ಪಿಎಸ್‌ಐ ನೇಮಕಾತಿ ಹಗರಣ: 'ಸರ್ಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ '

ಪಿಎಸ್ಐ ನೇಮಕ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಹಗರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಸಹ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : May 27, 2022, 08:53 PM IST
  • ಹಲವಾರು ವಕೀಲರುಗಳು, ನಾಗರಿಕ ಸಂಘಟನೆಗಳು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಪಿಎಸ್‍ಐ ಹಗರಣದಲ್ಲಿ ಐದು ಮಂದಿ ಸಚಿವರ ನೇರ ಕೈವಾಡ ಇದೆ.
  • ನೂರಾರು ಕೋಟಿ ಹಣ ಈ ಐದು ಮಂದಿ ಸಚಿವರ ಕಿಸೆ ಸೇರಿದೆ.
 ಪಿಎಸ್‌ಐ ನೇಮಕಾತಿ ಹಗರಣ: 'ಸರ್ಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ ' title=
Photo Courtsey: Twitter

ಬೆಂಗಳೂರು: ಪಿಎಸ್ಐ ನೇಮಕ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಹಗರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಿದ್ದರೂ ಸಹ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇನ್ನೂ ಮುಂದುವರೆದು ಅವರು 'ಜೊತೆಗೆ ಯಾವ ಮಂತ್ರಿಗಳ ಮೇಲೆ ಆರೋಪವಿದೆಯೋ ಕೂಡಲೆ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸಬ್ ಇನ್‍ಸ್ಪೆಕ್ಟರ್ ನೇಮಕಾತಿ ಹಗರಣದ ಕುರಿತು ಕೆಲವು ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ದಿನಾಂಕ: 10-4-2022 ರಂದು ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ನಾವು ಆಗಲೂ ಸಿಐಡಿ ತನಿಖೆಯನ್ನು ವಿರೋಧಿಸಿದ್ದೆವು. ಇದಕ್ಕೆ ಮುಖ್ಯ ಕಾರಣ ಈ ಪ್ರಕರಣದಲ್ಲಿ ಸರ್ಕಾರದಲ್ಲಿರುವ ಪ್ರಬಲ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರನ್ನು ಧೈರ್ಯವಾಗಿ ವಿಚಾರಣೆ ನಡೆಸಿ ಬಂಧಿಸುವ ತಾಕತ್ತು ಸಿಐಡಿಗೆ ಇಲ್ಲ, ಹಾಗಾಗಿ ಈ ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೆವು.ಈ ಕುರಿತು ಕಳೆದ ಅಧಿವೇಶನದಲ್ಲೂ ಆಗ್ರಸಿದ್ದೆವು. ಆದರೆ ಸರ್ಕಾರಕ್ಕೆ ಒಳಗೊಳಗೆ ಭಯವಿದ್ದ ಕಾರಣಕ್ಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿಲ್ಲ. ಪ್ರಬಲ ತಿಮಿಂಗಿಲಗಳನ್ನು ಹಿಡಿದು ತನಿಖೆ ನಡೆಸುವ ಶಕ್ತಿ ಸಿಐಡಿಗೆ ಇಲ್ಲ ಎಂದು ನಾವು ಹೇಳಿದ್ದ ಮಾತಿನಂತೆಯೇ ಈಗ ಈ ತನಿಖಾ ಸಂಸ್ಥೆಯು ನಡೆದುಕೊಳ್ಳುತ್ತಿದೆ. ಇಷ್ಟು ದಿನವಾದರೂ ಸಹ ಒಬ್ಬನೆ ಒಬ್ಬ ಪ್ರಭಾವಿಯನ್ನು ಅಥವಾ ವಿಧಾನಸೌಧದಲ್ಲಿ ಕೂತವರನ್ನು ತನಿಖೆಗೆ ಒಳಪಡಿಸಿಲ್ಲ. ಜನರ ಕಣ್ಣ ಮುಂದೆಯೆ ಹಲವಾರು ಸಾಕ್ಷಿಗಳಿದ್ದರೂ ಸಹ ಜನರೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಸಹ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿಲ್ಲ. ಇದನ್ನು ನೋಡಿದರೆ ಇಡೀ ಹಗರಣವನ್ನು ನಿಧಾನಕ್ಕೆ ಕತ್ತು ಹಿಸುಕಿ ಮೂಲೆಗೆ ಎಸೆಯುವ ಹುನ್ನಾರ ಕಾಣಿಸುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ವಿಕ್ರಾಂತ್ ರೋಣ’ ಸಾಂಗ್‌ ರಿಲೀಸ್..!‌ ಅಭಿನಯ ಚಕ್ರವರ್ತಿ ಅಭಿಮಾನಿಗಳ ಸಂಭ್ರಮಾಚರಣೆ..!

