ಮೈಸೂರು: ಇದ್ಯಾಕೋ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮತ್ತು ಪ್ರೇಮಕುಮಾರಿ ಪ್ರಕರಣ ಅಂತ್ಯ ಕಾಣುವ ಹಾಗೆ ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಪ್ರೇಮಕುಮಾರಿ ಅವರು, ಇಂದು ಶಾಸಕ ರಾಮದಾಸ್ ಕಚೇರಿ ಮುಂದೆ ದಿಡೀರ್ ಪ್ರತ್ಯಕ್ಷವಾಗಿ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಮದಾಸ್ ಅವರಿಂದ ತಮಗೆ ಮೋಸವಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಪ್ರೇಮ ಕುಮಾರಿ ಅವರು, ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಕಾಯಲು ಸಾಧ್ಯವಿಲ್ಲ. ರಾಮದಾಸ್ ಅವರೇ ನನ್ನ ಗಂಡ. ನಾನು ಅವರ ಜೊತೆಗೇ ಬದುಕಬೇಕು, ನಾನು ಸತ್ತರೂ ಅವರನ್ನು ಬಿಡುವುದಿಲ್ಲ, ನಂಗೆ ನ್ಯಾಯ ಕೊಡಿಸಿ" ಎನ್ನುತ್ತಾ ಅವರ ಕಚೇರಿಯ ಮುಂದೆಯೇ ಇಂದು ಪ್ರತಿಭಟನೆ ನಡೆಸಿದರು.
ಅಷ್ಟೇ ಅಲ್ಲದೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸದೆ ಕೃಷ್ಣರಾಜ ಕ್ಷೇತ್ರವನ್ನು ರಾಮದಾಸ್ ಅವರಿಗಾಗಿ ಬಿಟ್ಟುಕೊಟ್ಟಿದ್ದೆ. ಲಿಂಗಾಯತರ ಮತಗಳು ವಿಭಜನೆಯಾಗದಂತೆ ನೋಡಿಕೊಂಡಿದ್ದೆ. ಈಗ ಅವರು ಗೆದ್ದಿದ್ದಾರೆ. ಈಗ ನನಗೆ ಮೋಸ ಆಗಬಾರದು, ಚುನಾವಣೆ ಮುಂಚೆ ನಂಗೆ ನೀಡಿದ್ದ ಭರವಸೆಯಂತೆ ರಾಮದಾಸ್ ಅವರು ನಡೆದುಕೊಳ್ಳಬೇಕು. ಅವರಿಂದಾಗಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಕೆಲಸ ಕಳೆದುಕೊಂಡು ಪೋಷಕರ ಆಶ್ರಯದಲ್ಲಿದ್ದೇನೆ. ರಾಮದಾಸ್ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಪ್ರೇಮ ಕುಮಾರಿ ಅವರನ್ನು ಪೋಲಿಸರೇ ಸಮಾಧಾನ ಮಾಡಿ ಸ್ಥಳದಿಂದ ತೆರಳುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.