ರಾಜ್ಯದ ಸಚಿವ ಸಂಪುಟ ನಿರ್ಣಯಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಟೀಕೆ

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ನೋಡಿದರೆ ಆಡಳಿತಾರೂಢ ಪಕ್ಷವು  ಚುನಾವಣೆಗೆ ಹೋಗುವ ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

Written by - Prashobh Devanahalli | Edited by - Manjunath N | Last Updated : Jul 23, 2022, 12:44 AM IST
  • ಸಂಪುಟ ಸಭೆಯ ಮೂಲಕ ರಾಜ್ಯಕ್ಕೆ ಚುನಾವಣೆ ಸಂದೇಶವನ್ನು ಸರಕಾರ ನೀಡಿದ್ದು,
  • ಚುನಾವಣೆ ಯಾವುದೇ ಕ್ಷಣದಲ್ಲಿ ಬಂದರೂ ನಮ್ಮ ಪಕ್ಷ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.
ರಾಜ್ಯದ ಸಚಿವ ಸಂಪುಟ ನಿರ್ಣಯಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಟೀಕೆ title=

ಬೆಂಗಳೂರು: ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ನೋಡಿದರೆ ಆಡಳಿತಾರೂಢ ಪಕ್ಷವು  ಚುನಾವಣೆಗೆ ಹೋಗುವ ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಂಪುಟ ಸಭೆಯ ಮೂಲಕ ರಾಜ್ಯಕ್ಕೆ ಚುನಾವಣೆ ಸಂದೇಶವನ್ನು ಸರಕಾರ ನೀಡಿದ್ದು, ಚುನಾವಣೆ ಯಾವುದೇ ಕ್ಷಣದಲ್ಲಿ ಬಂದರೂ ನಮ್ಮ ಪಕ್ಷ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾ ಮಿತ್ರ ಸಮಾವೇಶದ ಸಿದ್ಧತೆಗೆ ಸಂಬಂಧಿಸಿ ಬೆಂಗಳೂರು ನಗರ ಜೆಡಿಎಸ್ ಮುಖಂಡರ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್  ಹೊತ್ತಿಗೆ  ಚುನಾವಣೆಗೆ ಹೋಗುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು, ಅದಕ್ಕೆ ಇದು ಪೂರಕ ಸಂಪುಟ ಸಭೆ ಇದು ಅನಿಸುತ್ತದೆ ಎಂದರು.

ಹಾಸನದಲ್ಲಿ ಲೇಔಟ್ ಬಗ್ಗೆ ಅನುಮಾನ:

ಹಾಸನದಲ್ಲಿ ಒಂದು ಬಡಾವಣೆ ನಿರ್ಮಾಣಕ್ಕೆ ಸುಮಾರು ಒಂದೂವರೆ ಸಾವಿರ ಕೋಟಿ ರೂ. ಹಣ ಇಡಲು ಕ್ಯಾಬಿನೆಟ್  ತೀರ್ಮಾನ ಮಾಡಿದೆ. ಮುಂದೆ ಇದೇ ಒಂದು ದೊಡ್ಡ ಹಗರಣ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಂದು ಅವರು ಹೇಳಿದರು.

 ಆ ನಗರದ ಶಾಸಕರು ಚುನಾವಣೆಗೆ ಮೊದಲು ಹಣ ಲೂಟಿ ಮಾಡಲು ಅವಕಾಶ ಕೊಟ್ಟಂತೆಯೇ ಇದೆ. ಇದು ಅಭಿವೃದ್ಧಿ ವಿಚಾರವಾಗಿ ಅಥವಾ ಹಾಸನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಇಲ್ಲ. ಬದಲಾಗಿ ಚುನಾವಣೆ ವಿಚಾರವಾಗಿ ಮಾಡಲಾಗುತ್ತಿದೆ ಅಷ್ಟೆ. ಕೆಲವು ವರ್ಗ ಸಮಾಜ ಓಲೈಸುವುದು ಆಗುತ್ತಿದೆ. ಸಿದ್ದರಾಮಯ್ಯ ಅವರ ಸರಕಾರದ ಕಾಲದಲ್ಲಿಯೂ ಇದೇ ರೀತಿ ಆಗಿತ್ತು. ಈಗಲೂ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: ಪೃಥ್ವಿ ಅಂಬರ್ ‘ದೂರದರ್ಶನ’ ಅಂಗಳದಿಂದ ಬಂತು ಫಸ್ಟ್ ಪೋಸ್ಟರ್
 
