"ಯಾರಾದರೂ ಒಬ್ಬರು ಡಿಕೆಶಿಗೆ ಕಮಿಷನ್ ಲಂಚ ನೀಡಿದ್ದೇನೆ ಎಂದು ಹೇಳಿದರೆ ರಾಜಕೀಯದಿಂದ ನಿವೃತ್ತಿ"

 ಈ ದೃಷ್ಟಿಯಿಂದ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ, ದೇವಸ್ಥಾನದಲ್ಲಿ ಪೂಜೆ ಮಾಡುವವರಿಂದ ತಮಟೆ ಬಾರಿಸುವವರೆಗೆ, ಕೊಂಡ ಹಾಯುವವರಿಂದ ಸವಿತಾ ಸಮಾಜದವರಿಗೆ ಎಲ್ಲರಿಗೂ ಗೌರವ ನೀಡುವಂತೆ ಕನಕಪುರದ ಕನಕೋತ್ಸವ ರಾಜ್ಯದ ಇತಿಹಾಸ ಪುಟ ಸೇರಿದೆ.

Written by - Zee Kannada News Desk | Last Updated : Jan 14, 2023, 08:18 PM IST
  • ಅವರು ಯಾವುದ್ಯಾವುದೋ ಆಶ್ವಾಸನೆ ನೀಡಿದ್ದು, ಯಾವುದೂ ಈಡೇರಿಲ್ಲ.
  • ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ನಾವು 169 ಆಶ್ವಾಸನೆ ನೀಡಿದ್ದು, ಅದರಲ್ಲಿ 159 ಈಡೆರಿಸಿದ್ದೆವಿ.
  • ನಾನು ಇಂಧನ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ವಿದ್ಯುತ್ ಅಭಾವ ಇತ್ತು.
"ಯಾರಾದರೂ ಒಬ್ಬರು ಡಿಕೆಶಿಗೆ ಕಮಿಷನ್ ಲಂಚ ನೀಡಿದ್ದೇನೆ ಎಂದು ಹೇಳಿದರೆ ರಾಜಕೀಯದಿಂದ ನಿವೃತ್ತಿ" title=

ಕನಕಪುರ: ನಾನು ಸಾಕಷ್ಟು ಜನರಿಗೆ ಉದ್ಯೋಗ ಹಾಗೂ ಪೋಸ್ಟಿಂಗ್ ಕೊಡಿಸಿರಬಹುದು. ಆದರೆ ಯಾರಾದರೂ ಒಬ್ಬರು ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ಗೆ ಕಮಿಷನ್ ಲಂಚ ನೀಡಿದ್ದೇನೆ ಎಂದು ಹೇಳಿದರೆ ಇಂದು ಈ ವೇದಿಕೆಯಲ್ಲಿ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮ್ಮ ಕಾರ್ಯಕ್ರಮಕ್ಕೆ ಸಿಕ್ಕಿರುವ ಯಶಸ್ಸು ನೋಡಿ ಅದನ್ನು ಮಾದರಿಯಾಗಿ ಇಟ್ಟುಕೊಂಡು ಬೇರೆ ಬೇರೆ ಜಿಲ್ಲೆ ತಾಲೂಕುಗಳಲ್ಲಿ ಬೇರೆ ಬೇರೆ ರೀತಿ ಮಾಡಲಾಗುತ್ತಿದೆ. 

ರಾಜಕಾರಣಿಗಳು ಕೇವಲ ಪಕ್ಷದ ಬಗ್ಗೆ ಮಾತ್ರ ಗಮನ ಹರಿಸದೇ ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ ಸಮಾನವಾಗಿ ನೋಡಿಕೊಂಡು ಹೋಗಬೇಕು. ಈ ದೃಷ್ಟಿಯಿಂದ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ, ದೇವಸ್ಥಾನದಲ್ಲಿ ಪೂಜೆ ಮಾಡುವವರಿಂದ ತಮಟೆ ಬಾರಿಸುವವರೆಗೆ, ಕೊಂಡ ಹಾಯುವವರಿಂದ ಸವಿತಾ ಸಮಾಜದವರಿಗೆ ಎಲ್ಲರಿಗೂ ಗೌರವ ನೀಡುವಂತೆ ಕನಕಪುರದ ಕನಕೋತ್ಸವ ರಾಜ್ಯದ ಇತಿಹಾಸ ಪುಟ ಸೇರಿದೆ.

