ಕೊಪ್ಪಳ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕ ಕೆ.ಎಎಸ್.ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಸದಾ ತಾವು ಸಾಂದರ್ಭಿಕ ಶಿಶು ಎಂದು ಹೇಳುತ್ತಾರೆ. ಕಾಂಗ್ರೆಸ್ ಅವರಿಗೆ ಇಷ್ಟೆಲ್ಲಾ ಅವಮಾನವಾದರೂ ರಾಜೀನಾಮೆ ಕೊಡುವುದಾಗಿ ಹೇಳಿಕೆ ನೀಡುತ್ತಾರೆಯೇ ಹೊರತು ರಾಜೀನಾಮೆ ನೀಡಲ್ಲ. ನಿಜಕ್ಕೂ ಅವರಿಗೆ ಮಾನ ಮರ್ಯಾದೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾನ ಬೇಕಾ? ಅಧಿಕಾರ ಬೇಕಾ? ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಅವರು ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂಬ ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಕುಮಾರಸ್ವಾಮಿಗೆ ಕುಂಟನ ಪರಿಸ್ಥಿತಿ ಬಂದಿದೆ. ಕುಂಟ ಒದೀತೀನಿ, ಒದೀತೀನಿ ಅನ್ನೋ ಹಾಗೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತೀನಿ, ಕೊಡ್ತೀನಿ ಅಂತಿದ್ದಾರೆ. ನಿಜ ಹೇಳಬೇಕಂದ್ರೆ ಕಾಂಗ್ರೆಸ್ಸಿನವರು ಕುತ್ತಿಗೆ ಹಿಡಿದು ನೂಕಿದ್ರೂ ಕುಮಾರಸ್ವಾಮಿ ರಾಜೀನಾಮೆ ಕೊಡಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.