ಇಂದು SSLC ಫಲಿತಾಂಶ: ಪ್ರತಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗೆ ₹1 ಲಕ್ಷ ಬಹುಮಾನ

ಸೋಮವಾರ ಮಧ್ಯಾಹ್ನ 3 ಗಂಟೆಗೆ ಇಲಾಖೆ ವೆಬ್‍ಸೈಟ್‍ನಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಫಲಿತಾಂಶವು ಪ್ರಕಟಗೊಳ್ಳಲಿದೆ.

Updated: Aug 10, 2020 , 06:29 AM IST
ಇಂದು SSLC ಫಲಿತಾಂಶ: ಪ್ರತಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗೆ ₹1 ಲಕ್ಷ ಬಹುಮಾನ

ಬೆಂಗಳೂರು: ಕೊರೊನಾವೈರಸ್ ಮಧ್ಯೆ ಹಲವರ ಟೀಕೆಗಳ ನಡುವೆಯೂ ನಡೆದಿದ್ದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಇಲಾಖೆ ವೆಬ್‍ಸೈಟ್‍ನಲ್ಲಿ  ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಫಲಿತಾಂಶವು ಪ್ರಕಟಗೊಳ್ಳಲಿದೆ.

ಅಧಿಕೃತವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಘೋಷಣೆ ಮಾಡಲಿದ್ದಾರೆ. www.kseeb.kar.nic.in ಮತ್ತು www.karresults.nic.in ವೆಬ್‍ಸೈಟ್‍ಗಳಲ್ಲಿ ಫಲಿತಾಂಶವನ್ನು ನೋಡಬಹುದು.

ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ₹1ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಹೆಸರಿನಲ್ಲಿ ಈ ನಗದು ಬಹುಮಾನವನ್ನು ನೀಡಲಾಗುತ್ತದೆ.  ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 60 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ.

2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ಈ ಬಹುಮಾನಕ್ಕೆ ಅರ್ಹರಾಗಲಿದ್ದಾರೆ.