ಮಕ್ಕಳಿಗೆ ಸೈಕಲ್; ಅದು ನನ್ನ ನಿರ್ಧಾರ:

ಮಕ್ಕಳಿಗೆ ಶರ್ಟ್ ಹಾಗೂ ಶೂ ಕೊಡಲು ಸಚಿವ ಸಂಪುಟ ಒಪ್ಪಿಗೆ ಕೊಡಲಾಗಿದೆ. ಆದರೆ ಗುಣಾತ್ಮಕ ಶೂ ಕೊಡ್ತಾರೋ ಗೊತ್ತಿಲ್ಲ. ಸೈಕಲ್ ಕಥೆ ಏನಾಯಿತು? ಸೈಕಲ್ ವಿಚಾರ ನಮ್ಮ ಕಾಲದ್ದು. ಆಗ ನಮ್ಮ ಹೆಸರೇ ಬರಲಿಲ್ಲ, ಯಡಿಯೂರಪ್ಪ ಕೊಟ್ಟಿದ್ದು ಅಂತಿರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು ಹೆಚ್ ಡಿಕೆ.

ಬಸ್ ಗಳ ವ್ಯವಸ್ಥೆ ಕೂಡ ಆಗಿಲ್ಲ ಇತ್ತ ಸೈಕಲ್ ಕೂಡ ಕೊಡ್ತಾ ಇಲ್ಲ. ಮಕ್ಕಳು ಹೇಗೆ ಶಾಲೆಗೆ ಬರುತ್ತಾರೆ ಮಾರಕವಾದ ತೀರ್ಮಾನ ನಿಮ್ಮದು. ಇದನ್ನು ನಾನು ಖಂಡಿಸುತ್ತೇನೆ. ಮಕ್ಕಳಿಗೆ ಸೈಕಲ್ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದರು. 

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಗನಿಗೆ ಕ್ಷೇತ್ರ ಬಿಟ್ಟು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಬಿಜೆಪಿ ಪಕ್ಷದಲ್ಲಿ ಬಿಎಸ್ ವೈ ಪುತ್ರರಿಗೆ ಚುನಾವಣೆಗೆ ನಿಲ್ಲಲು ಒತ್ತಡ ಹಾಕಿದ್ದಾರೆ ಕಾರ್ಯಕರ್ತರು. ಅವರಿಗೆ ಚುನಾವಣೆ ಎದುರಿಸುವ ಶಕ್ತಿ ಇದೆ. ಅವರ ಪಕ್ಷದ ಕಾರ್ಯಕರ್ತರಿಗೆ ಸಮಸ್ಯೆ ಆಗಬಾರದು ಅಂತ ಹೀಗೆ ಹೇಳಿರಬೇಕು ಎಂದರು.

ಜಾತಿ ಅಸ್ತ್ರ ಬಳಸುವುದು ಸಹಜ:

