Lok Sabha Election 2024: ಬಳ್ಳಾರಿ ಲೋಕಸಭಾ ಕ್ಷೇತ್ರ: ಚುನಾವಣೆಯ ಐತಿಹಾಸಿಕ ಹಿನ್ನೋಟ

Lok Sabha Election 2024: ಅಖಂಡ 09-ಬಳ್ಳಾರಿ ಲೋಕಸಭಾ ಕ್ಷೇತ್ರವು ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.

Written by - Manjunath N | Last Updated : Apr 5, 2024, 04:00 PM IST
  • 1977 ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್.ವೀರಭದ್ರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದರು.
  • ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರಿಗಿಂತ 1,45,544 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.
 Lok Sabha Election 2024: ಬಳ್ಳಾರಿ ಲೋಕಸಭಾ ಕ್ಷೇತ್ರ: ಚುನಾವಣೆಯ ಐತಿಹಾಸಿಕ ಹಿನ್ನೋಟ title=

Lok Sabha Election 2024: ಗಣಿನಾಡು ಎಂದೇ ಖ್ಯಾತಿ ಹಾಗೂ ಬಿಸಿಲ ನಾಡು ಎಂಬ ಕುಖ್ಯಾತಿ ಹೊಂದಿರುವ ಅಖಂಡ (ಈಗಿನ ವಿಜಯನಗರ ಜಿಲ್ಲೆ ಒಳಗೊಂಡಂತೆ) ಬಳ್ಳಾರಿ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು, ಇಂತಹ ಜಿಲ್ಲೆಯಲ್ಲಿ 1951-52 ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ. ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಬೇಸಿಗೆಯ ಬಿಸಿ ಏರುತ್ತಿರುವಂತೆಯೇ, ಚುನಾವಣಾ ಕಣವೂ ಕೂಡ ರಂಗೇರುತ್ತಿದೆ.

ಅಖಂಡ ಬಳ್ಳಾರಿ ಕ್ಷೇತ್ರ:

ಅಖಂಡ 09-ಬಳ್ಳಾರಿ ಲೋಕಸಭಾ ಕ್ಷೇತ್ರವು ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.

ಮತದಾರರ ಅಂಕಿ-ಅಂಶ:

ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ-920022, ಮಹಿಳೆ-945053, ಇತರೆ-266 ಸೇರಿದಂತೆ ಒಟ್ಟು 18,65,341 ಮತದಾರರಿದ್ದಾರೆ.

ಹಡಗಲಿ ಕ್ಷೇತ್ರದಲ್ಲಿ ಪುರುಷ- 98232, ಮಹಿಳೆ-96714, ಇತರೆ-13, ಒಟ್ಟು-194959 ಮತದಾರರು ಮತ್ತು 218 ಮತಗಟ್ಟೆಗಳು.

ಹಗರಿಬೊಮ್ಮನಹಳ್ಳಿ: ಪುರುಷ-116933, ಮಹಿಳೆ-118592, ಇತರೆ-22, ಒಟ್ಟು-235547 ಮತದಾರರು ಮತ್ತು 254 ಮತಗಟ್ಟೆಗಳು.

ವಿಜಯನಗರ: ಪುರುಷ- 124655, ಮಹಿಳೆ-132416, ಇತರೆ-77, ಒಟ್ಟು-257148 ಮತದಾರರು ಮತ್ತು 259 ಮತಗಟ್ಟೆಗಳು.

ಕಂಪ್ಲಿ: ಪುರುಷ- 109490, ಮಹಿಳೆ-112295, ಇತರೆ-35, ಒಟ್ಟು-221820 ಮತದಾರರು, 242-ಮತಗಟ್ಟೆಗಳು.

ಬಳ್ಳಾರಿ ಗ್ರಾಮೀಣ: ಪುರುಷ- 120046, ಮಹಿಳೆ-127417, ಇತರೆ-50, ಒಟ್ಟು-247513 ಮತದಾರರು, 235-ಮತಗಟ್ಟೆಗಳು.

