"ಉಪ್ಪು ತಿಂದವನು ಯಾರೇ ಆಗಿದ್ದರೂ ನೀರು ಕುಡಿಯಲಿ": ಸಚಿವ ಅಶ್ವತ್ಥನಾರಾಯಣ

ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು. ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಹೇಳಿದ್ದಾರೆ. 

Written by - Chetana Devarmani | Last Updated : May 2, 2022, 05:45 PM IST
  • ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು
  • ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ
  • ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ
  • ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ
"ಉಪ್ಪು ತಿಂದವನು ಯಾರೇ ಆಗಿದ್ದರೂ ನೀರು ಕುಡಿಯಲಿ": ಸಚಿವ ಅಶ್ವತ್ಥನಾರಾಯಣ  title=
ಅಶ್ವತ್ಥನಾರಾಯಣ

ಬೆಂಗಳೂರು: ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು. ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಹೇಳಿದ್ದಾರೆ. 

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯೆ ನೀಡಿದರು. 

ಸತೀಶ್ ಅವರು ನನ್ನ ಅಣ್ಣ ಎನ್ನುವುದು ನಿಜ. ಆದರೆ, ಈ ದರ್ಶನ್ ಗೌಡ ಯಾರೆನ್ನುವುದೂ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಯೂ ಇಲ್ಲ. ನನ್ನ ಸಾಧನೆಗಳನ್ನು ಸಹಿಸಿಕೊಳ್ಳಲು ವಿರೋಧಿಗಳಿಗೆ ಆಗುತ್ತಿಲ್ಲ. ಹೀಗಾಗಿ ಮಸಿ ಮೆತ್ತುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರು. 

ಇದನ್ನೂ ಓದಿ: ಎಂಇಎಸ್ ಕಿರಾತಕರ ಬಗ್ಗೆ ಬಿಜೆಪಿ ಸರ್ಕಾರ ಮೃದುದೋರಣೆ ತಾಳಿದೆ: ಎಚ್‍ಡಿಕೆ ಆರೋಪ

ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆಂದು ಹೇಳುವವನು ನಾನು. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಕೂಡ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಈಗಾಗಲೇ ವಿಚಾರಣೆ ಆರಂಭವಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಮಾಧ್ಯಮಗಳು ಇದರತ್ತ ಗಮನ ಹರಿಸಬೇಕು ಎಂದರು. 

ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು ಈಗ ಮಾಡುತ್ತಿರುವ ಆರೋಪವನ್ನು ಒಪ್ಪುವುದಾದರೆ, ತಮ್ಮ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರರನ್ನೇ ಕಡುಭ್ರಷ್ಟ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದ ಉಗ್ರಪ್ಪನವರ ಹೇಳಿಕೆಯನ್ನೂ ಸತ್ಯ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಅವರು ಹಲವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಕಟ್ಟಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವುಗಳನ್ನು ಆಳವಾಗಿ ಪರಿಶೀಲಿಸಿದರೆ, ಇವೆಲ್ಲ ಎಲ್ಲಿ ಸೃಷ್ಟಿಯಾಗುತ್ತಿದೆ ಎನ್ನುವುದೆಲ್ಲ ಗೊತ್ತಾಗುತ್ತದೆ ಎಂದು ಛೇಡಿಸಿದರು. 

ಕುಟುಂಬದವರ ಹೆಸರನ್ನು ತೇಲಿಬಿಟ್ಟು ಈಗ ಹೀನ ರಾಜಕೀಯ ಮಾಡಲಾಗುತ್ತಿದೆ. ಎಂತಹ ಸ್ಥಿತಿಯಲ್ಲೂ ನಾವು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಪದ್ಧತಿ ನಮಗೆ ಗೊತ್ತಿಲ್ಲ. ನಾವು ಜನಸೇವೆ ಮಾಡಲೆಂದು ಬಂದು ಈ ಕ್ಷೇತ್ರಕ್ಕೆ ಬಂದಿರುವವರು ಎಂದರು. 

`ವಿರೋಧಿಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಸಾಕ್ಷ್ಯಾಧಾರಗಳ ಸಮೇತ ಸಾಬೀತು ಪಡಿಸಬೇಕು. ಇಲ್ಲದೆ ಹೋದರೆ ನಾನು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಂತೂ ನಿಶ್ಚಿತ. ನಮ್ಮ ಕುಟುಂಬದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಕೆಲವರು ರಾಜಕೀಯಕ್ಕೆ ಬಂದು ಮನುಷ್ಯತ್ವದ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪಗಳನ್ನು ಮಾಡುವ ಇವರಿಗೆ ನಾಚಿಕೆ ಅನ್ನೋದೇ ಇಲ್ಲವಾ?’ ಎಂದು ಸಚಿವರು ಲೇವಡಿ ಮಾಡಿದರು. 

ಪಿಎಸ್ಐ ಪರೀಕ್ಷೆ ಸಂಬಂಧ ತನಿಖೆ ಆಗಲಿ ಅಂಥ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅವರು ಹೇಳಿದಂತೆ ತನಿಖೆ ನಡೆದರೆ ಒಳ್ಳೆಯದು. ಈ ಆರೋಪದ ಹಿಂದೆ ಏನು ಮ್ಯಾಚ್ ಫಿಕ್ಸಿಂಗ್ ಆಗಿದೆ, ಹುನ್ನಾರ ಏನು, ಷಡ್ಯಂತ್ರ ಏನು ಎಲ್ಲಾ ಗೊತ್ತಾಗಲಿ ಎಂದು ಸವಾಲು ಹಾಕಿದರು. 

ಇದನ್ನೂ ಓದಿ: ಪಿಎಸ್ಐ ಹಗರಣದ ಮೂಲ ಕೆಪಿಸಿಸಿ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ: ಬಿಜೆಪಿ 

ಪಿಎಸ್ಐ ಪರೀಕ್ಷೆ ಕುರಿತ ತನಿಖೆಗೆ ಯಾರಾರನ್ನು ವಿಚಾರಣೆಗೆ ಕರೆದಿದ್ದರು ಎನ್ನುವ ವಿವರವನ್ನು ಬೇಕಾದರೆ ಸಿಐಡಿ ಯಿಂದಲೇ ಪಡೆದುಕೊಳ್ಳಲಿ. ಉಪ್ಪು ತಿಂದವರು ಯಾರೇ ಆಗಿದ್ದರೂ ನೀರು ಕುಡಿಯಲೇ ಬೇಕು’ ಎನ್ನುವವನು ನಾನು. ನನ್ನ ಹೆಸರಿಗೆ ಮಸಿ ಬಳಿಯಲು ನೂರು ಜನ್ಮ ಬಂದರೂ ಸಾಲಲ್ಲ ಎಂದು ಸಮರ್ಥಿಸಿಕೊಂಡರು. 

ಪಿಎಸ್ಐ ನೇಮಕಾತಿ ವಿಷಯದಲ್ಲಿ ಯಾವುದೇ ಅಭ್ಯರ್ಥಿ ಪರವಾಗಿ ಶಿಫಾರಸು ಮಾಡಿಯೇ ಇಲ್ಲ.  ಆಪಾದನೆ ಮಾಡುತ್ತಿರುವವರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಮಾಡಿರಬಹುದು, ಹೋಗಿರಬಹುದು ಎಂಬ ರೀತಿಯಲ್ಲಿ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನಾನು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಭ್ರಷ್ಟಾಚಾರಿಗಳಾದ ಅವರಿಗೆ ಒಳಗೆ ಚುಚ್ಚುತ್ತಿರುತ್ತದೆ. ಅದನ್ನು ತಡೆಯಲಾಗದೇ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಹಾರ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News