ಎಲ್ಲಾ ಪಕ್ಷದಲ್ಲೂ ಅವರದ್ದೇ ಆದ ಜಾತಿ ಅಸ್ತ್ತ ಬಳಸುತ್ತಿರುವುದು ಸಹಜ. ಇದಕ್ಕೆ ಮಹತ್ವ ಕೊಡಬೇಕಿಲ್ಲ. ಒಕ್ಕಲಿಗ ಸಮಾಜ ಎಂದೂ ಸಹ ವ್ಯಾಮೋಹಕ್ಕೆ ಒಳಗಾಗದೇ ಪ್ರಾಮಾಣಿಕರಿಗೆ ಬೆಂಬಲಿಸುತ್ತದೆ. ಮೊದಲಿನಿಂದಲೂ ಹೀಗೆ ಮಾಡುತ್ತಾ ಬಂದಿದ್ದಾರೆ. ಈಗಲೂ ನನಗೆ ನಂಬಿಕೆ ಇದೆ
ಜಾತಿ ಅಸ್ತ್ರ ಉಪಯೋಗ ಮಾಡಿದರು ಕೂಡ ಎಲ್ಲರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮಹತ್ವ ಕೊಡಬೇಕಿಲ್ಲ ಎಂದು ಅವರು ಹೇಳಿದರು.

ಪ್ರತಿಭಟನೆಯಿಂದ ಅನುಕಂಪ ಗಿಟ್ಟಿಸಲಾಗದು:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದ ವಿಚಾರಕ್ಕೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಹೆಚ್ .ಡಿ.ಕುಮಾರಸ್ವಾಮಿ ಅವರು, ಪ್ರತಿಭಟನೆಯಿಂದ ಜನರ ಅನುಕಂಪ ಗಿಟ್ಟಿಸಲು ಸಾಧ್ಯವಿಲ್ಲ ಎಂದರು.

'ಎ ಫೀಸ್ಟ್ ಆಫ್ ವಲ್ಚರ್ಸ್' ಪುಸ್ತಕದ ಕೆಲ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ ಅವರು, ಈ ಪುಸ್ತಕದಲ್ಲಿ ಕೆಲ ಆಘಾತಕಾರಿ ಸಂಗತಿಗಳನ್ನು ಬರೆಯಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ, ಒಂದು ಪ್ರಭಾವೀ ಖಾಸಗಿ ಕಂಪನಿ 15 ಸಾವಿರ ಕೋಟಿ ರೂಪಾಯಿ ಹಣ ದಂಡ ಕಟ್ಟಬೇಕಿತ್ತು. ಆದರೆ, ಅದೇ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಮನ್ನಾ ಮಾಡಲಾಯಿತು. ಅಂಥ ವಿಷಯಗಳ ಬಗ್ಗೆ ಪ್ರತಿಭಟನೆ ಮಾಡಬೇಕು. ಆದರೆ, ಇವರು ಈಗ ಇಲ್ಲಿ ಕಾರು ಸುಟ್ಟು ಹೋರಾಟ ಮಾಡುತ್ತಿದ್ದಾರೆ. ಈ ಪುಸ್ತಕವನ್ನು ಒಮ್ಮೆ ಓದಿದರೆ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ದೇಶದ ಸಂಪತ್ತು ಲೂಟಿ ಮಾಡಿದವರಿಗೆ ರಕ್ಷಣೆ ಮಾಡಿದ್ದರ ಬಗ್ಗೆಯೂ ಈ ಪುಸ್ತಕದಲ್ಲಿ ಆಘಾತಕಾರಿ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಈ ಪುಸ್ತದಲ್ಲಿರುವ ವಿಷಯ ಇಟ್ಟುಕೊಂಡು ಸಂಸತ್ತಿನಲ್ಲಿ ಹೋರಾಟ ಮಾಡಬೇಕು ಎಂದು ಮಾರ್ಮಿಕವಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದರು.

ಹೋರಾಟ ಮಾಡಲು ಬೇಕಾದಷ್ಟು ವಿಚಾರಗಳು ಇವೆ. ಅನೇಕ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ ಇದಾಗಿದೆ. ಈ ಪುಸ್ತಕ ಓದಿ ಸತ್ಯ ತಿಳಿದುಕೊಳ್ಳಿ. ಯಾರ್ಯಾರ ಯೋಗ್ಯತೆ ಏನಿದೆ? ಎಷ್ಟು ಸಂಪತ್ತು ಲೂಟಿ ಆಗ್ತಿದೆ ಅಂತ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು ಕುಮಾರಸ್ವಾಮಿ ಅವರು.

