ಮಹಾದಾಯಿ ವಿವಾದ: ಜ.25ಕ್ಕೆ ಕರ್ನಾಟಕ ಬಂದ್!

ಜ.25ಕ್ಕೆ ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶ. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗಿ.

Last Updated : Jan 22, 2018, 01:32 PM IST
ಮಹಾದಾಯಿ ವಿವಾದ: ಜ.25ಕ್ಕೆ ಕರ್ನಾಟಕ ಬಂದ್! title=
ಸಂಗ್ರಹ ಚಿತ್ರ

ಬೆಂಗಳೂರು: ಮಹಾದಾಯಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಕನ್ನಡಪರ ಒಕ್ಕೂಟ ಸಂಘಟನೆಗಳಿಂದ ಜ. 25ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇನ್ನೊಂದೆಡೆ ಅದೇ ದಿನ ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 

ತೀವ್ರ ಕುತೂಹಲ ಕೆರಳಿಸಿರುವ ಅಮಿತ್ ಷಾ ನಡೆ...
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾದಾಯಿ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ದೆಹಲಿಯ ತಮ್ಮ ನಿವಾಸದಲ್ಲೇ ರಾಜ್ಯ ನಾಯಕರು, ಗೋವಾ ಹಾಗೂ ಮಹಾರಾಷ್ಟ್ರ ನಾಯಕರನ್ನು ಕರೆದು ಸಭೆ ನಡೆಸಿದ್ದರು. 
ನಂತರ ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬರೆದಿದ್ದ ಪತ್ರವನ್ನು ಓದಿದರು. ಪತ್ರದಲ್ಲಿ "ಕುಡಿಯುವ ನೀರಿನ ಲಭ್ಯತೆ ಮನುಷ್ಯ ಜೀವನದ ಮೂಲಭೂತ ಅವಶ್ಯಕತೆ ಎಂದು ಗೋವಾ ಸರ್ಕಾರಕ್ಕೆ ಅರಿವಿದೆ. ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಗೋವಾ ಸರ್ಕಾರವು ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರನ್ನು ಒದಗಿಸಲು ಸಿದ್ದವಿದೆ. ಈ ಬಗ್ಗೆ ಟ್ರಿಬ್ಯುನಲ್ ಗೆ ಅರ್ಜಿ ಹಾಕಿಸಿ ಕುಡಿಯುವ ನೀರಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ" ಪರಿಕ್ಕರ್ ತಮ್ಮ ಬರೆದಿದ್ದರು.

ಇದನ್ನೂ ಓದಿ: ಬಿಜೆಪಿ ನವಕರ್ನಾಟಕ ಯಾತ್ರೆಗೆ ಯೋಗಿ ಆದಿತ್ಯನಾಥ್ ಆಗಮನ

ನಂತರದ ಬೆಳವಣಿಗೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ 'ಯು ಟರ್ನ್' ತೆಗೆದುಕೊಂಡ ಹಿನ್ನೆಲೆಯಲ್ಲಿ ಮಹಾದಾಯಿ ಹೋರಾಟಗಾರರು ನೀರಿಗಾಗಿ ಆಗ್ರಹಿಸಿ ಹೋರಾಟ ಮುಂದುವರೆಸಿದ್ದರು.  ತದನಂತರದಲ್ಲಿ ಜ.10ಕ್ಕೆ ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಷಾ, ಆ ಸಂದರ್ಭದಲ್ಲಿ ಮಹಾದಾಯಿ ವಿಷಯ ಕುರಿತಂತೆ ಏನನ್ನೂ ಮಾತನಾಡಿರಲಿಲ್ಲ. ಇದೀಗ ಮಹಾದಾಯಿ ವಿಚಾರವಾಗಿ ಜ.25ರಂದು ಬಂದ್ ಕೈಗೊಂಡಿರುವ ದಿನವೇ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಮಯದಲ್ಲಾದರೂ ಮಹಾದಾಯಿ ವಿಚಾರವಾಗಿ ಬಾಯಿ ಬಿಡುವರೇ? ಉತ್ತರ ಕರ್ನಾಟಕ ಜನತೆಯ ಕೂಗಿಗೆ ಸ್ಪಂದಿಸುವರೇ ಎಂಬ ವಿಷಯದಲ್ಲಿ ಅಮಿತ್ ಷಾ ಅವರ ನಡೆ ಕುತೂಹಲ ಮೂಡಿಸಿದೆ.

Trending News