ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ರಾಜಭವನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಉಡುಗೊರೆ ನೀಡಿರುವ ರಾಜಭವನ ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸೀಮಿತವಾಗಿದ್ದ ರಾಜಭವನ ಪ್ರವೇಶವನ್ನು ಸಾಮಾನ್ಯ ಜನರಿಗೂ ನೀಡಲು ಮುಂದಾಗಿದೆ. ಇದೇ ಆಗಸ್ಟ್ 16 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ಕಲ್ಪಿಸಿಕೊಟ್ಟಿದ್ದು, ರಾಜಭವನ ನಿರ್ಧರಿಸಿರುವಂತೆ ಸಂಜೆ 04:00 ರಿಂದ 06:30 ರವರೆಗೆ ಸಾರ್ವಜನಿಕರಿಗೆ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜಭವನದ ಭೇಟಿಗೆ ಏನ್ ಮಾಡ್ಬೇಕು?
ರಾಜಭವನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಮೊದಲು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕು. ಬುಕ್ಕಿಂಗ್ ಮಾಡಿದ ನಂತರ ರಾಜಭವನದದಿಂದ ಅಧಿಕೃತವಾಗಿ ಈ-ಮೇಲ್ ಅಥವಾ ಮೊಬೈಲ್ ಗೆ SMS ಮೂಲಕ ಸಾರ್ವಜನಿಕರಿಗೆ ಭೇಟಿಯ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುತ್ತದೆ.
ರಾಜಭವನದ ಭೇಟಿಗೆ ಆನ್ಲೈನ್ ಬುಕಿಂಗ್ ಗಾಗಿ www.rajbhavan.kar.nic.in ಅಥವಾ http://rajbhavan.kar.nic.in ವೆಬ್ಸೈಟ್ ಗೆ ಭೇಟಿ ನೀಡಿ ಮುಂಗಡ ಬುಕಿಂಗ್ ಮಾಡಬೇಕು. ಸಾರ್ವಜನಿಕರು ತಾವು ಭೇಟಿ ನೀಡುವ ಕನಿಷ್ಠ 5 ದಿನಗಳ ಮೊದಲು ಆನ್ಲೈನ್ ನಲ್ಲಿ ಬುಕಿಂಗ್ ಮಾಡುವಂತೆ ಕೋರಿದೆ.
ರಾಜಭವನ ಪ್ರವೇಶಕ್ಕೆ ಸಾರ್ವಜನಿಕರನ್ನು ತಂಡಗಳಾಗಿ ವಿಂಗಡಿಸಿ ಪ್ರವೇಶ ಕಲ್ಪಿಸಿಕೊಡಲಾಗುತ್ತಿದ್ದು, ಪ್ರತಿ ತಂಡದಲ್ಲಿ 30 ಜನರು ಹೋಗಬಹುದು. ಪ್ರತಿ ತಂಡ 20 ರಿಂದ 30 ನಿಮಿಷಗಳ ಕಾಲ ರಾಜಭವನದೊಳಗೆ ವೀಕ್ಷಿಸಬಹುದು. ಪ್ರವೇಶಕ್ಕೆ ಅನುಮತಿ ಪಡೆದ ಸಾರ್ವಜನಿಕರು ನಿಗದಿತ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ರಾಜಭವನದ ಪ್ರವೇಶ ದ್ವಾರದ ಬಳಿ ಹಾಜರಿರಬೇಕು.
- ಭಾರತೀಯ ನಾಗರೀಕರಾಗಿದ್ದಲ್ಲಿ ರಾಜಭವನ ಪ್ರವೇಶ ಸಮಯದಲ್ಲಿ ಆನ್ಲೈನ್ ರಿಜಿಸ್ಟರ್ ಸಮಯದಲ್ಲಿ ಒದಗಿಸಲಾದ ಐಡಿ ದಾಖಲೆಯನ್ನು ತೋರಿಸಬೇಕು.
- ವಿದೇಶಿ ನಾಗರೀಕರಾಗಿದ್ದಲ್ಲಿ ಅವರ ಪಾಸ್ ಪೋರ್ಟ್, ವೀಸಾಗಳ ನಕಲನ್ನು ಭೇಟಿಯ ಸಮಯದಲ್ಲಿ ಒದಗಿಸಬೇಕು.
- ರಾಜಭವನಕ್ಕೆ ಒಬ್ಬರೇ ಅಥವಾ 5 ಜನರ ಒಂದು ತಂಡದಂತೆ ಭೇಟಿ ನೀಡಲು ಅವಕಾಶವಿದೆ.
- ಸುರಕ್ಷತಾ ದೃಷ್ಟಿಯಿಂದ ಹ್ಯಾಂಡ್ ಬ್ಯಾಗ್, ಮೊಬೈಲ್ ಫೋನ್, ಕ್ಯಾಮರಾಗಳನ್ನು ರಾಜಭವನದೊಳಗೆ ನಿಷೇಧಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.rajbhavan.kar.nic.in ಅಥವಾ http://rajbhavan.kar.nic.in ವೆಬ್ಸೈಟ್ ಗೆ ಭೇಟಿ ನೀಡಿ.