ಬೆಂಗಳೂರು: ಕೋವಿಡ್-19 (Covid-19) ಸಮಯದಲ್ಲಿ ರೈತರಿಗೆ ಅನುಕೂಲವಾಗಲು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಜಿಕೆವಿಕೆ ಮುಖ್ಯದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ “ಯು.ಎ.ಎಸ್.(ಬಿ) ಅಗ್ರೀವಾರ್ ಘಟಕ”ವು ಕಾರ್ಯನಿರ್ವಹಿಸುತ್ತಿದೆ. ಘಟಕವು ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಂಪರ್ಕ ಸೇತುವೆಯಾಗಿ, ರೈತರ (Farmers) ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ಬೆಳೆ ಉತ್ಪಾದನಾ ತಾಂತ್ರಿಕತೆಗಳು, ಕೀಟ/ರೋಗಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಸಹ ಒದಗಿಸುತ್ತಿದೆ.
ಜಿ.ಕೆ.ವಿ.ಕೆ.ಯ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕಿನ ಕೋರಮಂಗಲ ಗ್ರಾಮದ ರೈತರಾದರ ವಿರವರುದ್ರಾಕ್ಷಿ ಮತ್ತು ಕೊಡಗಿನ ಚೆಟ್ಟಹಳ್ಳಿ ಗ್ರಾಮದ ಗಿರೀಶ್ಕುಮಾರ್ರವರು ಬೆಣ್ಣೆ ಹಣ್ಣು ಮಾರಾಟ ಮಾಡಿದರು. ಈ ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್ರವರು ಉದ್ಘಾಟಿಸಿದರು. ಸುಮಾರು 10 ಕ್ವಿಂಟಾಲ್ ದ್ರಾಕ್ಷಿ ಮತ್ತು 1 ಟನ್ ಬೆಣ್ಣೆ ಹಣ್ಣನ್ನು ಜಿ.ಕ.ವಿ.ಕೆ, ಸಹಕಾರನಗರ, ನ್ಯಾಯಾಂಗ ಬಡಾವಣೆ ಜಕ್ಕೂರು ಮತ್ತು ಹೆಬ್ಬಾಳದಲ್ಲಿ ಮಾರಾಟ ಮಾಡಲಾಯಿತು. ರೈತರು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸಕಾಲಕ್ಕೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಬಡಾವಣೆಯ ನಿವಾಸಿಗಳು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದರ ಜೊತೆಗೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮಧ್ಯವರ್ತಿಗಳಿಲ್ಲದ ರೈತರಿಂದ ನೇರವಾಗಿ ಹಣ್ಣುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆದರದಲ್ಲಿ, ತಾಜಾವಾಗಿ ಸಿಗುವುದರಿಂದ ರೈತರಿಗೆ ಮತ್ತುಬಳಕೆದಾರರಿಗೆ ಅನುಕೂಲವಾಗುತ್ತದೆ, ಮುಂದೆಯೂ ಸಹ ಈ ವ್ಯವಸ್ಥೆಯನ್ನು ಕಲ್ಪಿಸಲು ಸಂಬಂಧಪಟ್ಟವರು ಮುಂದಾದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಅಗ್ರೀವಾರ್ ಘಟಕ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ 10 ಜಿಲ್ಲಾವಾರು ಸಮನ್ಯಯ ಸಮಿತಿಗಳಿಂದ ಇದುವರೆಗೆ 12 ಟನ್ ಮಾವು, 25 ಟನ್ಕಲ್ಲಂಗಡಿ, 10 ಟನ್ಕರಬೂಜ, 3 ಟನ್ ತಿಂಗಳ ಹುರುಳಿ, 200 ಟನ್ದ್ರಾಕ್ಷಿ, 12 ಟನ್ಅನಾನಸ್, 3 ಟನ್ ಈರುಳ್ಳಿ, 12 ಟನ್ ಬಾಳೆಹಣ್ಣು, 2 ಟನ್ ದೊಣ್ಣೆ ಮೆಣಸಿಕಾಯಿ, 10 ಟನ್ ಟೊಮಾಟೊ, 6 ಟನ್ಕ್ಯಾರೇಟ್, 5 ಟನ್ ಬೀಟ್ರೂಟ್, 3 ಟನ್ ಹೂ-ಕೋಸು, 18 ಟನ್ ಆಲೂಗಡ್ಡೆ, 2 ಟನ್ ಹಾಗಲಕಾಯಿ, 5 ಟನ್ ಸಿಹಿ ಗೆಣಸು, 6 ಟನ್ ಶುಂಠಿ, 2 ಟನ್ ಸೀಮೆ ಬದನೆಕಾಯಿ, 3 ಟನ್ ಸೌತೇಕಾಯಿ, 3 ಟನ್ ಬದನೇಕಾಯಿ, 3 ಟನ್ ಎಲೆಕೋಸು, 9 ಟನ್ ಅರಿಶಿನ, 3 ಟನ್ ಪಪ್ಪಾಯ, 2 ಟನ್ ಸೀಬೆ, 10 ಟನ್ ಸಪೋಟ ಮತು 27 ಮೊಬೈಲ್ ಸಂದೇಶಗಳನ್ನು 1,50,459 ರೈತರಿಗೆ ವಿವಿಧ ಬೆಳಗಳ ಮತ್ತು ಹವಾಮಾನ ವೈಪರೀತ್ಯಗಳ ಕುರಿತು ಸಂದೇಶಗಳನ್ನು ರವಾನಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.