ಬಳ್ಳಾರಿ ನಗರ: ಪುರುಷ- 130315, ಮಹಿಳೆ-139045, ಇತರೆ-33, ಒಟ್ಟು-269393 ಮತದಾರರು, 261-ಮತಗಟ್ಟೆಗಳು.

ಸಂಡೂರು: ಪುರುಷ- 114928, ಮಹಿಳೆ- 115309, ಇತರೆ-25, ಒಟ್ಟು- 230262 ಮತದಾರರು, 253-ಮತಗಟ್ಟೆಗಳು.

ಕೂಡ್ಲಿಗಿ: ಪುರುಷ-105423, ಮಹಿಳೆ-103265, ಇತರೆ-11, ಒಟ್ಟು 208699 ಮತದಾರರಿದ್ದು, 250 ಮತಗಟ್ಟೆ ಕೇಂದ್ರಗಳಿವೆ.

ಭಾರತ ದೇಶ ಸ್ವಾತಂತ್ರ್ಯ ನಂತರ 1951-52 ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ (ಈ ಕ್ಷೇತ್ರವು ಮದ್ರಾಸ್ ಪ್ರಾಂತ್ಯ ವ್ಯಾಪ್ತಿಗೊಳಪಟ್ಟಿದ್ದು, ಬಳ್ಳಾರಿ, ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿತ್ತು) ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಟಿ.ಸುಬ್ರಮಣ್ಯಂ ಅವರು, ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರನ್ನು 30,361 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

1957 ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದ ಟಿ.ಸುಬ್ರಮಣ್ಯಂ ಅವರು ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರಿಗಿಂತ 26,288 ಹೆಚ್ಚು ಮತಗಳನ್ನು ಪಡೆದು ಪುನಃ ವಿಜಯಿಯಾದರು.

1962 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಟಿ.ಸುಬ್ರಮಣ್ಯಂ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸ್ವತಂತ್ರ (ಎಸ್‍ಡಬ್ಲ್ಯೂಎ) ಪಕ್ಷದ ಅಭ್ಯರ್ಥಿಯಾದ ಜೆ.ಮಹ್ಮದ್ ಇಮಾಮ್ ಅವರನ್ನು 11,317 ಮತಗಳ ಅಂತರದಿಂದ ಪರಾಭವಗೊಳಿಸಿ ಸತತ ಹ್ಯಾಟ್ರಿಕ್ ಗೆಲುವು ಪಡೆದುಕೊಂಡು ಆಯ್ಕೆಯಾದರು.

1967 ರ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿ.ಕೆ.ಆರ್.ವಿ.ರಾವ್ ಅವರು, ಸ್ವತಂತ್ರ (ಎಸ್‍ಡಬ್ಲ್ಯೂಎ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈ.ಮಹಾಬಳೇಶ್ವರಪ್ಪ ಅವರನ್ನು 24,380 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.

1971 ರ ಚುನಾವಣೆಯಲ್ಲಿ ಕಾಂಗ್ರೆಸ್ (ಜಗಜೀವನರಾಂ ಗ್ರೂಪ್) ಪಕ್ಷದಿಂದ ವಿ.ಕೆ.ಆರ್.ವಿ.ರಾವ್, ಸ್ವತಂತ್ರ ಪಕ್ಷ (ಎಸ್‍ಡಬ್ಲ್ಯುಎ) ದಿಂದ ವೈ.ಮಹಾಬಳೇಶ್ವರಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಗುರುನಾಥ ಮತ್ತು ಎ.ಎನ್.ಗಂಗಪ್ಪ ಸ್ವಾಮಿ ಅವರು ಸ್ವರ್ಧಿಸಿದ್ದು, ವಿ.ಕೆ.ಆರ್.ವಿ.ರಾವ್ ಅವರು ವೈ.ಮಹಾಬಳೇಶ್ವರಪ್ಪ ಅವರಿಗಿಂತ 1,52,860 ಹೆಚ್ಚು ಮತ ಗಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ವೈ.ಮಹಾಬಳೇಶ್ವರಪ್ಪ ಅವರು 78,041 ಮತ, ಪಕ್ಷೇತರ ಅಭ್ಯರ್ಥಿಗಳಾದ ಎಸ್.ಗುರುನಾಥ 5,799 ಮತ ಪಡೆದರೆ, ಎ.ಎನ್.ಗಂಗಪ್ಪಸ್ವಾಮಿ ಅವರು 2,896 ಮತಗಳನ್ನು ಪಡೆದಿದ್ದರು.

