ಮೇ 3ರಂದು ನೃಪತುಂಗ ವಿವಿ ಉದ್ಘಾಟನೆ: ಕೇಂದ್ರ ಸಚಿವ ಅಮಿತ್ ಶಾ ಆಗಮನ

ನೃಪತುಂಗ ವಿವಿ ಉದ್ಘಾಟನೆ ಕಾರ್ಯಕ್ರಮವನ್ನು ಚಾರಿತ್ರಿಕ ಸಮಾರಂಭವನ್ನಾಗಿ ಮಾಡಿ, ಸ್ಮರಣೀಯಗೊಳಿಸಲಾಗುವುದು. ಸರಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ಸಾವಿರ ಜನ  ಭಾಗವಹಿಸಲಿದ್ದಾರೆ.  

Written by - Prashobh Devanahalli | Last Updated : May 1, 2022, 12:15 PM IST
  • ಮೇ 3ರಂದು ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನೆ
  • ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ
  • ಕೇಂದ್ರ ಸಚಿವ ಅಮಿತ್ ಶಾ ಆಗಮನ
ಮೇ 3ರಂದು ನೃಪತುಂಗ ವಿವಿ ಉದ್ಘಾಟನೆ: ಕೇಂದ್ರ ಸಚಿವ ಅಮಿತ್ ಶಾ ಆಗಮನ  title=
Nrupatunga University

ಬೆಂಗಳೂರು: ಕೇಂದ್ರ ಸರಕಾರದ `ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ’ದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯವನ್ನು ಮೇ 3ರ ಮಂಗಳವಾರದಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಯ ಶೈಕ್ಷಣಿಕ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಮೇ 3ರ ಕಾರ್ಯಕ್ರಮಕ್ಕೆ ನಡೆದಿರುವ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿದ ಅವರು, `ನೃಪತುಂಗ ವಿವಿ ಉದ್ಘಾಟನೆ ಕಾರ್ಯಕ್ರಮವನ್ನು ಚಾರಿತ್ರಿಕ ಸಮಾರಂಭವನ್ನಾಗಿ ಮಾಡಿ, ಸ್ಮರಣೀಯಗೊಳಿಸಲಾಗುವುದು. ಸರಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 5 ಸಾವಿರ ಜನ  ಭಾಗವಹಿಸಲಿದ್ದಾರೆ’ ಎಂದರು. 

ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 100 ವರ್ಷಗಳ ಹಿಂದೆ (1921ರಲ್ಲಿ) ಸ್ಥಾಪಿಸಿದ ಈ ಸಂಸ್ಥೆಯು ಹಂತಹಂತವಾಗಿ ಬೆಳೆದು ಬಂದಿದೆ. ಈಗ ಪೂರ್ಣ ವಿಶ್ವವಿದ್ಯಾಲಯದ ರೂಪವನ್ನು ಪಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ಶೈಕ್ಷಣಿಕ ಕ್ರಾಂತಿ ಮಾಡಲು ಸಂಕಲ್ಪ ಮಾಡಿರುವುದರ ಫಲವಿದು’ ಎಂದು ಅವರು ಹೇಳಿದರು. 

ನೃಪತುಂಗ ವಿವಿಯಲ್ಲಿ ಬಿ.ಎಸ್ಸಿ ಮತ್ತು ಬಿಸಿಎ ಪದವಿಗಳಡಿ 24 ಕೋರ್ಸುಗಳು, 7 ಸ್ನಾತಕೋತ್ತರ ಕೋರ್ಸ್‌ಗಳು ಮತ್ತು 3 ಸಂಶೋಧನಾ ಕೇಂದ್ರಗಳು ಇರಲಿವೆ. ಈ ವಿವಿಗೆ ಕೇಂದ್ರ ಸರ್ಕಾರವು 55 ಕೋಟಿ ರೂ.ಗಳಷ್ಟು ಅನುದಾನವನ್ನು ಮಂಜೂರು ಮಾಡಿದೆ. ಈ ಮೂಲಕ ನೃಪತುಂಗ ವಿವಿಯನ್ನು ಜಾಗತಿಕ ಗುಣಮಟ್ಟದ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು. 

ಭಾರತವನ್ನು ಜ್ಞಾನದ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಪಠ್ಯದ ಕಲಿಕೆಯ ಜತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯ ಗಮನ ಕೊಡಲಾಗಿದೆ. ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ನೃಪತುಂಗ ವಿವಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಮುಂದಡಿ ಇಡಲಿದೆ ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಕುಲಸಚಿವ ರಾಮಕೃಷ್ಣ ರೆಡ್ಡಿ ಸೇರಿದಂತೆ ಸಿಬ್ಬಂದಿ ಇದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News