ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಕಾಂಗ್ರೇಸನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ರಣತಂತ್ರ ರೂಪಿಸುವ ಸಲುವಾಗಿ ಇಂದು 11 ಗಂಟೆಗೆ ದೆಹಲಿಗೆ ಆಗಮಿಸಲಿದ್ದಾರೆ.
ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ ಪ್ರಯಾಣ ಬೆಳೆಸಿರುವ ಸಿದ್ದರಾಮಯ್ಯನವರು 11 ಗಂಟೆಗೆ ದೆಹಲಿಗೆ ತಲುಪಿ, ನೇರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಿಜೆಪಿಯ ಅಮಿತ್ ಶಾ ರ ತಂತ್ರಗಳಿಗೆ ಪ್ರತಿತಂತ್ರಗಾರಿಕೆಯ ಕುರಿತು ಚರ್ಚಿಸಲಿದ್ದಾರೆ.
ಸಿದ್ದರಾಮಯ್ಯನವರ ಜೊತೆ ಸಭೆಯಲ್ಲಿ ,ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತಿತರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
ಈ ಕುರಿತು ದೆಹಲಿಯಲ್ಲಿ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಮತ್ತೆ ಅಧಿಕಾರ ಬರಬೇಕೆನ್ನುವುದು ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಎದುರಿಸಲು ಯಾವ ತಂತ್ರಗಳನ್ನು ರೂಪಿಸಬೇಕು ಎನ್ನುವುದರ ಬಗ್ಗೆ ರಾಜ್ಯ ನಾಯಕರು ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.