ಬೆಂಗಳೂರು: ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಭರವಸೆ ನೀಡಿ, ಈಗ ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನೂ ನೀಡದೆ ರೈತರನ್ನು ಕಷ್ಟಕ್ಕೆ ತಳ್ಳಿ ಕೈತೊಳೆದುಕೊಂಡಿದೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಈ ವರ್ಷ ಶಾಲೆಗಳನ್ನು ಆರಂಭಿಸಬೇಡಿ, ಎಲ್ಲರನ್ನೂ ಪಾಸ್ ಮಾಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
- ಸಂಪತ್‌ರಾಜ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆಯಷ್ಟೆ, ವಿಚಾರಣೆ ನಡೆಯುವ ಮೊದಲೆ ಅವರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಧರಿಸಲಾಗುವುದಿಲ್ಲ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಈ ಹಂತದಲ್ಲಿ ನಾವು ಅವರ ಪರವೂ ಇಲ್ಲ, ವಿರುದ್ಧವೂ ಇಲ್ಲ.
- ರಾಜ್ಯದಲ್ಲಿ ಶಾಲಾ-ಕಾಲೇಜು ತೆರೆಯದಂತೆ ಸರ್ಕಾರಕ್ಕೆ 2 ಬಾರಿ ಪತ್ರ ಬರೆದಿದ್ದೆ, ಆದರೂ ಇಂದು ಸರ್ಕಾರ ಪೂರ್ವತಯಾರಿ ಇಲ್ಲದೆ ಪದವಿ ಕಾಲೇಜುಗಳನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಸರಿಯಲ್ಲ, ಕಾಲೇಜು ನಡೆಸಲೇಬೇಕು ಎಂದು ನಿರ್ಧರಿಸಿದ್ದರೆ ಸರ್ಕಾರವೇ ವಿದ್ಯಾರ್ಥಿಗಳ ನಿಯಮಿತ ಸೋಂಕು ಪರೀಕ್ಷೆಯನ್ನು ಮಾಡಿ, ತರಗತಿಗಳನ್ನು ನಡೆಸಬೇಕು.
- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ಮರಾಠ ಸಮುದಾಯದ ಮತದಾರರಿದ್ದಾರೆ, ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರ ಮಾಡಿದೆಯೇ ಹೊರತು ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನೈಜ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ. ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇನ್ನೂ ಇವೆ, ಅವುಗಳ ಅಭಿವೃದ್ಧಿಗೂ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಸರಿಯಲ್ಲ. ಅಭಿವೃದ್ಧಿಯ ಹಾದಿಯಲ್ಲಿ ಎಲ್ಲರು ಒಂದಾಗಿ ಸಾಗಿದಾಗ ಮಾತ್ರ ಸಮಾನತೆ ತರಲು ಸಾಧ್ಯ.
- ಈ ಬಾರಿಯ ಪ್ರವಾಹದಿಂದ ರಾಜ್ಯದಲ್ಲಿ ಸುಮಾರು ರೂ.25,000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ, ಆದರೆ ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವುದು ರೂ.577 ಕೋಟಿ ಮಾತ್ರ. ಇದರಲ್ಲಿ ಎಷ್ಟು ಜನರಿಗೆ ನೆರೆ ಪರಿಹಾರ ನೀಡಲು ಸಾಧ್ಯ? ರಾಜ್ಯ ಸರ್ಕಾರದ ಬಳಿಯೂ ಹಣವಿಲ್ಲ, ಕೇಂದ್ರವೂ ನೀಡುತ್ತಿಲ್ಲ. ಹೀಗಾದರೆ ಜನರಿಗೆ ಯಾರು ದಿಕ್ಕು? ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಭರವಸೆ ನೀಡಿ, ಈಗ ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನೂ ನೀಡದೆ ರೈತರನ್ನು ಕಷ್ಟಕ್ಕೆ ತಳ್ಳಿ ಕೈತೊಳೆದುಕೊಂಡಿದೆ. ಇದರ ಮೇಲೆ ರೈತವಿರೋಧಿ ಕಾನೂನುಗಳನ್ನು ಬೇರೆ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಉಳ್ಳವರ ಸರ್ಕಾರದಲ್ಲಿ ಅನ್ನದಾತ ನರಳಾಡುತ್ತಿದ್ದಾನೆ.
- ಬಿಜೆಪಿ ಮತ್ತು ಜೆಡಿಎಸ್‌ನ ಒಳಒಪ್ಪಂದದ ರಾಜಕಾರಣ ಹೊಸತಲ್ಲ. ಹಿಂದೆಯೂ ಮಾಡಿಕೊಂಡಿದ್ದರು, ಕಳೆದ ಉಪಚುನಾವಣೆಯಲ್ಲೂ ಈ ಆರೋಪ ಇತ್ತು, ಮುಂದೆಯೂ ನಡೆಯಬಹುದು. ಅವಕಾಶವಾದಿ ರಾಜಕಾರಣ ಜೆಡಿಎಸ್‌ನ ನೈಜ ಸಿದ್ಧಾಂತ, ಇದನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಮುಂದುವರೆಸಿದ್ದಾರೆ.