ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕಕ್ಕೆ ಹೋಗಲು ಬಿಜೆಪಿ ನಾಯಕರ ಅನುಮತಿ ಪಡೆಯಬೇಕಿತ್ತೇ? ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.
ಬಿಜೆಪಿ ನಾಯಕರು ಸಿಎಂ ಅಮೇರಿಕಾ ಭೇಟಿಯನ್ನು ಟೀಕಿಸಿದ ಬೆನ್ನಲ್ಲೇ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೆಚ್.ಡಿ.ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋಗಲು ಯಡಿಯೂರಪ್ಪ, ಈಶ್ವರಪ್ಪ ಅವರ ಅನುಮತಿ ತೆಗೆದುಕೊಂಡು ಹೋಗಬೇಕಿತ್ತಾ? ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಸಿಎಂ ಹೋಗಿದ್ದಾರೆ. ಯಾರ ದುಡ್ಡಿನಿಂದಲೂ ಮುಖ್ಯಮಂತ್ರಿಗಳು ವಿದೇಶಕ್ಕೆ ಹೋಗಿಲ್ಲ. ಅಷ್ಟಕ್ಕೂ ಆ ದೇವಾಲಯ ನಿರ್ಮಾಣಕ್ಕೆ ಇಲ್ಲಿಯವರ್ಯಾರೂ ಹಣ ಕೊಟ್ಟಿಲ್ಲ. ಅಲ್ಲಿನ ಒಕ್ಕಲಿಗರೇ ಸೇರಿ 20 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡ್ತಿದ್ದಾರೆ. ಅದಕ್ಕೂ ಹೋಗಬಾರದು ಅಂದ್ರೆ ಹೇಗೆ? ಬೆಳಗ್ಗೆಯಿಂದ ಸಂಜೆ ತನಕ ಇದನ್ನೇ ಟೀಕಿಸೋದಂದ್ರೆ ತಮಾಷೆನಾ?' ಎಂದು ದೇವೇಗೌಡರು ಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕದ ನ್ಯೂಜೆರ್ಸಿಯ ಸೋಮರ್ಸೆಟ್ ಎಂಬಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ 20 ಎಕರೆ ಭೂಮಿಯಲ್ಲಿ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸವನ್ನು ಟೀಕಿಸಿದ್ದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, "ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ. ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ" ಎಂದು ಟ್ವೀಟ್ ಮಾಡಿದ್ದರು.
ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ.
ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ.ಯಾರಾದರೂ ಪ್ರಶ್ನಿಸಿದರೆ ನೀವೇನು ನಂಗೆ ವೋಟ್ ಹಾಕಿದೀರಾ ಅಂತ ಪ್ರಶ್ನಿಸೋ ಮುಖ್ಯಮಂತ್ರಿಗಳೇ, ನಿಮ್ಮ ಪಾರ್ಟಿ ಹೆಸರನ್ನು ಜಾತ್ಯತೀತ ಜನತಾದಳದ ಬದಲು ಪ್ರಶ್ನಾತೀತ ಜನತಾದಳ ಅಂತ ಇಟ್ಟುಬಿಡಿ.@BJP4Karnataka @BSYBJP
— K S Eshwarappa (@ikseshwarappa) June 29, 2019
ಸಿಎಂ ಅಮೇರಿಕ ಪ್ರವಾಸದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ಖರ್ಚಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ.