ಬೆಂಗಳೂರು: ಬೇಸಿಗೆಯಲ್ಲಿ ಈ ವರ್ಷ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ಇಂದನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು ನಾವು ಶಕ್ತರಾಗಿದ್ದೇವೆ. ಆದರೂ ಬೇಸಿಗೆಯಲ್ಲಿ ಮತ್ತಷ್ಟು ವಿದ್ಯುತ್ ಬೇಡಿಕೆ ಬರುವ ಸಾಧ್ಯತೆ ಇದ್ದು, 900 ಮೆಗಾವ್ಯಾಟ್ ಖರೀದಿಗೆ ಮುಂದಾಗಿದ್ದೇವೆ ಎಂದರು.
"ಇನ್ನು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಕಲ್ಲಿದ್ದಲು ಪೂರೈಕೆ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಂಬಂಧ ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುವ ನಮ್ಮ ಪ್ರಯತ್ನಗಳು ವ್ಯರ್ಥವಾದವು. ಕಲ್ಲಿದ್ದಲು ಸರಬರಾಜು ಇಲ್ಲದೆ ಹೋದಲ್ಲಿ ನಮ್ಮ ಉಷ್ಣ ವಿದ್ಯುತ್ ಸ್ಥಾವರಗಳನ್ನು ದೀರ್ಘಕಾಲದವರೆಗೆ ನಡೆಸಲು ಸಾಧ್ಯವಿಲ್ಲ. ಬೇಸಿಗೆ ಸಮೀಪಿಸಿದ್ದು ನಮಗೆ ಬಳಕೆಗಾಗಿ ಮತ್ತು ಕೃಷಿ ಉದ್ದೇಶಗಳಿಗಾಗಿ ನೀರಿನ ಅಗತ್ಯವಿರುತ್ತದೆ. ಹಾಗಾಗಿ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರವು ವಿದೇಶದಿಂದ ಕಲ್ಲಿದ್ದಲು ಖರೀದಿಸಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.
ಬೆಸ್ಕಾಂನ 48 ಸಬ್ ಡಿವಿಜನ್ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬಿಲ್ ಬದಲಾವಣೆ ಒಳಗೊಂಡ ಶೀಘ್ರ ಅರ್ಜಿ ವಿಲೇವಾರಿಯ ಫಾಸ್ಟ್ ಟ್ರ್ಯಾಕ್ ಆನ್ ಲೈನ್ ಸೇವೆಯನ್ನು ಒದಗಿಸಲಾಗುತ್ತದೆ. ಯಾವುದೇ ಮಧ್ಯವರ್ತಿ ಸಹಾಯವಿಲ್ಲದೆ ವಿದ್ಯುತ್ ಸೇವೆ ಪಡೆಯಬಹುದಾಗಿದ್ದು. ಆನ್ ಲೈನ್ ನಲ್ಲಿ ಗ್ರಾಹಕರು ತಮ್ಮ ವಿವರ ವಿಳಾಸ ಸಲ್ಲಿಸುವ ಮೂಲಕ ಸೇವೆ ಪಡೆಯಬಹುದು ಎಂದು ತಿಳಿಸಿದರು.