ಕನ್ನಡದ ಸುಗಮ ಸಂಗೀತದ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಕಾಡು ಕುದುರೆ ಓಡಿ ಬಂದಿತ್ತಾ..' ಹಾಡಿನ ಮೂಲಕ ನಾಡಿನ ಮನೆಮಾತಾದ, ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ, ಅವರಿಗೆ 83 ವರ್ಷ ವಯಸ್ಸಾಗಿತ್ತು. 

Written by - Zee Kannada News Desk | Last Updated : Aug 12, 2022, 12:31 AM IST
  • ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938 ರಲ್ಲಿ ಜನಿಸಿದವರು.
  • ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು.
  • ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.
ಕನ್ನಡದ ಸುಗಮ ಸಂಗೀತದ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ  title=

ಬೆಂಗಳೂರು: ಕಾಡು ಕುದುರೆ ಓಡಿ ಬಂದಿತ್ತಾ..' ಹಾಡಿನ ಮೂಲಕ ನಾಡಿನ ಮನೆಮಾತಾದ, ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಗುರುವಾರ ರಾತ್ರಿ 10.30 ರ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ, ಅವರಿಗೆ 83 ವರ್ಷ ವಯಸ್ಸಾಗಿತ್ತು.  

ಸುಬ್ಬಣ್ಣ ಅವರ ನಿಜ ನಾಮಧೇಯ "ಜಿ.ಸುಬ್ರಹ್ಮಣ್ಯಂ ".ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938 ರಲ್ಲಿ ಜನಿಸಿದವರು. ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು.ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.

ಅವರ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು.ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡದಿದ್ದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು.

ಇದರಿಂದಾಗಿ ಶಾಲಾ ದಿನಗಳಲ್ಲಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡರು.ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963 ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.1979 ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು.

ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’,‘ಅಳಬೇಡಾ ತಂಗಿ ಅಳಬೇಡ...’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡುವ ಮೂಲಕ ಸುಬ್ಬಣ್ಣನವರು ಮನೆ ಮಾತಾದರು.

ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದರೆ, ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ.1974 ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ "ರಜತಕಮಲ್"ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News