1977 ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್.ವೀರಭದ್ರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರಿಗಿಂತ 1,45,544 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.

1980 ರ ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ಪಕ್ಷದ ಅಭ್ಯರ್ಥಿಯಾಗಿ ಆರ್.ವೈ.ಘೋರ್ಪಡೆ ಅವರು, ಕಾಂಗ್ರೆಸ್ (ಅರಸು) ಪಕ್ಷದ ಅಭ್ಯರ್ಥಿ ಎಂ.ವೈ.ಘೋರ್ಪಡೆ ಅವರನ್ನು 1,36,037 ಮತಗಳಿಂದ ಸೋಲಿಸಿ ಆಯ್ಕೆಯಾದರು, ಈ ಚುನಾವಣೆಯಲ್ಲಿ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ರಾಚಯ್ಯ ಮೂರನೇಯ ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಮಹ್ಮದ್ ಗೌಸ್ ನಾಲ್ಕನೇ ಸ್ಥಾನ ಗಳಿಸಿದರು. ಪಕ್ಷೇತರ ಅಭ್ಯರ್ಥಿ ಎ.ಎಂ.ಗಂಗಪ್ಪಸ್ವಾಮಿ ಅವರು ಐದನೇ ಸ್ಥಾನ ಪಡೆದುಕೊಂಡರು.

1984 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಬಸವರಾಜೇಶ್ವರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಾರ್ಟಿ ಅಭ್ಯರ್ಥಿ ಎಂ.ಪಿ.ಪ್ರಕಾಶ ಅವರನ್ನು 72,286 ಮತಗಳಿಂದ ಪರಾಭವಗೊಳಿಸಿ ಅಚ್ಚರಿಯ ರೀತಿಯಲ್ಲಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು.

1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜೇಶ್ವರಿ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು 76,085 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ಎರಡನೆ ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು.

ಇದನ್ನೂ ಓದಿ- ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ನಮ್ಮ ಅಭ್ಯರ್ಥಿ ಚಂದ್ರಪ್ಪ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ತಾರೆ: ಸಿಎಂ

1991 ರ ಚುನಾವಣೆಯಲ್ಲಿ ಮತ್ತೆ ಬಸವರಾಜೇಶ್ವರಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದ ವೈ.ನೆಟ್ಟಕಲ್ಲಪ್ಪ ಅವರನ್ನು 65,981 ಮತಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಅತ್ಯಂತ ಜಿದ್ದಾಜಿದ್ದಿಯಿಂದ ಹಾಗೂ ಕುತೂಹಲದಿಂದ ಕೂಡಿದ್ದ 1996 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ.ಸಿ. ಕೊಂಡಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ಎನ್.ತಿಪ್ಪಣ್ಣ ಅವರನ್ನು ಕೇವಲ 4,519 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು. ಈ ಚುನಾವಣೆಯಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.

1998 ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು 63,738 ಮತಗಳಿಂದ ಪರಾಭವಗೊಳಿಸಿ ಎರಡನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿ ಪಕ್ಷದಿಂದ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿದ್ದರು. ಅತ್ಯಂತ ಕುತೂಹಲಕಾರಿಯಾಗಿದ್ದ ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಜನತಾದಳ (ಎಸ್) ಪಕ್ಷದಿಂದ ಕೆ. ಮಹಾಲಿಂಗಪ್ಪ ಕೂಡ ಸ್ಪರ್ಧಿಸಿ 28,855 ಮತಗಳನ್ನು ಗಳಿಸಿದರು.

