ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ: ಡಿ.ಕೆ.ಶಿವಕುಮಾರ್

ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

Written by - Prashobh Devanahalli | Last Updated : Jun 21, 2022, 05:43 PM IST
  • ರಾಜಕೀಯ ದ್ವೇಷದ ಪ್ರಕರಣಗಳಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ
  • ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ: ಡಿ.ಕೆ.ಶಿವಕುಮಾರ್  title=
ಡಿ.ಕೆ.ಶಿವಕುಮಾರ್

ನವದೆಹಲಿ: ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪೂರ್ವಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಅದರ ಬಗ್ಗೆಯೂ ಅರಿವಿದೆ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಏನೇ ಆದರೂ ನಾವು ನಮ್ಮ ನಾಯಕರ ಜತೆ ಇರುತ್ತೇವೆ, ಕಷ್ಟಕಾಲದಲ್ಲಿ ಅವರ ಜತೆ ನಿಂತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ರಾಜಕೀಯ ದ್ವೇಷದಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಡಿಕೆಶಿ

ಇನ್ನು ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರು, ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಶಾಸಕರನ್ನು ದೆಹಲಿಗೆ ಬರುವಂತೆ ಕರೆ ನೀಡಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮ ಸಂಸದರು ಈಗಾಗಲೇ ಬಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಬಂಧಿಸಿ ಮೂರು ದಿನ ದೆಹಲಿಯ ಹೊರಗಿರುವ ಠಾಣೆಯಲ್ಲಿ ಇಟ್ಟಿದ್ದರು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಸಂಸದರನ್ನು ಪೊಲೀಸರು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ನೋಡಿದ್ದೇವೆ. ನಮ್ಮ ನಾಯಕರು, ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯುವ ಕಾಂಗ್ರೆಸ್ ಅಧ್ಯಕ್ಷರು ಹೋರಾಟ ಮಾಡದೇ ಇನ್ಯಾರು ಮಾಡಲು ಸಾಧ್ಯ? ಅವರು ದೇಶದ ಯುವಕರ ಪ್ರತಿನಿಧಿ. ಸರ್ಕಾರ ಇವರೆಲ್ಲರಿಗೂ ಯಾವ ರೀತಿ ಕಿರುಕುಳ ನೀಡುತ್ತಿದೆ ಎಂದು ನಾವು ನೋಡಿದ್ದೇವೆ. ರಾಹುಲ್ ಗಾಂಧಿ ಅವರನ್ನು 40 ತಾಸು ವಿಚಾರಣೆ ಮಾಡುವುದೇನಿತ್ತು? ಇದರಲ್ಲಿ ಷಡ್ಯಂತ್ರವಿದೆ. ಇದರಿಂದ ಒಳ್ಳೆಯದಾಗುವುದಿಲ್ಲ. ನಮ್ಮ ನಾಯಕರು ಎಲ್ಲವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವರು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರನ್ನು 23 ರಂದು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ನಾವು ಹೆದರುವುದಿಲ್ಲ. ನಾವು ಅದನ್ನು ಗೌರವಿಸುತ್ತೇವೆ. ಆದರೆ ವಿಚಾರಣೆ ಮಾಡುತ್ತಿರುವ ಸಮಯ, ವಿಧಾನ ನೋಡಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಚಾರಣೆಯನ್ನು ಸಾಮಾನ್ಯ ಪ್ರಕ್ರಿಯೆ ಎಂದು ಎದುರಿಸಬಹುದಲ್ಲವೇ? ಪ್ರತಿಭಟನೆ ಯಾಕೆ ಎಂಬ ಪ್ರಕ್ರಿಯೆಗೆ, ಎಷ್ಟು ದಿನ ವಿಚಾರಣೆ ಮಾಡುತ್ತಾರೆ. ನಾವು ಈ ಪ್ರಕರಣ ಅಧ್ಯಯನ ಮಾಡಿದ್ದು, ಕಾಂಗ್ರೆಸ್ ಪಕ್ಷದ ವಿಚಾರ ಹಾಗೂ ಸ್ವಾತಂತ್ರ್ಯ ಹೋರಾಟದ ವಿಚಾರ ಪ್ರಚಾರ ಮಾಡುತ್ತಿದ್ದ ಪತ್ರಿಕೆ ಅದಾಗಿದ್ದು, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಒಂದು ರೂಪಾಯಿಯೂ ದುರ್ಬಳಕೆಯಾಗಿಲ್ಲ. ಅವರ ಆಸ್ತಿಯಲ್ಲೂ ಘೋಷಣೆ ಮಾಡಿಕೊಂಡಿಲ್ಲ. ಅವರು ಪಕ್ಷದ ಹುದ್ದೆಯಲ್ಲಿರುವ ಕಾರಣ ಅವರು ಷೇರು ಹೊಂದಿದ್ದು, ಅದರಲ್ಲಿ ಯಾವ ಹಣವನ್ನು ಉಪಯೋಗಿಸಿಕೊಂಡಿಲ್ಲ. ಬದಲಿಗೆ ಸಾರ್ವಜನಿಕ ಬದುಕಿನಲ್ಲಿ ಸೇವೆ ಮಾಡುತ್ತಿದ್ದಾರೆ. ಈ ಪ್ರಕರಣ ಮುಗಿದ ಅಧ್ಯಾಯ. ಹೀಗಾಗಿ ಈಗ ವಿಚಾರಣೆಗೆ ಕರೆದಿರುವುದೇ ತಪ್ಪು. ಕೇವಲ ಕಾಂಗ್ರೆಸ್ ನಾಯಕರ ವಿರುದ್ಧದ ಪ್ರಕರಣದ ವಿಚಾರಣೆ ಮಾತ್ರ ಯಾಕೆ? ಬೇರೆ ಪ್ರಕರಣಗಳ ವಿಚಾರಣೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಗಾಂಧಿ ಕುಟುಂಬದವರು ಕಾನೂನಿಗೆ ಅತೀತರೇ ಎಂಬ ಬಿಜೆಪಿ ವಾದದ ಕುರಿತು ಕೇಳಿದ ಪ್ರಶ್ನೆಗೆ, ಇದು ಆದಾಯ ತೆರಿಗೆ ಇಲಾಖೆ ವಿಚಾರವೇ ಹೊರತು, ಇದರಲ್ಲಿ ಹಣಕಾಸು ಅವ್ಯವಹಾರ ಏನಿದೆ? ಹಣ ಸಿಕ್ಕಿದೆಯೇ? ಎಂದು ಕೇಳಿದ್ದಾರೆ.

