ಬೆಂಗಳೂರು: ಮಹದಾಯಿ ನದಿಯ ವಿವಾದದ ಪರಿಹಾರ ಕಂಡು ಕೊಳ್ಳಲು ಸೂಕ್ತ ಸ್ಥಳ ಹಾಗೂ ದಿನಾಂಕ ನಿಗದಿ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಗೋವಾ ಸರಕಾರದ ಮುಖ್ಯ ಕಾರ್ಯದರ್ಶಿ ಧಮೇಂದ್ರ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.
ಮಹದಾಯಿ ನದಿಯ ಪರಿಹಾರ ವಿಚಾರದಲ್ಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ರವರು ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮರುದಿನವೇ ಪರಿಕ್ಕರ್‌ಗೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ಈ ನದಿ ನೀರಿನ ಚರ್ಚೆಗೆ ಸಂಬಂಧಿಸಿದಂತೆ ದಿನಾಂಕ ನಿಗದಿಗೊಳಿಸುವಂತೆ ಮನವಿಯನ್ನು ಮಾಡಿದ್ದರು. ಈ ಎರಡು ಮುಖ್ಯಮಂತ್ರಿಗಳ ಪತ್ರಗಳ ಬೆನ್ನಲ್ಲೇ ರತ್ನ ಪ್ರಭಾ ಅವರು ಗೋವಾ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಸಮಯ, ದಿನಾಂಕವನ್ನು ಆದಷ್ಟು ಬೇಗ ತಿಳಿಸುವಂತೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರಿಗೂ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ,2018ರ ಫೆಬ್ರವರಿ 6ರಂದು ಮಹದಾಯಿ ನ್ಯಾಯಾಧಿಕರಣದ ಮುಂದೆ ವಿಚಾರಣೆ ಆರಂಭವಾಗುವುದಕ್ಕೆ ಮುನ್ನ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಸೂಕ್ತ ಪ್ರಯತ್ನ ನಡೆಸೋಣ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಗೋವಾ ಸಿಎಂ ಮನೋಹರ ಪರಿಕ್ಕರ್‌ಗೆ ಬರೆದ ಪತ್ರವನ್ನೂ ಇದರೊಂದಿಗೆ ಲಗತ್ತಿಸಿದ್ದಾರೆ ಎಂದು ತಿಳಿದು ಬಂದಿದೆ.