ಸರ್ಕಾರ ಆರಂಭದಿಂದಲೂ ನೇಮಕಾತಿಯಲ್ಲಿ ಹಗರಣಗಳೆ ನಡೆದಿಲ್ಲವೆಂದು ಪ್ರತಿಪಾದಿಸುವ ಕೆಲಸ ಮಾಡಿತು. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್‍ಐ ನೇಮಕಾತಿಯಲ್ಲಿ ಯಾವುದೇ ಲೋಪ ನಡೆದಿಲ್ಲ, ಹಗರಣ ಕೂಡ ನಡೆದಿಲ್ಲ ಎಂದು ವಿಧಾನಸಭಾ ಅಧಿವೇಶನದಲ್ಲೇ ಸುಳ್ಳು ಹೇಳಿದರು. ತನಿಖೆಯನ್ನು ಸಿಐಡಿಗೆ ವಹಿಸುವುದು ನಿಮಗೂ ಅನಿವಾರ್ಯ ಆಗುವಷ್ಟು ಸಾಕ್ಷ್ಯಗಳು ಬಹಿರಂಗಗೊಂಡವು. ಹಾಗಾಗಿ ತನಿಖೆಗೆ ವಹಿಸಿದಿರಿ. ಆದರೆ ಇದುವರೆಗೆ ಸಿಐಡಿ ತನಿಖೆಯಿಂದ ಸಾಧಿಸಿದ್ದಾದರೂ ಏನು ? ಎಂದು ಅವರು ಪ್ರಶ್ನಿಸಿದರು.

ಒಬ್ಬೊಬ್ಬ ಪಿಎಸ್‍ಐ ನೇಮಕಕ್ಕೆ 30 ಲಕ್ಷದಿಂದ ಒಂದೂವರೆ ಕೋಟಿ ರೂಪಾಯಿವರೆಗೂ ಹಣ ಪಡೆಯಲಾಗಿದೆ ಎನ್ನುವ ಸಂಗತಿ ಸಿಐಡಿ ತನಿಖೆಯಿಂದ ಹೊರಗೆ ಬಂತು. ನೇಮಕಾತಿಗಾಗಿ ಹಣ ಕೊಟ್ಟ, ಹಣಕ್ಕಾಗಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದ ಸಣ್ಣ ಪುಟ್ಟ ಕೆಲವರನ್ನು ಬಂಧಿಸಿದಿರಿ. ಆದರೆ ನೂರಾರು ಕೋಟಿ ಹಣ ಯಾರ ಕೈ ಸೇರಿತು ಎನ್ನುವುದನ್ನು ಬಹಿರಂಗಗೊಳಿಸಲೇ ಇಲ್ಲ. ಹಣ ಪಡೆದ ದೊಡ್ಡ ತಲೆಗಳನ್ನು ಈ ಕ್ಷಣಕ್ಕೂ ಬಂಧಿಸಿಲ್ಲ. ನೆಪಕ್ಕೂ ಅವರನ್ನು ತನಿಖೆಗೆ ಒಳಪಡಿಸಿಲ್ಲ. ಒಂದು ನೋಟಿಸ್ ಕೂಡ ನೀಡಿಲ್ಲ. ಪಡೆದಿದ್ದ ಲಂಚದ ಹಣದಲ್ಲಿ ಶೇ 10 ರಷ್ಟನ್ನೂ ಇನ್ನೂ ವಶಪಡಿಸಿಕೊಂಡಿಲ್ಲ. ಆದರೆ, ಹಗರಣದ ಬಗ್ಗೆ ಧ್ವನಿ ಎತ್ತಿದ್ದ ನಮ್ಮ ಪಕ್ಷದ ಶಾಸಕರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ತನಿಖೆಯ ದಿಕ್ಕು ತಪ್ಪಿಸಲು ಹೆಣಗಾಡಿದಿರಿ ಎಂದರು.

