ಸೋಮವಾರ ನಮ್ಮ ಸರ್ಕಾರಕ್ಕೆ ಶುಭ ದಿನವಾಗಲಿದೆ ಎಂದು ಡಿಸಿಎಂ ಹೇಳಿದ್ದೇಕೆ?

ಡಿಸೆಂಬರ್‌ 9ರಂದು ಚುನಾವಣೆ ಫಲಿತಾಂಶ ಬಂದ ನಂತರ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಚುನಾವಣೋತ್ತರ ಸಮೀಕ್ಷೆ ನಮ್ಮ ಪರವಾಗಿವೆ, ಇದನ್ನು ಕಂಡೆ ವಿರೋಧ ಪಕ್ಷದವರು ಸ್ತಬ್ಧರಾಗಿದ್ದಾರೆ- ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ 

Yashaswini V Yashaswini V | Updated: Dec 8, 2019 , 06:43 AM IST
ಸೋಮವಾರ ನಮ್ಮ ಸರ್ಕಾರಕ್ಕೆ ಶುಭ ದಿನವಾಗಲಿದೆ ಎಂದು ಡಿಸಿಎಂ ಹೇಳಿದ್ದೇಕೆ?
ಫೋಟೋ:Twitter@drashwathcn

ಮಾಗಡಿ: ಉಪ ಚುನಾವಣೆಯಲ್ಲಿ ನಾವು ಅತಿ ಹೆಚ್ಚು ಸ್ಥಾನ ಅಂದ್ರೆ 12-15 ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ (Dr. CN Ashwaththanarayana)  ಸೋಮವಾರ ನಮ್ಮ ಸರ್ಕಾರಕ್ಕೆ ಶುಭ ದಿನವಾಗಲಿದೆ ಎಂದು ತಿಳಿಸಿದ್ದಾರೆ. 

ಮಾಗಡಿ ತಾಲೂಕಿನ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಸುಗ್ಗನಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಗರುಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ "ಡಿಸೆಂಬರ್‌ 9ರಂದು ಚುನಾವಣೆ ಫಲಿತಾಂಶ ಬಂದ ನಂತರ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಚುನಾವಣೋತ್ತರ ಸಮೀಕ್ಷೆ ನಮ್ಮ ಪರವಾಗಿವೆ, ಇದನ್ನು ಕಂಡೆ ವಿರೋಧ ಪಕ್ಷದವರು ಸ್ತಬ್ಧರಾಗಿದ್ದಾರೆ," ಎಂದರು.

ಇದೇ ವೇಳೆ ಸಚಿವಾಕಾಂಕ್ಷಿಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ಥನಾರಾಯಣ, "ಪ್ರತಿಯೊಬ್ಬರಿಗೂ ಸಚಿವರಾಗಬೇಕೆಂಬ ಆಸೆ ಇದ್ದೇ ಇರುತ್ತದೆ.  ಆದರೆ, ಹೈಕಮಾಂಡ್‌, ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವರು" ಎಂದು ತಿಳಿಸಿದರು.

ಡಿಸೆಂಬರ್ 9ರ ನಂತರ ಕ್ಲೀನಿಂಗ್‌:
ಈಗ ವ್ಯವಸ್ಥೆ ಬದಲಾಗಿದೆ, ಬೇರೆ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಪಕ್ಷಗಳಿಗೂ ಗೊತ್ತಾಗಬೇಕು. ಕಾಲಕ್ರಮೇಣ ಅವರಿಗೆ ಅದು ಅರ್ಥವಾಗುತ್ತೆ. ಅವರು ಹಾಕಿಸಿಕೊಂಡಿದ್ದ ಅಧಿಕಾರಿಗಳ ಮೇಲೆಯೇ ಹರಿಹಾಯುತ್ತಿದ್ದಾರೆ.  ಏನೇನು ಹೇಳ್ತಾರೋ ಹೇಳಲಿ, ಈಗ ನಾನೇನು ಮಾತನಾಡಲ್ಲ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ ಅಶ್ವತ್ಥನಾರಾಯಣ 9ನೇ ತಾರೀಖು ಕಳೆಯಲಿ, ಆ ನಂತರ ಜಿಲ್ಲೆಯಲ್ಲಿ ಕ್ಲೀನಿಂಗ್ ಕೆಲಸವನ್ನು ಪ್ರಾರಂಭ ಮಾಡ್ತೇನೆ ಎಂದು ಪ್ರತಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ. 

ಇತ್ತೀಚೆಗೆ ರಾಮನಗರದಲ್ಲಿ ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಮೇಲೆ ರೇಗಾಡಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಸಂಸದ ಡಿ.ಕೆ.ಸುರೇಶ್‌ಗೆ(DK Suresh) ಈ ರೀತಿಯಾಗಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.