ಬೆಂಗಳೂರು: ದೇಶಾದ್ಯಂತ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ 24 ಜಿಲ್ಲೆಗಳ ಪೈಕಿ 14 ಕರ್ನಾಟಕದಲ್ಲೇ 14 ಜಿಲ್ಲೆಗಳಿವೆ ಎಂಬ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಇಂದು ಡಾ. ಅಭಿಲಾಶ್ ಲಿಖಿ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮತ್ತಿತರ ಸಚಿವರು, ಅಧಿಕಾರಿಗಳ ತಂಡ ಈ ಆಘಾತಕಾರಿ ಮಾಹಿತಿಯನ್ನು ದಾಖಲೆ ಸಮೇತವಾಗಿ ಕೇಂದ್ರ ಸರ್ಕಾರದ ತಂಡಕ್ಕೆ ಸಲ್ಲಿಸಿದ್ದು, ಹಿಂಗಾರು ಹಂಗಾಮಿನ ಬಾಬ್ತಿನಲ್ಲಿ 2064 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ರಾಜ್ಯದಲ್ಲಿನ ಬರಪರಿಸ್ಥಿತಿಯ ಅಧ್ಯಯನಕ್ಕೆ ಒಂಭತ್ತು ಅಧಿಕಾರಿಗಳ ತಂಡ ಬಂದಿತ್ತು. ಮೂರು ತಂಡಗಳಲ್ಲಿ ಈ ಅಧಿಕಾರಿಗಳು ಹದಿನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಮೂರು ಸಾವಿರ ಕಿಲೋ ಮೀಟರ್ಗಳಷ್ಟು ಪ್ರವಾಸ ಮಾಡಿದ್ದಾರೆ. ಹೀಗೆ ಅಧ್ಯಯನ ಮಾಡಿ ಬಂದ ಅಭಿಲಾಶ್ ಲಿಖಿ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಲಾಗಿದ್ದು, ದೇಶದ ಅತ್ಯಂತ ಭೀಕರ ಬರಪೀಡಿತ 24 ಜಿಲ್ಲೆಗಳ ಪೈಕಿ 14 ಜಿಲ್ಲೆಗಳು ಕರ್ನಾಟಕದಲ್ಲಿವೆ ಎಂದು ಹೇಳಿದ್ದೇವೆ. ಹಿಂಗಾರು ಹಂಗಾಮಿನಲ್ಲಿ ಬರದಿಂದಾದ ನಷ್ಟಕ್ಕೆ ಪ್ರತಿಯಾಗಿ ಕೇಂದ್ರದ ಮಾರ್ಗಸೂಚಿಯನುಸಾರವೇ 2064 ಕೋಟಿ ರೂ. ಪರಿಹಾರ ಕೋರಲಾಗಿದೆ. ಈ ಕುರಿತು ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯದ ಜಿಲ್ಲಾಧಿಕಾರಿಗಳಿಗೆ ಬರಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುವಂತೆ ಕನಿಷ್ಠ ಆರು ಕೋಟಿ ರೂ. ನೀಡಲಾಗಿದ್ದು, ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ಬಳಿ 600 ಕೋಟಿ ರೂ.ಗಳಿಗೂ ಹೆಚ್ಚು ಹಣವಿದೆ ಎಂದು ಸಚಿವರು ಮಾಹಿತಿ ನೀಡಿದರು. ಬರಗಾಲ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಕೇಂದ್ರದ ಅಧ್ಯಯನ ತಂಡಕ್ಕೆ ವಿವರಿಸಿದ್ದೇವೆ. ಕಳೆದ ಹದಿನೆಂಟು ವರ್ಷಗಳಲ್ಲಿ ಹದಿನಾಲ್ಕು ವರ್ಷ ಬರಗಾಲವನ್ನು ಕಂಡ ರಾಜ್ಯ ಕರ್ನಾಟಕ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿ ರಾಜ್ಯದ ಬಗ್ಗೆ ಕಾಳಜಿ ತೋರಬೇಕು ಎಂದು ದೇಶಪಾಂಡೆ ಅವರು ಈ ಸಂದರ್ಭದಲ್ಲಿ ಹೇಳಿದರು.