ಇದು ಕೇವಲ ಎಕ್ಸಿಟ್​​ ಪೋಲ್​ ಅಷ್ಟೇ, ಎಕ್ಸಾಕ್ಟ್​ ಪೋಲ್​ ಅಲ್ಲ: ಸಿಎಂ ಕುಮಾರಸ್ವಾಮಿ

ಈ ಹಿಂದೆ ಆಡಳಿತ ಪಕ್ಷ ಇವಿಎಂಗಳ ದುರುಪಯೋಗ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಅದೀಗ ಚುನಾವಣೋತ್ತರ ಸಮೀಕ್ಷೆಯಿಂದ ಸಾಬೀತಾಗಿದೆ ಎಂದು ಇವಿಎಂ ದುರ್ಬಳಕೆ ಬಗ್ಗೆ ಸಿಎಂ ಆರೋಪಿಸಿದ್ದಾರೆ.

Last Updated : May 20, 2019, 06:19 PM IST
ಇದು ಕೇವಲ ಎಕ್ಸಿಟ್​​ ಪೋಲ್​ ಅಷ್ಟೇ, ಎಕ್ಸಾಕ್ಟ್​ ಪೋಲ್​ ಅಲ್ಲ: ಸಿಎಂ ಕುಮಾರಸ್ವಾಮಿ title=

ಬೆಂಗಳೂರು: ಲೋಕಸಭಾ ಚುನಾವಣೆ 2019 ರ ಮತದಾನೋತ್ತರ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದು ಇದು ಕೇವಲ ಎಕ್ಸಿಟ್​​ ಪೋಲ್​ ಅಷ್ಟೇ, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿ ಆಡಳಿತದಲ್ಲಿ ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಎಲ್ಲಾ ವಿರೋಧಪಕ್ಷಗಳು ಆತಂಕ ವ್ಯಕ್ತಪಡಿಸಿದ್ದವು. ಅಲ್ಲದೆ, ಚುನಾವಣೆಗಳಲ್ಲಿ ಬ್ಯಾಲೆಟ್​ ಪೇಪರ್​ಗಳನ್ನು ಬಳಸಬೇಕು ಎಂದು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ, ಏನೂ ಸಾಧ್ಯವಾಗಲಿಲ್ಲ. ಮುಂದುವರೆದ ದೇಶಗಳಲ್ಲೆಲ್ಲಾ ಇಂದಿಗೂ ಕೂಡ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಇವಿಎಂಗಳನ್ನೂ ಬಳಸಲಾಗುತ್ತಿದೆ. ಈ ಹಿಂದೆ ಆಡಳಿತ ಪಕ್ಷ ಇವಿಎಂಗಳ ದುರುಪಯೋಗ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಅದೀಗ ಚುನಾವಣೋತ್ತರ ಸಮೀಕ್ಷೆಯಿಂದ ಸಾಬೀತಾಗಿದೆ ಎಂದು ಇವಿಎಂ ದುರ್ಬಳಕೆ ಬಗ್ಗೆ ಸಿಎಂ ಆರೋಪಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಬ್ಬ ವ್ಯಕ್ತಿ ಮತ್ತು ಒಂದು ರಾಜಕೀಯ ಪಕ್ಷದ ಪರವಾಗಿದ್ದು, ದೇಶದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನು ಕೃತಕವಾಗಿ ಸೃಷ್ಟಿಸಿ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಎಕ್ಸಿಟ್ ಪೋಲ್ ಗಳನ್ನು ಬಳಸಲಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.

ಭಾನುವಾರ ಲೋಕಸಭಾ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಹೊರಬಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಎರಡನೇ ಅವಧಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಈ ಹಿನ್ನೆಲೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

Trending News