ಇದನ್ನೂ ಓದಿ : VD12 : ವಿಜಯ್ ದೇವರಕೊಂಡ ನ್ಯೂ ಫಿಲ್ಮ್‌ ಅನೌನ್ಸ್‌..! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌

ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ದೇವರು ನಮಗೆ ವರವನ್ನು ನೀಡಲ್ಲ, ಶಾಪವನ್ನು ನೀಡಲ್ಲ. ಆದರೆ ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಾವು ಹೋಗುವಾಗ ಎಲ್ಲವನ್ನೂ ತೆಗೆದುಕೊಂಡು ಹೋಗುವುದಿಲ್ಲ. ಎಲ್ಲವನ್ನೂ ಬಿಟ್ಟು ಹೋಗಬೇಕು. 

ಇಂದು ಇಲ್ಲಿ ಸರ್ಕಾರಿ ನೌಕರರು ಸೇರಿದ್ದೀರಿ. ಕನಕಪುರ ನಂಜುಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕು ಪಟ್ಟಿಯಲ್ಲಿ, ಹನೂರು ನಂತರ ಕನಕಪುರ ಎರಡನೇ ಸ್ಥಾನದಲ್ಲಿತ್ತು. ಈಗ ಆ ಪರಿಸ್ಥಿತಿ ಇಲ್ಲ. ನಮ್ಮ ತಾಲೂಕಿನಲ್ಲಿ ಮಾಡಿರುವ ಸಂಪರ್ಕ, ಅಂತರ್ಜಲ ಹೆಚ್ಚಳ, ಕೆರೆ ಕಟ್ಟೆ ನಿರ್ಮಾಣ, ಪ್ರತಿ ಪಂಚಾಯ್ತಿಯಲ್ಲಿ ಒಂದು ವರ್ಷಕ್ಕೆ 2-5 ಕೋಟಿ ಖರ್ಚು ಮಾಡಿ ರಸ್ತೆ, ಚೆಕ್ ಡ್ಯಾಂ ಸೇರಿದಂತೆ ಅನೇಕ ಅಭಿವೃದ್ಧಿ ಮಾಡಿದ್ದೇವೆ. 

ಯಾವುದೇ ಯೋಜನೆ ಇದ್ದರೂ ಅದನ್ನು ಕಾರ್ಯರೂಪಕ್ಕೆ ತಂದವರು ನೀವುಗಳು. ನೀವು ಕೊಟ್ಟ ಸಹಕಾರದಿಂದ ನರೇಗಾ ಯೋಜನೆ ಪರಿಣಾಮಕಾರಿ ಜಾರಿ ಮಾಡಿದ ತಾಲೂಕು ಎಂಬ ಹೆಸರು ಬಂದಿದೆ. ಒಂದೊಂದು ತಾಲೂಕು ಪಂಚಾಯ್ತಿಗೆ 5 ಕೋಟಿ ನೀಡಲಾಗಿದ್ದು ಇಲ್ಲಿ ದುರ್ಬಳಕೆ ಆಗಿದೆ ಎಂದು ಕೇಂದ್ರ ಸರ್ಕಾರ ತನಿಖಾ ತಂಡ ಕಳಿಸಿ ತನಿಖೆ ಮಾಡಿಸಿತ್ತು. ಅವರು ಇಲ್ಲಿ ಅಭಿವೃದ್ಧಿ ನೋಡಿ ಸುಮ್ಮನಾದರು.

ಇದನ್ನೂ ಓದಿ: ಪ್ರಧಾನಿ ರೋಡ್‌ ಶೋ ವೇಳೆ ಭದ್ರತಾ ಲೋಪ : ಗೇಟ್‌ ಹಾರಿ ಮೋದಿ ಕಡೆ ಬಂದ ವ್ಯಕ್ತಿ - ವಿಡಿಯೋ ನೋಡಿ