ಇದನ್ನೂ ಓದಿ: ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..!

ಹಲವಾರು ವಕೀಲರುಗಳು, ನಾಗರಿಕ ಸಂಘಟನೆಗಳು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಪಿಎಸ್‍ಐ ಹಗರಣದಲ್ಲಿ ಐದು ಮಂದಿ ಸಚಿವರ ನೇರ ಕೈವಾಡ ಇದೆ. ನೂರಾರು ಕೋಟಿ ಹಣ ಈ ಐದು ಮಂದಿ ಸಚಿವರ ಕಿಸೆ ಸೇರಿದೆ. ಮಾಜಿ ಮುಖ್ಯಮಂತ್ರಿಗಳೊಬ್ಬರ ಪುತ್ರ ಹಗರಣದಲ್ಲಿ ನೇರ ಭಾಗಿ ಆಗಿದ್ದು ಒಟ್ಟು 514 ಪಿಎಸ್‍ಐ ಹುದ್ದೆಗಳಲ್ಲಿ ಇವರ ಸೂಚನೆ ಮೇರೆಗೇ 63 ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿ ನಡೆದಿದೆ ಎನ್ನುವ ನೇರ ಆರೋಪಗಳನ್ನು ಮಾಡಿದ್ದಾರೆ.ಆದರೆ ಸಿಐಡಿ ಮಾತ್ರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಸಿಐಡಿಯು ಇದುವರೆಗೆ ಅವರುಗಳಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿಲ್ಲ. ಆದರೆ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿದ ನಮ್ಮ ಪಕ್ಷದ ಶಾಸಕರಿಗೆ ಮಾತ್ರ ಮೇಲಿಂದ ಮೇಲೆ ನೋಟಿಸ್ ನೀಡಿದ್ದೀರಿ. ಇದುವರೆಗೂ ಸಹ ವಿಧಾನಸೌಧ ಮುಂತಾದ ಕಡೆ ಕೂತಿರುವ ಹಗರಣದ ರೂವಾರಿಗಳನ್ನು ಮುಟ್ಟುವ ಕೆಲಸ ಮಾಡಿಲ್ಲ. ಏನಿದರ ಅರ್ಥ? ಯಾರನ್ನು ರಕ್ಷಿಸಲು ಈ ತನಿಖೆ ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸರ್ಕಾರ ನೆಪಕ್ಕೆ ಮಾತ್ರ ಜನರ ಕಣ್ಣೊರೆಸಲು ಸಿಐಡಿ ತನಿಖೆ ನಡೆಸುತ್ತಿರುವಂತಿದೆ. ಒಂದೊಂದು ಹುದ್ದೆಗೂ ಪಡೆದ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಯಾರ ಕೈ ಸೇರಿದೆ? ಸರ್ಕಾರದ ದೊಡ್ಡ ತಲೆಗಳ ಸೂಚನೆ ಇಲ್ಲದೆ ಕೇವಲ ಕೆಳ ಹಂತದ ಅಧಿಕಾರಿಗಳು ನೂರಾರು ಕೋಟಿ ಹಣವನ್ನು ಸುಲಿಗೆ ಮಾಡಲು ಸಾಧ್ಯವೇ? ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳನ್ನು ಪುರಸ್ಕಾರದ ರೀತಿಯಲ್ಲಿ ವರ್ಗಾವಣೆ ಮಾಡಿದ್ದು ಬಿಟ್ಟರೆ ಯಾರನ್ನೂ ಬಂಧಿಸಿಲ್ಲ. ಅವರು ಪಡೆದ ಹಣವನ್ನೂ ವಶಪಡಿಸಿಕೊಂಡಿಲ್ಲ. ಹೀಗಾಗಿ ದೊಡ್ಡ ತಲೆಗಳನ್ನು ರಕ್ಷಿಸಲಿಕ್ಕೆಂದೇ ಸಿಐಡಿ ತನಿಖೆ ನಡೆಸಿರುವುದು ಖಚಿತವಾಗುತ್ತಿದೆ. ತನಿಖೆ ನಿರ್ಭೀತವಾಗಿ, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.ಈ ರೀತಿಯ ತನಿಖೆಯಿಂದ ಕಳ್ಳರನ್ನು ಹುಡುಕಿ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News