ಬೆಂಗಳೂರು: ಮಿಂಟೋ ಆಸ್ಪತ್ರೆ ಮುಷ್ಕರ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಪ್ರಯತ್ನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwattanarayana) ಮಂಗಳವಾರ ಹೇಳಿದ್ದಾರೆ.
"ಮಿಂಟೋ ಆಸ್ಪತ್ರೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಆದ ತಪ್ಪಿನಿಂದ ಕಣ್ಣು ಕಳೆದುಕೊಂಡವರು ಹಾಗೂ ಸಂತ್ರಸ್ತರ ಪರ ನಡೆದ ಹೋರಾಟದ ವೇಳೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣದ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು. ಇಬ್ಬರಿಗೂ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ. ಸರ್ಕಾರ ಇರುವುದೇ ಸಮಾಜ ಮತ್ತು ನಾಗರಿಕರಿಗಾಗಿ," ಎಂದು ಮಾಧ್ಯಮದವರ ಜತೆ ಮಾತನಾಡುತ್ತಾ ಸಚಿವರು ತಿಳಿಸಿದ್ದಾರೆ.
ಡಾ. ರವಿ ಎನ್ನುವವರು ಪ್ರತಿಭಟನೆಗೆ ಕುಮ್ಮುಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಇಂಥ ಸೂಕ್ಷ್ಮ ಸಂದರ್ಭಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಇರುತ್ತಾರೆ. ಈ ರೀತಿ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೆ ಒಂದೊಂದು ರೀತಿಯ ಒಲವು ಇರುತ್ತದೆ. ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಳ್ಳುವ ಜನ ಇರುತ್ತಾರೆ. ಅಂಥ ಮಹಾನುಭಾವರ ಪ್ರಚೋದನೆಗೆ ಒಳಗಾಗಬಾರದೆಂದು ಎಲ್ಲ ವೈದ್ಯ ಸ್ನೇಹಿತರು ಹಾಗೂ ಹೋರಾಟಗಾರರಲ್ಲಿ ಮನವಿ ಮಾಡುತ್ತೇನೆ," ಎಂದಿದ್ದಾರೆ.
"ಎಲ್ಲರೂ ಕಾನೂನನ್ನು ಕೈಗೆ ತಗೆದುಕೊಂಡರೆ ವ್ಯವಸ್ಥೆ ನಿಯಂತ್ರಣ ಹೇಗೆ ಸಾಧ್ಯ ?
ಹೋರಾಟಗಾರರು ಅಥವಾ ವೈದ್ಯರು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರೂ ಅವರವರ ಕೆಲಸ ಮಾಡಿದರೆ ಯಾರಿಗೂ ತೊಂದರೆ ಆಗದು. ಯಾವುದೇ ಕಾರಣಕ್ಕೂ ಅಮಾಯಕರಿಗೆ ತೊಂದರೆ ಆಗಬಾರದು. ಸಾಮಾನ್ಯ ಜನರು ಇವರ ಆಟಕ್ಕೆ ಬಲಿಪಶು ಆಗಬಾರದು. ಈ ವಿಚಾರದಲ್ಲಿ ರಾಜಕೀಯ ಬೇಡ. ಈ ಎಲ್ಲ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಪ್ರಯತ್ನ ನಡೆಯುವುದು,"ಎಂದು ಅವರು ಡಿಸಿಎಂ ಅಶ್ವತ್ಥನಾರಾಯಣ ಭರವಸೆ ನೀಡಿದರು.
ಇನ್ನು ಮುಂದೆ ಇಂಥ ಪ್ರಕರಣಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಪ್ರಶ್ನೆಗೆ ವಿವರಣೆ ನೀಡಿದ ಸಚಿವರು, "ವೈದ್ಯರು ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ವೈದ್ಯರ ಹಿತಾಸಕ್ತಿ ಕಾಯುವಂಥ ಕಾನೂನುನ್ನು ಈ ಹಿಂದೆಯೇ ಪರಿಚಯಿಸಲಾಗಿದೆ. ಕಾನೂನು, ವ್ಯವಸ್ಥೆ, ಸಮಾಜದ ಬಗ್ಗೆ ವೈದ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಅಥವಾ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ವೈದ್ಯರ ರಕ್ಷಣೆಗೆ ಕೃತಕ ಬುದ್ಧಿಮತ್ತೆ, ಆಧುನಿಕ ತಂತ್ರಜ್ಞಾನ ಅನುಸರಿಸಲಾಗುವುದು. ತುರ್ತು ಪರಿಸ್ಥಿತಿ ನಿಭಾಯಿಸಲು ಆಂತರಿಕ ಪಡೆ, ಪೊಲೀಸ್ ಹಾಗೂ ಮೀಸಲು ಪಡೆ ಸ್ಥಳಕ್ಕೆ ಧಾವಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಬೆಂಗಳೂರು ಮಾತ್ರ ಅಲ್ಲ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗುವುದು" ಎಂದು ಅವರು ಹೇಳಿದ್ದಾರೆ.