ಮುನಿರತ್ನ ಅವರ ನಿಜ ಸ್ವರೂಪ ನಮಗೆ ತಡವಾಗಿ ಅರಿವಾಗಿದೆ-ಡಿ.ಕೆ ಶಿವಕುಮಾರ್

ಮುನಿರತ್ನ ಅವರ ನಿಜ ಸ್ವರೂಪ ಈಗ ಗೊತ್ತಾಗಿದೆ. ತಡವಾಗಿ ಅರಿವಾಗಿದೆ. ಅವರ ಸಿನಿಮಾ ಡೈಲಾಗ್ ಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವಲ್ಲ, ನಿಜ ಜೀವನದಲ್ಲೂ ಬಳಕೆ ಆಗುತ್ತವೆ ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. 

Last Updated : Nov 1, 2020, 06:35 PM IST
ಮುನಿರತ್ನ ಅವರ ನಿಜ ಸ್ವರೂಪ ನಮಗೆ ತಡವಾಗಿ ಅರಿವಾಗಿದೆ-ಡಿ.ಕೆ ಶಿವಕುಮಾರ್ title=

ಬೆಂಗಳೂರು: ಮುನಿರತ್ನ ಅವರ ನಿಜ ಸ್ವರೂಪ ಈಗ ಗೊತ್ತಾಗಿದೆ. ತಡವಾಗಿ ಅರಿವಾಗಿದೆ. ಅವರ ಸಿನಿಮಾ ಡೈಲಾಗ್ ಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವಲ್ಲ, ನಿಜ ಜೀವನದಲ್ಲೂ ಬಳಕೆ ಆಗುತ್ತವೆ ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. 

'ಈ ಚುನಾವಣೆ ಈ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ. ತಾವು ಹಾಕಿದ ಮತವನ್ನು ಮಾರಿಕೊಡಿದ್ದರ ಬಗ್ಗೆ ಮತದಾರರು ಆಕ್ರೋಶಗೊಂಡಿದ್ದಾರೆ. ಯಡಿಯೂರಪ್ಪನವರು ಈ ಅಭ್ಯರ್ಥಿ ಭ್ರಷ್ಟಾಚಾರ ಮಾಡಿದ್ದಾರೆ ಅಂತಾ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದರು. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರು ಇವರ ವಿರುದ್ಧ ಮಾತನಾಡಿದ್ದರು. ಈಗ ಆ ಬಗ್ಗೆ ಬಿಜೆಪಿಯವರ ಬಳಿ ಉತ್ತರವಿಲ್ಲ ಎಂದು ಡಿಕೆಶಿ ಕಿಡಿ ಕಾರಿದರು.

ಯಡಿಯೂರಪ್ಪನವರು ಮಂತ್ರಿ ಮಾಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದ ಪರಿಸ್ಥಿತಿ ಕೇಳುವುದೇ ಬೇಡೇ? ಈತ ಬಿಜೆಪಿ ಸೇರಿ ಒಂದು ವರ್ಷವಾಯ್ತು. ಈವರೆಗೂ ಮುನಿರಾಜುಗೌಡ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ರದ್ದು ಮಾಡಿಲ್ಲ. ಒಬ್ಬ ಬಿಜೆಪಿ ಕಾರ್ಯಕರ್ತನ ರಕ್ಷಣೆ ಮಾಡಿಲ್ಲ ಎಂದು ಕುಟುಕಿದರು.

ಯಡಿಯೂರಪ್ಪನವರು ಇಂಥ ಒಬ್ಬ ವ್ಯಕ್ತಿಗೆ ಅಧಿಕಾರ ಕೊಡುವುದಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನೇ ಬಲಿ ಕೊಡಲು ಹೊರಟಿದ್ದಾರಲ್ಲಾ ಇದು ಸರಿಯೇ?ಈ ಬಗ್ಗೆ ಯಡಿಯೂರಪ್ಪನವರೇ ಉತ್ತರ ನೀಡಲಿ ಎಂದರು. 