ಸೋನಿಯಾಗಾಂಧಿ ಅವರು ಉತ್ತರಪ್ರದೇಶ ರಾಜ್ಯದ ಅಮೇಥಿ ಹಾಗೂ ಕರ್ನಾಟಕದ ಬಳ್ಳಾರಿ ಕ್ಷೇತ್ರಗಳೆರಡರಲ್ಲೂ ಸ್ಪರ್ಧಿಸಿ, ಎರಡೂ ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದರು. ಅವರು ಬಳ್ಳಾರಿ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ ತೆರವಾದ ಸ್ಥಾನಕ್ಕೆ 2000 ರಲ್ಲಿ ಉಪ ಚುನಾವಣೆ ಜರುಗಿತು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಬಸವನಗೌಡ ಅವರು ಹಾಗೂ ಬಿಜೆಪಿ ಪಕ್ಷದಿಂದ ಕೆ.ಎಸ್.ವೀರಭದ್ರಪ್ಪ ಅವರು ಸ್ಪರ್ಧಿಸಿದರು. ಕೆ. ಬಸವನಗೌಡ ಅವರು ಬಿಜೆಪಿಯ ವೀರಭದ್ರಪ್ಪ ಅವರಿಗಿಂತ 96,020 ಮತ ಹೆಚ್ಚು ಪಡೆದು ವಿಜಯಶಾಲಿಯಾದರು. ಈ ಚುನಾವಣೆ ಕಣದಲ್ಲಿ ಒಟ್ಟು 07 ಅಭ್ಯರ್ಥಿಗಳು ಉಳಿದಿದ್ದರು.

2004 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗಿಂತ 31,676 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 08 ಅಭ್ಯರ್ಥಿಗಳು ಕಣದಲ್ಲಿದ್ದರು.

2009 ರಲ್ಲಿ ಜರುಗಿದ ಚುನಾವಣೆ ಕೂಡ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜೆ.ಶಾಂತಾ ಅವರು, ಕಾಂಗ್ರೆಸ್‍ನ ಎನ್.ವೈ.ಹನುಮಂತಪ್ಪ ಅವರಿಗಿಂತ ಕೇವಲ 2243 ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದರು. ಈ ಚುನಾವಣೆಯಲ್ಲಿ ಒಟ್ಟು 08 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

2014 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಅವರು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪ ಅವರನ್ನು 85,144 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನೋಟಾ ಗೆ ಒಟ್ಟು 11,320 ಮತಗಳು ಚಲಾವಣೆಯಾಗಿದ್ದವು.

ಇದನ್ನೂ ಓದಿ- "ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ"

2018 ರಲ್ಲಿ ಜರುಗಿದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿ.ಎಸ್.ಉಗ್ರಪ್ಪ ಅವರು ಹಾಗೂ ಬಿಜೆಪಿ ಪಕ್ಷದಿಂದ ಜೆ.ಶಾಂತಾ ಅವರು ಸ್ಪರ್ಧಿಸಿದರು. ಚುನಾವಣೆಯಲ್ಲಿ ವಿ.ಎಸ್. ಉಗ್ರಪ್ಪ ಅವರು ಬಿಜೆಪಿ ಪಕ್ಷದ ಜೆ. ಶಾಂತಾ ಅವರನ್ನು 2,43,161 ಭಾರಿ ಮತಗಳÀ ಅಂತರದಿಂದ ಪರಭಾವಗೊಳಿಸಿದರು. ಈ ಚುನಾವಣೆಯಲ್ಲ್ಲಿ 05 ಅಭ್ಯರ್ಥಿಗಳು ಕಣದಲ್ಲಿದ್ದರು.

2019 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ವೈ.ದೇವೆಂದ್ರಪ್ಪ ಅವರು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಅವರಿಗಿಂತ 55,707 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ನೋಟಾಗೆ ಒಟ್ಟು 9024 ಮತಗಳು ಚಲಾವಣೆಯಾಗಿದ್ದವು.

ಈ ಬಾರಿಯ ಲೋಕಸಭೆ ಸಾರ್ವತ್ರಿಕ ಚುನಾವಣೆಯು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಯಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಮೇ 07 ರಂದು ಮತದಾನ ನಡೆಯಲಿದೆ. ಎಲ್ಲ ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಅಲ್ಲದೆ ಮತದಾನ ದಿನದಂದು ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News