ಬೆಂಗಳೂರು: ಮೈತ್ರಿ ಪಕ್ಷದ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ವಿರುದ್ಧವಾಗಿ ತುಮಕೂರಿನ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ತುಮಕೂರಿನ ಹಾಲಿ ಸಂಸದ ಮುದ್ದಹನುಮೇಗೌಡರು ನಾಮಪತ್ರ ವಾಪಾಸ್ ಪಡೆಯುವ ಭರವಸೆಯಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಸಂಸದ ಮುದ್ದಹನುಮೇಗೌಡರ ನಿವಾಸಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮನವೊಲಿಕೆಗೆ ಯತ್ನ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಮುದ್ದಹನುಮೇಗೌಡರು ಅವರ ಬೆಂಬಲಿಗರು ಹಾಗೂ ಮುಖಂಡರ ಅಭಿಪ್ರಾಯದಂತೆ ನಾಮಪತ್ರ ಸಲ್ಲಿಸಿದ್ದರು. ದೇಶದಲ್ಲಿ ಬಿಜೆಪಿಯನ್ನು ಸೋಲಿಸಬೇಕಿದ್ದರೆ ಮೈತ್ರಿ ಅನಿವಾರ್ಯ. ವರಿಷ್ಠರ ನಿರ್ಧಾರದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಮುದ್ದಹನುಮೇಗೌಡರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದು, ಜನರ ಪ್ರೀತಿ ಸಂಪಾದಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದರೆ ಖಂಡಿತ ಗೆಲ್ಲುವ ವಿಶ್ವಾಸವಿತ್ತು. ಆದರೆ, ಹೈಕಮಾಂಡ್‌ನ ನಿರ್ಧಾರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಹೀಗಾಗಿ ನಾನು ಹಾಗೂ ದಿನೇಶ್ ಗುಂಡೂರಾವ್ ಅವರ ಮನವೊಲಿಕೆಗೆ ಪ್ರಯತ್ನ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಪೂರಕವಾಗಿ ಸ್ಮಂದಿಸಿರುವ ಅವರು, ನಾಮಪತ್ರ ವಾಪಾಸ್ ತೆಗೆದುಕೊಳ್ಳುವ ವಿಶ್ವಾಸ ನೀಡಿದ್ದಾರೆ ಎಂದರು.
ಮುದ್ದಹನುಮೇಗೌಡರ ರಾಜಕೀಯ ಭವಿಷ್ಯಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಮಾತಿಗೆ ಗೌರವ ನೀಡಿ ವಾಪಾಸ್ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆದುಕೊಳ್ಳಬಹುದು. ಈ ಸಂಬಂಧ ಮುಖಂಡರೊಂದಿಗೆ ಚರ್ಚೆ ಮಾಡಿ ಇಂದೇ ತಮ್ಮ ನಿರ್ಧಾರ ತಿಳಿಸುವ ಭರವಸೆಯನ್ನು ಮುದ್ದ ಹನುಮೇಗೌಡರು ನೀಡಿದ್ದಾರೆ ಎಂದು ಪರಮೇಶ್ವರ ತಿಳಿಸಿದರು.