ಇವತ್ತು ರಾಜ್ಯ ಮತ್ತು ದೇಶದಲ್ಲಿ ಹಲವಾರು ಬೆಳವಣಿಗೆಗಳು ಆಗುತ್ತಿವೆ. ನಿನ್ನೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನಾ ಪ್ರತಿಭಟನೆ ಮಾಡಿದೆ. ಅಧ್ಯಕ್ಷರಿಕೆ ಕೊಟ್ಟ ಇಡಿ ನೋಟೀಸ್ ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ ಮಾತುಗಳನ್ನು ಗಮನಿಸಿದೆ. ನೆಹರು ಕುಟುಂಬದ ತ್ಯಾಗದ ಬಗ್ಗೆ ಅವರು ಹೇಳಿದ್ದಾರೆ. ದೇಶಕ್ಕೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ನಿನ್ನೆಯ ದಿನ ಭಾಷಣದ ವೇಳೆ ಆ ಕುಟುಂಬದ ತ್ಯಾಗ ಏನಿದೆ ಅದನ್ನು ನೋಡಿ ಅವರ ಕುಟುಂಬ ಪರ ಇರಬೇಕು. ಮೂರ್ನಾಲ್ಕು ತಲೆ ಮಾರಿಗೆ ಆಗವಷ್ಟು ಮಾಡಿಕೊಂಡಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ನೆಹರು ಕುಟುಂಬದ ತ್ಯಾಗಕ್ಕೆ ನನ್ನ ಸಹಮತ ಇದೆ. ಬಿಜೆಪಿ ನಾಯಕರ ಶರವೇಗದ ಪ್ರತಿಕ್ರಿಯೆ ನೋಡಿದ್ದೇನೆ. ಇವರ ಹಣೆಬರಹ ಏನು ಎನ್ನುವುದೂ ಜನರಿಗೆ ಗೊತ್ತಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!

ಹಿಂದೆ ನನ್ನ ಮೇಲೆ ಕೂಡ ನಾಲ್ಕು ಕೇಸ್ ಗಳನ್ನು ಹಾಕಲಾಗಿತ್ತು. ನನಗೂ ಅದರ ಅನುಭವ ಇದೆ. ನನ್ನನ್ನೂ ಒಂದು ದಿನವಾ ಜೈಲಿನಲ್ಲಿ ಹಾಕಿಸಬೇಕು ಅಂತಾ ಯೋಚಿಸಿದ್ರು. ಅವರು ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ. ಕೇಳಿದ ದಾಖಲೆಗಳನ್ನು ಕೊಟ್ಟರೆ ಆಯ್ತು‌. ಅದು ಬಿಟ್ಟು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾ.? ಎಂದು ಕಾಂಗ್ರೆಸ್ ಪ್ರತಿಭಟನೆಗೆ ಹೆಚ್ ಡಿಕೆ  ವ್ಯಂಗ್ಯವಾಡಿದರು. 

ಚುನಾವಣೆಗೆ ತಯಾರಿ:

ಚುನಾವಣೆಗೆ ತಾವು ಕೂಡ ತಯಾರಿ ಮಾಡುತ್ತಿದ್ದೇವೆ. ಪಂಚರತ್ನ ಯೋಜನೆ ರಥಯಾತ್ರೆ ಸಿದ್ದತೆ ಮಾಡುತ್ತಿದ್ದೇವೆ. ಆ ಕಾರ್ಯಕ್ರಮವೇ ನಮ್ಮ ಜೀವಾಳ. ಈ ಕಾರ್ಯಕ್ರಮದ ಮೂಲಕ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಜನರ ಬಳಿ ಹೋಗುತ್ತೇನೆ. ಪ್ರತಿ ಮನೆಗೂ ತಲುಪಿಸುತ್ತೇನೆ ಎಂದು ಹೇಳಿದರು. 

 

 

Trending News