ರಾಹುಲ್ ಗಾಂಧಿ ಅವರ ಘನತೆ ಹೆಚ್ಚಿಸಲು ಈ ಹೋರಾಟ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಅವರು ಈ ದೇಶ ಒಂದು ಮಾಡಲು ಭಾರತ್ ಜೋಡೋ ಯಾತ್ರೆ ಮಾಡಲು ಹೊರಟಿದ್ದಾರೆ. ಅದು ನಡೆದರೆ ಪಕ್ಷಕ್ಕೆ ಶಕ್ತಿ ಬರಲಿದೆ. ಹೀಗಾಗಿ ಇದನ್ನು ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಉದಯಪುರ ಸಭೆಯಲ್ಲಿ ನಾವು ಈ ಘೋಷಣೆ ಮಾಡುತ್ತಿದ್ದಂತೆ, ಅವರ ಘನತೆಗೆ ಮಸಿ ಬಳಿಯಲು, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸರ್ಕಾರ ಈ ಪ್ರಯತ್ನ ಮಾಡುತ್ತಿದೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Sergey Brin Divorce: ವಿಚ್ಛೇದನಕ್ಕೆ ನಿರ್ಧರಿಸಿದ ಗೂಗಲ್ ಸಹ-ಸಂಸ್ಥಾಪಕ & ವಿಶ್ವದ 6ನೇ ಶ್ರೀಮಂತ!

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 10 ಶಾಸಕರು ಸೂರತ್ ನಲ್ಲಿ ಇದ್ದಾರೆ ಎಂದು ಯಾರೋ ಕರೆ ಮಾಡಿ ಹೇಳಿದ್ದಾರೆ. ಆದರೆ ನನಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾನು ಮಹಾರಾಷ್ಟ್ರದ ಉಸ್ತುವಾರಿಯೂ ಅಲ್ಲ. ನಾನು ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷನಾಗಿದ್ದು, ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಇದ್ದರೆ ಆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಉತ್ತರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News