ಸಂಗೀತ ದಾಸೋಹದ ಜಂಗಮ ಪಂಡಿತ ಪುಟ್ಟರಾಜ ಗವಾಯಿಗಳು

Written by - Manjunath N | Last Updated : Mar 3, 2022, 04:49 PM IST
  • ಪಂಚಾಕ್ಷರಿ ಗವಾಯಿಗಳ ಆಶೀರ್ವಾದದಿಂದ ಅವರು ಮುಂದೆ ಬಹುಭಾಷಾ ವಿದ್ವಾಂಸರಾಗಿದ್ದಲ್ಲದೆ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತಿಯನ್ನು ಸಾಧಿಸಿದರು.
  • ಸಂಗೀತ ಸೇವೆಯ ಜೊತೆ ಅವರು ಸ್ವತಃ 35 ನಾಟಕಗಳನ್ನು ರಚಿಸಿದ್ದಾರೆ​.
  • ಅವರು ನಿಧನರಾಗಿ 12 ವರ್ಷಗಳಾಗುತ್ತಾ ಬಂದಿದೆ, ಆದರೆ ಅವರ ಬತ್ತದ ಅನ್ನ ದಾಸೋಹ, ಸಂಗೀತ ದಾಸೋಹ ಮಾತ್ರ ನಿತ್ಯವೂ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತಿದೆ.
 ಸಂಗೀತ ದಾಸೋಹದ ಜಂಗಮ ಪಂಡಿತ ಪುಟ್ಟರಾಜ ಗವಾಯಿಗಳು   title=

ನಡೆದಾಡುವ ದೇವರು, ಅಂಧ ಆನಾಥರ ಆಶ್ರಯದಾತ, ಗಾನ ಗಂಧರ್ವ, ಪದ್ಮಭೂಷಣ ಎಂದೇ ಜನ ಮಾನಸದಲ್ಲಿ ಅಜರಾಮರವಾಗಿರುವ ಪುಟ್ಟರಾಜ ಗವಾಯಿಗಳು ಇಂದು ಬದುಕಿದ್ದರೆ ಅವರಿಗೆ 108 ವರ್ಷಗಳು ತುಂಬಿರುತ್ತಿತ್ತು.

ಪಂಡಿತ್ ಪುಟ್ಟರಾಜ ಗವಾಯಿಗಳು (Puttaraj Gawai) ಕೇವಲ ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಅವರು ಶಿಕ್ಷಕರು, ವಿದ್ವಾಂಸರು, ಗ್ವಾಲಿಯರ್ ಘರಾನಾದಲ್ಲಿ ಪರಿಣಿತಿ ಪಡೆದಿದ್ದ ಖಾತ್ಯ ಸಂಗೀತ ತಜ್ಞರಾಗಿದ್ದರು, ಬಾಲ್ಯದಲ್ಲಿ ತಮ್ಮ ಕಣ್ಣುಗಳನ್ನು ಕಳೆದುಕೊಂಡರು ಸಹಿತ ನಿರಂತರ ಸಂಗೀತಕ್ಕಾಗಿ ಅವರ ಅವಿರತ ಪ್ರಯತ್ನ ಮುಂದೆ ಸಂಗೀತದ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯನ್ನು ನೀಡಿತು. ತ್ರಿಭಾಷಾ ವಿದ್ವಾಂಸರಾಗಿದ್ದ ಗವಾಯಿಗಳು ಸಾರಂಗಿ, ಪಿಟೀಲು, ವೀಣೆ, ಮ್ಯಾಂಡೋಲಿನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್ ಮತ್ತು ಸಿತಾರ್ ನುಡಿಸುತ್ತಿದ್ದ ರೀತಿ ನಿಜಕ್ಕೂ ಎಲ್ಲರಿಗೂ ಬೆರಗು ಹುಟ್ಟಿಸುವಂತಿತ್ತು, ಅವರು ಸಾಹಿತ್ಯ, ಸಂಗೀತ, ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ರಚಿಸಿದ ಒಟ್ಟು 80 ಕೃತಿಗಳು ಅವರ ಅಗಾಧ ಸಾಹಿತ್ಯ ಕೃಷಿಯ ವಿಸ್ತಾರವನ್ನು ತಿಳಿಸುತ್ತದೆ.

ಇದನ್ನೂ ಓದಿ: Pandit Puttaraj Gawai: ಪಂಡಿತ್ ಪುಟ್ಟರಾಜ ಗವಾಯಿಗಳ ಜೀವನ ಚಿತ್ರಣ

ಇಂದು ಇಂತಹ ಮಹಾನ್ ಸಂಗೀತ ಸಾಮ್ರಾಟ್ ರ ಜನ್ಮದಿನಾಚರಣೆ, ಈ ಹಿನ್ನಲೆಯಲ್ಲಿ ಅವರು ಸಂಗೀತ ಹಾಗೂ ಸಾಹಿತ್ಯ, ಕಲೆ, ಸಮಾಜಸೇವೆಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕಾಗಿದೆ. 1914 ರ ಮಾರ್ಚ್ 3 ರಂದು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ರೇವಣಯ್ಯ ಮತ್ತು ಸಿದ್ದಮ್ಮ ದಂಪತಿಗೆ ಜನಿಸಿದ ಪುಟ್ಟರಾಜ ಗವಾಯಿಗಳು ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ಬಾಲ್ಯದಲ್ಲಿಯೇ ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡರು.