ಈ ಸಮಯದಲ್ಲಿ ನನಗೆ ಅಕ್ಬರ್ ಹಾಗೂ ಬೀರಬಲ್ ಅವರ ಸಂಭಾಷಣೆ ನೆನಪಾಗುತ್ತದೆ. ಸತ್ಯಕ್ಕೂ ಸುಳ್ಳಿಗೂ ಎಷ್ಟು ಅನಂತರ ಇದೆ ಎಂದು ಅಕ್ಬರ್ ಕೇಳಿದಾಗ ಬೀರಬಲ್ ಕೇವಲ ನಾಲ್ಕು ಬೆರಳುಗಳ ಅಂತರ ಎಂದು ಹೇಳಿದ. ಅಂದರೆ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಇವೆರಡರ ನಡುವೆ ನಾಲ್ಕು ಬೆರಳುಗಳ ಅಂತರವಿದೆ ಎಂದು ಉತ್ತರಿಸಿದ. ಅದೇರೀತಿ ಕನಕಪುರ ಕ್ಷೇತ್ರದಲ್ಲಿನ ಕೆಲಸ ಕಣ್ಣಲ್ಲಿ ನೋಡಬಹುದೇ ಹೊರತು, ಕೇವಲ ಕಿವಿಯಲ್ಲಿ ಕೆಳುವಂತಹದ್ದು ಏನೂ ಇಲ್ಲ. 

ಪಾಲಿಕೆಯವರು ದಿನಬೆಳಗಾದರೆ ಸ್ವಚ್ಛತೆ ಕಾಪಾಡುತ್ತಾರೆ. ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯ್ತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.

ಇಂಧನ ಇಲಾಖೆ ಲೈನ್ ಮ್ಯಾನ್ ಸಿಬ್ಬಂದಿ ಮೊದಲು ಲಂಚ ನೀಡಿ ವರ್ಗಾವಣೆ ಮಾಡಿಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದರು. ನಾವು ಅದನ್ನು ನಿಲ್ಲಿಸುವ ಕೆಲಸ ಮಾಡಿದ್ದೇವೆ. ಬೆಂಗಳೂರಿಗೆ ಉದ್ಯೋಗ ಹುಡುಕಿ ಹೋಗುವುದನ್ನು ತಪ್ಪಿಸಲು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ವಿದ್ಯುತ್ ಸಂಪರ್ಕ ನೀಡಿದ್ದೇವೆ. ಅಲ್ಲಿ ಖಾಸಗಿ ಕೈಗಾರಿಕೆ ಸ್ಥಾಪನೆ ಆಗಿ ಉದ್ಯೋಗ ಸೃಷ್ಟಿ ಆಗಿವೆ. 

ಕನಕಪುರದಲ್ಲಿ ಹುಟ್ಟಿ ಬೆಳೆದು ಬೇರೆ ಊರುಗಳಲ್ಲಿ ನೆಲೆಸಿರುವ ಸುಮಾರು 20 ಸಾವಿರ ಕುಟುಂಬಗಳು ನಾಳೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ದೊಡ್ದ ವೃತ್ತಿಯಿಂದ ಸಣ್ಣ ಪುಟ್ಟ ವೃತ್ತಿ ಮಾಡುತ್ತಿರುವವರಿಗೆ ಸನ್ಮಾನ ಮಾಡಿ ಅವರಿಗೆ ಸಮಾನ ಗೌರವ ನೀಡಲಾಗುವುದು. 

ಇನ್ನು ಕನಕಪುರದ ಡೈರಿ ನೀಡಿದ್ದೀರಿ. ಮೊನ್ನೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ನಂದಿನಿಯನ್ನು ಅಮೂಲ್ ಜತೆ ವಿಲೀನ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಆದರೆ ಕನಕಪುರದ ಡೈರಿ ಅಮೂಲ್ ಡೈರಿಗಿಂತ ಅತ್ಯುತ್ತಮವಾಗಿದೆ. ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಭೇಟಿ ನೀಡಿ ಅದನ್ನು ತೋರಿಸುವ ಕೆಲಸ ಮಾಡಬೇಕು. ನಮ್ಮ ರೈತರು ಅತಿ ಹೆಚ್ಚು ಹೈನುಗಾರಿಕೆ ಮಾಡುತ್ತಿದ್ದಾರೆ.

ಈ ಕ್ಷೇತ್ರದ ಜನ silk ಹಾಗೂ milk ಹೆಚ್ಚಿನ ಉತ್ಪಾದನೆ ಮಾಡುತ್ತಿದ್ದಾರೆ. ರೇಷ್ಮೆಯನ್ನು ಹೊರಗಡೆಯಿಂದ ಆಮದು ಮಾಡದೆ ಇಲ್ಲಿನ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು.

