಬೆಂಗಳೂರು: ರಾಜ್ಯದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರ(Womens Relief Centers)ಗಳನ್ನು ಸರ್ಕಾರ ಬಂದ್ ಮಾಡಿರುವುದು ಅಕ್ಷಮ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯನವರು, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವುದು ರಾಜ್ಯ ಸರ್ಕಾರದ ಮಹಿಳಾ ವಿರೋಧಿ ಕ್ರಮವಾಗಿದೆ’ ಎಂದು ಸಿದ್ದರಾಮಯ್ಯ(Siddaramaiah) ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಸಾವು ಖಚಿತ, ಶವಸಂಸ್ಕಾರ ಉಚಿತ!: ಕಾಂಗ್ರೆಸ್ ವ್ಯಂಗ್ಯ

‘ನೊಂದ ಮತ್ತು ತುರ್ತು ಅಗತ್ಯವಿರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿ ಹಲವು ರೀತಿಯ ಸಹಾಯ ಒಂದೇ ಸೂರಿನಡಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು’ ಇದೀಗ ಅವುಗಳನ್ನು ಬಂದ್ ಮಾಡಿರುವ ಸರ್ಕಾರ ನಿರ್ಧಾರ ಸರಿಯಲ್ಲವೆಂದು ಅವರು ಹೇಳಿದ್ದಾರೆ.  

‘ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಸಾಂತ್ವನ ಕೇಂದ್ರಗಳ ಆಪ್ತ ಸಮಾಲೋಚಕರಿಂದ ಇದುವರೆಗೂ ಸಹಸ್ರಾರು ಮಹಿಳೆಯರು ಸಾಂತ್ವನ ಮತ್ತು ಭರವಸೆ ಪಡೆದುಕೊಂಡಿದ್ದಾರೆ. ಈ ಕೇಂದ್ರಗಳು ನೊಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಆತ್ಮಹತ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದವು. ಈಗ ಕೋವಿಡ್(COVID-19) ನೆಪದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ಹೇಳಿ 71 ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜಧಾನಿ ಬೆಂಗಳೂರು ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ನಡೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೀಗಿದ್ದೂ ಬೆಂಗಳೂರು ನಗರದಲ್ಲಿದ್ದ ಎಲ್ಲಾ ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಿರುವುದು ಅಕ್ಷಮ್ಯ’ ಅಂತಾ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ವರದಿ ಒಪ್ಪಿಕೊಳ್ಳದ ಬಿಜೆಪಿ ನಾಯಕರಿಂದ ಕುಂಟುನೆಪ: ಸಿದ್ದರಾಮಯ್ಯ

‘ತಕ್ಷಣವೇ ಬಂದ್ ಆಗಿರುವ ಎಲ್ಲಾ ಸಾಂತ್ವನ ಕೇಂದ್ರಗಳನ್ನು ಆರಂಭಿಸಬೇಕು. ಉಳಿದ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು’ ಅಂತಾ ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News