ಅವರ ತಂದೆಯ ಮರಣವು ಅವರ ತಾಯಿಯು ಅವರ ತಾಯಿಯ ಚಿಕ್ಕಪ್ಪ ಚಂದ್ರಶೇಖರಯ್ಯ ಅವರ ಮನೆಗೆ ಸ್ಥಳಾಂತರಗೊಂಡರು, ಅವರು ನಂತರ ಪುಟ್ಟರಾಜ್ ಗವಾಯಿಗಳಿಗೆ ಮೊದಲ ಸಂಗೀತ ಗುರುಗಳಾದರು. ಚಿಕ್ಕಂದಿನಲ್ಲಿಯೇ ಪುಟ್ಟರಾಜರ ಸಾಮರ್ಥ್ಯವನ್ನು ಗ್ರಹಿಸಿದ ಅವರು ಮುಂದೆ ಪಂಚಾಕ್ಷರಿ ಗವಾಯಿಗಳು ನಡೆಸುತ್ತಿದ್ದ ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದೊಯ್ದರು, ಇದು ಅನೇಕ ದೃಷ್ಟಿಹೀನ ಮಕ್ಕಳಿಗೆ ಮತ್ತು ಅನಾಥರಿಗೆ ಆಶ್ರಯ ನೀಡುತ್ತಿದ್ದ ಆಶ್ರಮವಾಗಿತ್ತು.

ಇದನ್ನೂ ಓದಿ: M S Subbulakshmi Birth Anniversary: ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರನ್ನು ಸ್ಮರಿಸುತ್ತಾ..

ಪಂಚಾಕ್ಷರಿ ಗವಾಯಿಗಳ ಆಶೀರ್ವಾದದಿಂದ ಅವರು ಮುಂದೆ ಬಹುಭಾಷಾ ವಿದ್ವಾಂಸರಾಗಿದ್ದಲ್ಲದೆ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತಿಯನ್ನು ಸಾಧಿಸಿದರು. ಕಾಲಾಂತರದಲ್ಲಿ ಪಂಚಾಕ್ಷರಿ ಗವಾಯಿಗಳ ನಿಧನದ ನಂತರ ಅವರು ವೀರೇಶ್ವರ ಪುಣ್ಯಾಶ್ರಮದ ಉಸ್ತುವಾರಿಯನ್ನು ವಹಿಸಿಕೊಂಡರು, ಪಂಚಾಕ್ಷರಿ ಗವಾಯಿಗಳು ಹಾಕಿಕೊಟ್ಟ ದಾರಿಯಲ್ಲಿಯೇ ಸಾಗಿದ ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮವನ್ನು ದೇಶದ ಪ್ರಮುಖ ಸಂಗೀತ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ್ದಲ್ಲದೆ, ಅಂದ ಅನಾಥರಿಗೆ ನೆಲೆಯನ್ನು ಕಲ್ಪಿಸುವ ಮೂಲಕ ಅವರಿಗೆ ದಾರಿ ದೀಪವಾದರು.

ಕೇವಲ ಇಷ್ಟಕ್ಕೆ ಸೀಮಿತವಾಗದೆ ಅವರು ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪತ್ರಿಕೆ, ಹಾಗೂ ಮುದ್ರಣವನ್ನು ಆರಂಭಿಸಿದರು, ಆ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಜ್ಞಾನವನ್ನು ಅವರು ತಮ್ಮ ಸಾಹಿತ್ಯದ ಮೂಲಕ ನಾಡಿನಾಧ್ಯಂತ ತಲುಪಿಸುವ ಕೆಲಸವನ್ನು ಮಾಡಿದರು. ನಾಟಕ ಕಂಪನಿಯನ್ನು ಆರಂಭಿಸುವ ಮೂಲಕ ಅವರ ಕಂಪನಿಯ ನಾಟಕಗಳು ನಾಡಿನಾಧ್ಯಂತ ಪ್ರದರ್ಶನವನ್ನು ಕಂಡವು, ಇದರಿಂದ ಬಂದಂತಹ ಆದಾಯವನ್ನು ಆಶ್ರಮವನ್ನು ನಡೆಸಲು ಅವರು ಬಳಸಿಕೊಳ್ಳುತ್ತಿದ್ದರು.

ಸಂಗೀತ ಸೇವೆಯ ಜೊತೆ ಅವರು ಸ್ವತಃ 35 ನಾಟಕಗಳನ್ನು ರಚಿಸಿದ್ದಾರೆ, ಭಗವದ್ಗೀತೆ ಮತ್ತು ಇತರ ಎರಡು ಕೃತಿಗಳನ್ನು ಬ್ರೈಲ್‌ ಲಿಪಿಯಲ್ಲಿ ರಚಿಸಿದ್ದಾರೆ. ಇಂತಹ ದಣಿವರಿಯದ ಜೀವನವನ್ನು ನಡೆಸಿದ ಅವರು ಸೆಪ್ಟೆಂಬರ್ 17, 2010 ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅವರು ನಿಧನರಾಗಿ 12 ವರ್ಷಗಳಾಗುತ್ತಾ ಬಂದಿದೆ, ಆದರೆ ಅವರ ಬತ್ತದ ಅನ್ನ ದಾಸೋಹ, ಸಂಗೀತ ದಾಸೋಹ ಮಾತ್ರ ಇಂದಿಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News