ಇಡೀ ರಾಜ್ಯಕ್ಕೆ ಅತಿ ಹೆಚ್ಚು ರೇಷ್ಮೆ ಉತ್ಪಾದನೆ ಮಾಡುವ ಕ್ಷೇತ್ರ ಕನಕಪುರ ಆಗಿದೆ. ಖಾಸಗಿ ಉದ್ಯೋಗಿಗಳು ಕೂಡ ಬಂದು ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ನಾನು ಮಾದರಿ ಆಗಬೇಕು ಎಂದು ನನ್ನ ತಮ್ಮ ಕೂಡ ರೇಷ್ಮೆ ನೂಲು ತೆಗೆಯುವ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡಿ ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಮುಂದಾಗಿದ್ದಾರೆ.

ನಿಮ್ಮ ಬದುಕು ಹಸನಾಗಬೇಕು. ನಾವು ನಿಮ್ಮ ಜೇಬಿಗೆ ಹಣ ನೀಡದಿದ್ದರೂ ನಮ್ಮ ಅಭಿವೃದ್ಧಿ ಕಾರ್ಯದಿಂದ ನಿಮ್ಮ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ. ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಾನು ಆರಂಭದಲ್ಲಿ ಬಂದಾಗ 2 ಲಕ್ಷ ಇದ್ದ ಬೆಲೆ ಈಗ 2 ಕೋಟಿ ಕೊಟ್ಟರೂ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಅಭಿವೃದ್ಧಿ ಆಗಿದೆ. ನಿಮ್ಮ ತಾಲೂಕಿನ ಭವಿಷ್ಯ ನೀವೇ ನೋಡಿಕೊಳ್ಳಬೇಕು. ನಿಮ್ಮಂತೆ ನಾನು ಹಾಗೂ ಸುರೇಶ್ ಸರ್ಕಾರಿ ನೌಕರರೆಂದು ಭಾವಿಸಿ ನಿಮ್ಮ ಸೇವೆ ಮಾಡುತ್ತಿದ್ದೇವೆ.

ಕೋವಿಡ್ ಸಮಯದಲ್ಲಿ ನೀವು ಕೊಟ್ಟ ಸಹಕಾರ ನಾವು ಮರೆಯಲು ಸಾಧ್ಯವಿಲ್ಲ. ನಾನು ಸಾಕಷ್ಟು ಜನರಿಗೆ ಉದ್ಯೋಗ ಹಾಗೂ ಪೋಸ್ಟಿಂಗ್ ಕೊಡಿಸಿರಬಹುದು. ಆದರೆ ಯಾರಾದರೂ ಒಬ್ಬರು ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ಗೆ ಕಮಿಷನ್ ಲಂಚ ನೀಡಿದ್ದೇನೆ ಎಂದು ಹೇಳಿದರೆ ಇಂದು ಈ ವೇದಿಕೆಯಲ್ಲಿ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. 

ಬಿಜೆಪಿ ಅವರು ನಾನು ಲಂಚ ತಿಂದಿದ್ದೇನೆ ಎಂದು ನನ್ನ ವಿರುದ್ಧ ಕೇಸ್ ಹಾಕಿ ಕಿರುಕುಳ ನೀಡುತ್ತಿದ್ದಾರೆ. ನೀವು ನೋಡಿದಂತೆ ನಾನು ಎಂದಾದರೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಯಾರಿಂದಲಾದರೂ ಒಂದು ರೂಪಾಯಿ ಲಂಚ ಕೇಳಿದ್ದೀನಾ? 35 ವರ್ಷಗಳಿಂದ ಈ ಕ್ಷೇತ್ರದ ಜನ ಜನ ನನ್ನನ್ನು ಸಾಕಿ ಬೆಳೆಸಿದ್ದೀರಿ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದೇನೆ. ನಿಮ್ಮ ಹತ್ತಿರ ಅಲ್ಲದೆ ಬೇರೆ ಯಾರ ಬಳಿ ನಾನು ನನ್ನ ಸಂತೋಷ, ದುಃಖ, ನೋವು ಹೇಳಿಕೊಳ್ಳಲಿ? 

ನಮ್ಮ ಜಿಲ್ಲೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡರು, ಕುಮಾರಸ್ವಾಮಿ, ಪಕ್ಕದ ತಾಲೂಕಿನಿಂದ ಎಸ್.ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ನಿಮ್ಮ ಕನಕಪುರದ ನಿಮ್ಮ ಪ್ರತಿನಿಧಿ ರಾಜ್ಯದಲ್ಲಿ ನಿಮ್ಮ ಕೈ ಬಲ ಪಡಿಸಿ ರಾಜ್ಯಕ್ಕೆ ಸೇವೆ ಮಾಡುವ ಶಕ್ತಿ ತುಂಬುವುದು ನಿಮ್ಮ ಕೈಯಲ್ಲಿದೆ.