ತೇಜಸ್ವಿನಿಯವರು ಹಾಗೂ ರಮ್ಯಾ ಅವರನ್ನು ನಾನು ಚುನಾವಣೆಗೆ ನಿಲ್ಲಿಸಲಿಲ್ಲ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿತು. ನಾವು ಕಾರ್ಯಕರ್ತರಾಗಿ ಅವರನ್ನು ಗೆಲ್ಲಿಸಿದ್ದೇವೆ. ಈಗಲೂ ಅಷ್ಟೇ ಸೋನಿಯಾ ಗಾಂಧಿ ಅವರು ಟಿಕೆಟ್  ಕೊಟ್ಟ ಅಭ್ಯರ್ಥಿ ಪರ ನಾವೆಲ್ಲ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಅಭ್ಯರ್ಥಿ ವಿದ್ಯಾವಂತೆ, ಬುದ್ದಿವಂತೆ, ಅರ್ಹ ಮಹಿಳೆ ಅಂತಾ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದು ಬೆಂಬಲ ನೀಡುತ್ತಿದ್ದಾರೆ.ಮುನಿರತ್ನಗೆ ಏನೋ ಹೆಚ್ಚು ಕಮ್ಮಿ ಆಗಿ ಗೊಂದಲದಲ್ಲಿದ್ದಾನೆ. ಅವರ ಪಕ್ಷದಲ್ಲೇ ಅವನಿಗೆ ಅನೇಕ ಸಮಸ್ಯೆಗಳಿವೆ. ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದ ಹಾಗೆ ಬಿಜೆಪಿ ನಾಯಕರು ಹಾಗೂ ಈ ಅಭ್ಯರ್ಥಿಯಿಂದ ಕೇಸು ಹಾಕಿಕೊಂಡಿರುವ ಕಾರ್ಯಕರ್ತರು ಬೇಸರಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರದೇ ಆದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಿಕೆಶಿ ಹೇಳಿದರು.

ದುಡ್ಡು ಹಂಚುವ ವಿಚಾರದಲ್ಲಿ ನಿನ್ನೆ ರಾತ್ರಿಯಿಂದ 20 ವಿಡಿಯೋ ಮಾಡಿದ್ದೇವೆ. ಪೊಲೀಸರಿಗೆ ಕೊಡುತ್ತೇವೆ. ಅವರು ಅವರ ಕೆಲಸ ಮಾಡಲಿ. ಮುನಿರತ್ನ ಅವರ ಬಾಯಲ್ಲಿ ಇಂತಹ ಮಾತು ಬರುತ್ತಿವೆ ಎಂದರೆ ಅದರಿಂದ ಕ್ಷೇತ್ರಕ್ಕೆ ಅಪಮಾನವಾಗುತ್ತದೆ. ಅವರು ಕ್ಷೇತ್ರದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ ಯಾವತ್ತೂ ಜಾತಿ ರಾಜಕಾರಣ ಮಾಡುವುದಿಲ್ಲ. ಅದು ಸದಾ ನೀತಿ ಎತ್ತಿ ಹಿಡಿಯುತ್ತದೆ. ಯಡಿಯೂರಪ್ಪನವರು ಬೆಳಗಾವಿಗೆ ಹೋಗಿ ನೀವು ನನ್ನನ್ನು ಬೆಂಬಲಿಸದಿದ್ದರೆ ಲಿಂಗಾಯತರಿಗೆ ತೊಂದರೆ ಆಗುತ್ತದೆ ಎಂದು ಭಾಷಣ ಮಾಡಿದ್ದರು. ಅದಕ್ಕೆ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿತ್ತು. ನಾವು ಆ ರೀತಿ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ಸಂವಿಧಾನದಲ್ಲಿ ಎಷ್ಟು ಜಾತಿ ಇದೆಯೋ ಅಷ್ಟೂ ಕಾಂಗ್ರೆಸ್ ಜಾತಿ ಎಂದು ತಿಳಿಸಿದರು.

Trending News