ಬೆಂಗಳೂರು: ಜೆಡಿಎಸ್ನಲ್ಲಿನ ಬಂಡಾಯ ಶಮನಕ್ಕೆ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೆಗಾ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೆಲ ಶಾಸಕರು ಬಿಜೆಪಿಯ ಆಪರೇಷನ್ ಕಮಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಪಕ್ಷದ ಎಲ್ಲಾ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಎಲ್ಲಾ ಶಾಸಕರನ್ನು ಮಲೇಷಿಯಾಗೆ ಕರೆದೊಯ್ಯಲು ತಯಾರಿ ನಡೆಸಿದ್ದಾರೆ. ಪ್ರವಾಸದ ನೆಪದಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಅವರ ಮೆಗಾ ಪ್ಲಾನ್ ಎಂದೂ ಹೇಳಲಾಗುತ್ತಿದೆ.
ಪ್ರವಾಸದ ಬಗ್ಗೆ ಈಗಾಗಲೇ ಶಾಸಕರಿಗೆ ಮಾಹಿತಿ ನೀಡಲಾಗಿದ್ದು, ನವಂಬರ್ 3ರಂದು ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರವಾಸದ ವೇಳೆ ಬಿಜೆಪಿಯತ್ತ ಮುಖ ಮಾಡಿರುವ ಶಾಸಕರನ್ನು ಪಕ್ಷ ಬಿಡದ ರೀತಿಯಲ್ಲಿ ನೋಡಿಕೊಳ್ಳುವುದು, ಅವರ ಮನವೊಲಿಸುವುದು ಹೆಚ್ಡಿಕೆ ಮುಖ್ಯ ಅಜೆಂಡಾ.
ಮೈತ್ರಿ ಸರ್ಕಾರ ಪತನ ನಂತರ ವರಿಷ್ಠರಿಂದ ದೂರ ಉಳಿದಿದ್ದ ಶಾಸಕರು. ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗದೇ ದೂರ ಉಳಿದಿದ್ದ ಶಾಸಕರು. ಈಗಾಗಲೇ ಕುಮಾರಸ್ವಾಮಿ ವಿರುದ್ಧ ರೆಬೆಲ್ ಆಗಿರುವ ಶಾಸಕರನ್ನು ಸಮಾಧಾನ ಪಡಿಸಲು ಹೆಚ್ಡಿಕೆ ವಿದೇಶ ಪ್ರವಾಸದ ನೆಪ ಒಡ್ಡಿದ್ದಾರೆ. ಇದೀಗ ಆ ಶಾಸಕರನ್ನು ಒಗ್ಗೂಡಿಸಿ, ಒಟ್ಟಿಗೆ ಕರೆದೊಯ್ಯಲು ಹೆಚ್ಡಿಕೆ ತಂತ್ರ ರೂಪಿಸಿದ್ದಾರೆ. ಪ್ರವಾಸದ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.