ಕರ್ನಾಟಕ ಉಪಚುನಾವಣೆ: ಮಧ್ಯಾಹ್ನದವರೆಗೆ ಎಲ್ಲೆಲ್ಲಿ ಎಷ್ಟು ಮತದಾನ?

ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿಯಲ್ಲಿ ಶೇ.35.72, ಮಂಡ್ಯದಲ್ಲಿ ಶೇ.26.80 ಮತ್ತು ಶಿವಮೊಗ್ಗದಲ್ಲಿ ಶೇ.30.20ಯಷ್ಟು ಮತದಾನವಾಗಿದೆ.   

Last Updated : Nov 3, 2018, 02:55 PM IST
ಕರ್ನಾಟಕ ಉಪಚುನಾವಣೆ: ಮಧ್ಯಾಹ್ನದವರೆಗೆ ಎಲ್ಲೆಲ್ಲಿ ಎಷ್ಟು ಮತದಾನ? title=

ಬೆಂಗಳೂರು: ರಾಜ್ಯದ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭೆ ಕ್ಷೇತ್ರ ಹಾಗೂ ಜಮಖಂಡಿ, ರಾಮನಗರ ವಿಧಾನಸಭೆ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಬಿರುಸಿನಿಂದ ನಡೆಯುತ್ತಿದೆ. 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಉಪ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.43.50 ರಷ್ಟು ಮತದಾನ ದಾಖಲಾಗಿದ್ದರೆ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.39.81ರಷ್ಟು ಮತದಾನ ನಡೆದಿದೆ. ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿಯಲ್ಲಿ ಶೇ.35.72, ಮಂಡ್ಯದಲ್ಲಿ ಶೇ.26.80 ಮತ್ತು ಶಿವಮೊಗ್ಗದಲ್ಲಿ ಶೇ.30.20 ಮತದಾನವಾಗಿದೆ. 

ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ.ಕಚೇರಿ ಸ್ಥಳಾಂತರ ವಿರೋಧಿಸಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ತಾಲೂಕಿನ ವಲ್ಲಬಾಪುರ ಗ್ರಾಮದಲ್ಲಿ ಹರಪನಹಳ್ಳಿ‌ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನದಿಂದ‌ ಮತದಾನ ಒಂದು ಗಂಟೆ ಸ್ಥಗಿತಗೊಂಡಿತ್ತು. ಶ್ರದ್ಧಾಂಜಲಿ ಬಳಿಕ ಮತದಾನ ಮುಂದುವರಿದಿದೆ. 

ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಿ.ಎಸ್.ಪುಟ್ಟರಾಜು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಇನ್ನುಳಿದಂತೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ಚನ್ನಪಟ್ಟಣ ಮತ್ತು ರಾಮನಗರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ರಾಮನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇನ್ನು, ಜಮಖಂಡಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ನ್ಯಾಮಗೌಡ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. 

Trending News