ಎಲ್ಲಾ ಸಮುದಾಯದವರಿಗೆ ಜಾಗ ನೀಡಲು ನಾವು ಸ್ಥಳವನ್ನು ಗುರುತಿಸಿದ್ದೇವೆ. ಈ ಸರ್ಕಾರದ ವ್ಯವಸ್ಥೆಯಲ್ಲಿ ಬೇಕಾದಷ್ಟು ಸಮಸ್ಯೆ ಇವೆ. ಇನ್ನು 60 ದಿನ ಮಾತ್ರ ಈ ಸರ್ಕಾರ ಇರುತ್ತದೆ. ನಂತರ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. 

ಸರ್ಕಾರಿ ನೌಕರರ ಭವನ ಬೇಕು ಎಂದು ನೀವು ಕೇಳಿದ್ದು, ಇದು ನಿಮ್ಮ ಭವನ ಅಲ್ಲ, ನಮ್ಮ ಭವನ. ಈ ಭವನಕ್ಕೆ ನಿವೇಶನ ನೀಡಿ ಅದನ್ನು ಕಟ್ಟಿಕೊಡುವುದು ಹೇಗೆ ಎಂದು ನನಗೆ ಗೊತ್ತಿದೆ. 

ನಾನು ಈ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದೆ. ನಾನು ಅಧಿಕಾರದಿಂದ ಕೆಳಗೆ ಇಳಿದ ತಕ್ಷಣ, ಸುಧಾಕರ್ ಅವರು ಅದನ್ನು ರದ್ದು ಮಾಡಿ ಚಿಕ್ಕಬಳ್ಳಾಪುರದಲ್ಲಿ ಕಟ್ಟಿದ್ದಾರೆ. ನಾನು ಬೇಕಾದಷ್ಟು ಹೋರಾಟ ಮಾಡಿದ್ದೇನೆ. ಹೀಗಾಗಿ ದಯಾನಂದ ಸಂಸ್ಥೆ ಜತೆ  ಮಾತನಾಡಿ ಆಸ್ಪತ್ರೆ ಕಟ್ಟಿಸುತ್ತಿದ್ದೇವೆ. ಮುಂದೆ ಒಳ್ಳೆ ಕಾಲ ಬರಲಿದೆ. 

ಸುರೇಶ್ ಅವರು ಇನ್ಫೋಸಿಸ್ ಅವರನ್ನು ಭೇಟಿ ಮಾಡಿ 50 ಕೋಟಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣ ಆಗಿದೆ. ಅಲ್ಲಿ ಯಂತ್ರೋಪಕರಣಗಳು ಬರಬೇಕಿದೆ. ಹೀಗಾಗಿ ಅದರ ಉದ್ಘಾಟನೆ ಬಾಕಿ ಉಳಿದಿದೆ.

ಇನ್ನು ಶಿಕ್ಷಣಕ್ಕೆ ಜನ ವಲಸೆ ಹೋಗುವುದನ್ನು ತಪ್ಪಿಸಬೇಕು, ಪಂಚಾಯ್ತಿ ಮಟ್ಟದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆ ಬರಬೇಕಿದೆ. ಇದಕ್ಕಾಗಿ ದೊಡ್ಡಲಹಳ್ಳಿ ಯಲ್ಲಿ 10 ಎಕರೆ ಜಮೀನು ಸೇರಿದಂತೆ 20-25 ಎಕರೆ ಜಮೀನು ದಾನ ನೀಡಿದ್ದೇವೆ.

ಇನ್ನು ಸರ್ಕಾರ ನೌಕರರಿಗೆ ಎನ್ ಪಿಎಸ್, ಒಪಿಎಸ್ ವಿಚಾರವಾಗಿ ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಈ ವಿಚಾರವಾಗಿ ನಮ್ಮ ವಚನ ನೀಡುತ್ತೇವೆ.ನಮ್ಮ ರಾಜ್ಯದಲ್ಲಿ ನೀಡುವ ತೀರ್ಮಾನ ರಾಷ್ಟ್ರಕ್ಕೆ ಮಾದರಿ ಆಗಲಿ. 

ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡಲಾಗಿರುವ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆ ನನಗಾಗಿ ಅಲ್ಲ. ಈ ರಾಜ್ಯದ ಜನರಿಗಾಗಿ. ಇದು ಕಾಂಗ್ರೆಸ್ ಪಕ್ಷದ ಮೊದಲ ಖಚಿತ ಘೋಷಣೆ.

ಒಂದು ಯೂನಿಟ್ ಗೆ 7.20 ರೂಪಾಯಿ ಇದ್ದು, 200 ಯೂನಿಟ್ ಗೆ ಸುಮಾರು 1500 ರೂಪಾಯಿ ಆಗಲಿದೆ. ಈ ಯೋಜನೆಗೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಅವರು ಯಾವುದ್ಯಾವುದೋ ಆಶ್ವಾಸನೆ ನೀಡಿದ್ದು, ಯಾವುದೂ ಈಡೇರಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ನಾವು 169 ಆಶ್ವಾಸನೆ ನೀಡಿದ್ದು, ಅದರಲ್ಲಿ 159 ಈಡೆರಿಸಿದ್ದೆವಿ. ನಾನು ಇಂಧನ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ವಿದ್ಯುತ್ ಅಭಾವ ಇತ್ತು. ನಾನು ಅಧಿಕಾರದಿಂದ ಇಳಿಯುವ ಮುನ್ನ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೆವು.

ನಮ್ಮ ರಾಜ್ಯದಲ್ಲಿ 10 ಸಾವಿರ ಮೆಗವ್ಯಾಟ್ ವಿದ್ಯುತ್ ಹೆಚ್ಚಾಗಿ ಉತ್ಪಾದನೆ ಮಾಡಿದ್ದೆ. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ಮಾಡಿದ್ದೇವೆ. 

ನಾನು ಚುನಾವಣೆ ಸಮಯದಲ್ಲಿ ರಾಜ್ಯ ಪ್ರವಾಸ ಮಾಡಬೇಕು. ನಾನು ಹೆಚ್ಚಾಗಿ ನಿಮ್ಮ ಬಳಿಗೆ ಬಂದು ಮತ ಕೇಳಲು ಸಾಧ್ಯವಿಲ್ಲ.ನೀವು ನಮಗೆ ಬೆಂಬಲ ನೀಡಿ.

ಸೋಮವಾರ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ನಾ ನಾಯಕಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಏನು ಮಾಡಬಹುದು ಎಂಬ ಸಲಹೆಯನ್ನು ನೀವುಗಳು ನಮಗೆ ಕಳುಹಿಸಬಹುದು. ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಯಾವ ರೀತಿ ಸಹಾಯ ಮಾಡಲಿದೆ ಎಂಬುದನ್ನು ಹೇಳಲಿದ್ದಾರೆ.

ಹೆಣ್ಣು ಕುಟುಂಬದ ಕಣ್ಣು. ಈ ದೇಶ, ರಾಜ್ಯಕ್ಕೆ ಹೆಣ್ಣು ಆಸ್ತಿ. ನಾವು ಈ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಶೇ.50ರಷ್ಟು ಜನಸಂಖ್ಯೆ ಇರುವ ಮಹಿಳೆಯರಿಗೆ ಶಕ್ತಿ ತುಂಬಬೇಕು, ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತಲು ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. 

ನಾವು ಘೋಷಣೆ ಮಾಡಿರುವ ಮೊದಲ ಕಾರ್ಯಕ್ರಮ ನಮಗಾಗಿ ಅಲ್ಲ. ನಿಮಗೆ ಹಾಗೂ ರಾಜ್ಯದ ಜನರಿಗಾಗಿ. ರಾಜ್ಯದ ಎಲ್ಲಾ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.

7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವಾಗ ಎಲ್ಲಾ ಬಡವರಿಗೂ ನೀಡಿದ್ದೆವು. ಅದೇರೀತಿ ವಿದ್ಯುತ್ ಅನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುವುದು.ಮೊದಲಿಗೆ ರಾಜ್ಯದ ಜನರ ಬದುಕಲ್ಲಿ ದೀಪ ಹಚ್ಚುವ ಉದ್ದೇಶದಿಂದ ಈ ಘೋಷಣೆ ಮಾಡಿ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಆಶೀರ್ವಾದ ನಮಗಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News