ಬೆಂಗಳೂರು: ಮೈಸೂರು ರೆಡ್ ಝೋನ್ ಇರುವುದರಿಂದ ಜಿಲ್ಲೆಯಲ್ಲಿ ಲಾಕ್ಡೌನ್ (Lockdown) ಸಡಿಲಿಕೆ ಇಲ್ಲ. ಮೆಡಿಕಲ್ ಎಮರ್ಜೆನ್ಸಿಯಂತಹ ತುರ್ತು ಪರಿಸ್ಥಿತಿಗಳಿಗೆ ಮಾತ್ರ ಓಡಾಟಕ್ಕೆ ಅನುಮತಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ಕೃಷಿ ಚಟುವಟಿಕೆಗೆ ಈಗಾಗಲೇ ಅನುಮತಿ ಕೊಡಲಾಗಿದೆ. ಉಳಿದಂತೆ ಈ ಹಿಂದಿನ ಕ್ರಮವೇ ಮುಂದುವರಿಯುತ್ತದೆ. ಐಟಿ-ಬಿಟಿಗೆ ಅಗತ್ಯವಿರುವಷ್ಟು ಮಾತ್ರ ಅನುಮತಿ ಕೊಡಲಾಗಿದ್ದು, ಪರಿಸ್ಥಿತಿ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇನ್ನು ಕಟ್ಟಡ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಕಾರ್ಮಿಕರು ಮೈಸೂರು ಜಿಲ್ಲೆಯವರಾಗಿದ್ದು, ಇಲ್ಲೇ ಇದ್ದರೆ ಮಾತ್ರ ಕೆಲಸ ಮಾಡಬಹುದು. ಹೊರ ಜಿಲ್ಲೆ ಇಲ್ಲವೇ ರಾಜ್ಯಗಳಿಂದ ಈ ಸಂದರ್ಭದಲ್ಲಿ ಇಲ್ಲಿಗೆ ಬಂದು ಕೆಲಸ ಮಾಡಲು ಅನುಮತಿ ಇಲ್ಲ. ತೀರಾ ತುರ್ತು ಇದ್ದವರು ಅನುಮತಿ ಪಡೆದು ಕೆಲಸ ಮಾಡಿಸಿಕೊಳ್ಳಬಹುದು. ಇನ್ನು ಕಬ್ಬಿಣ ಹಾರ್ಡ್ವೇರ್ ಅಂಗಡಿಗಳು ತೆರೆಯುವಂತಿಲ್ಲ. ಪ್ಲಂಬರ್ ಎಲೆಕ್ಟ್ರಿಕ್ ಕೆಲಸಗಳಿಗೆ ಪೊಲೀಸ್ ಅನುಮತಿ ಅವಶ್ಯಕ. ಉಳಿದ ವಿಷಯಗಳಿಗೆ ಮೇ 3ನೇ ತಾರೀಖಿನವರೆಗೆ ಯಾವುದೇ ಕಾರಣಕ್ಕೂ ಅನುಮತಿ ಇಲ್ಲ. ಆಮೇಲೆ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದೆ ಏನು ಮಾಡಬಹುದು ಎಂದು ತೀರ್ಮಾನ ಮಾಡಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಮೈಸೂರಲ್ಲಿ ಇಷ್ಟು ಸೋಂಕು ಹರಡಲು ಜ್ಯೂಬ್ಲಿಯೆಂಟ್ ಹಾಗೂ ಜಮೈತ್ ನವರಿಂದ ಹೆಚ್ಚಾಗಿ ಬಂದಿದೆ. ಆದರೆ, ಇಲ್ಲಿಗೆ ಬಂದಿರುವುದು ಕೇವಲ 3ರಿಂದ 4 ಮಾತ್ರ. ಹೀಗಾಗಿ ಇಲ್ಲಿಯವರೆಗೆ ಸಹಕಾರ ನೀಡಿದ ಮಾನ್ಯ ಜನತೆ ಮುಂದೂ ಸಹಕಾರ ನೀಡಲಿ ಎಂದು ಕೋರಿಕೊಳ್ಳುವೆ ಎಂದು ಸಚಿವರು ತಿಳಿಸಿದರು.
ರೈತರು (Farmers) ತಮ್ಮ ಹಳೇ ಸಾಲವನ್ನು ತೀರಿಸುವ ಸಲುವಾಗಿ ಸುಸ್ತಿ ಮನ್ನಾ ಮಾಡಲಾಗುವುದು. ಇದಕ್ಕೆ ಮಾರ್ಚ್ 31ರ ವರೆಗೆ ಗಡುವು ನೀಡಲಾಗಿತ್ತು. ಈ ಗಡುವನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು. ಅವಧಿ ವಿಸ್ತರಣೆಯಿಂದ 14 ಕೋಟಿ ರೂ. ಬಡ್ಡಿ ಹೊರೆ ಬರುತ್ತದೆ. ಅದನ್ನು ನಾವೇ ಭರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ಇನ್ನು ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ, ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಆಚೆ ಬರಕೂಡದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಬಡವರಿಗೆ ಆಹಾರ ಕಿಟ್ ವಿತರಣೆ:
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದ ಆವರಣದಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್ ಬಡವರಿಗೆ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಥ ಸನ್ನಿವೇಶದಲ್ಲಿ ಆಶ್ರಮ ಜನತೆಗೆ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕೆ ನಾನು ರಾಜ್ಯ ಸರ್ಕಾರದ ಸಚಿವನಾಗಿ ಹಾಗೂ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸುವೆ. ಇದೇ ರೀತಿ ಶಾಸಕರು ಸೇರಿ ಜನಪ್ರತಿನಿಧಿಗಳೂ ಇಂತಹ ಕಾರ್ಯ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಸಚಿವರು ತಿಳಿಸಿದರು.
ಸ್ವಾಮಿ ಮುಕ್ತಿದಾನಂದ ಜಿ ಮಾತನಾಡಿ, ಕೊರೋನಾವೈರಸ್ (Coronavirus) ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು, ಅಂತರ ಕಾಯ್ದುಕೊಳ್ಳಲು ಸೋಪು, ಬಟ್ಟೆ ಸೋಪು, ಆಹಾರ ಕಿಟ್ ಸೇರಿದಂತೆ ಅಗತ್ಯ ಇರುವ ಎಲ್ಲ ವಸ್ತುಗಳನ್ನು ನೀಡಲಾಗಿದೆ. ನೀವು ಕೈಗಳನ್ನು ಆಗಾಗ ಚೆನ್ನಾಗಿ ತೊಳೆದುಕೊಂಡು ಸೋಂಕಿನಿಂದ ದೂರ ಇರಿ. ಜೊತೆಗೆ ಬಡವರು ಹಸಿದುಕೊಂಡು ಇರಬಾರದು ಎಂದು ನಾವೂ ಸಹ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.