ಬೆಂಗಳೂರು: 20 ಲಕ್ಷ ಕೋಟಿ ರೂಪಾಯಿಗಳು ಯಾವ ರೈತನಿಗೆ, ಚಾಲಕನಿಗೆ, ಕಾರ್ಮಿಕನಿಗೆ ಹಣ ತಲುಪಿದೆ ಎನ್ನುವುದರ ಬಗ್ಗೆ ಪ್ರಧಾನಿ ಮತ್ತು ಸಿಎಂ ಮಾಹಿತಿ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
ಕರಾಳ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ರೈತರಿಗೆ ಬೆಂಬಲವಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ #RajBhavanChalo ಪ್ರತಿಭಟನೆಯಲ್ಲಿ, ಅವರು ಮಾತನಾಡಿ ತೀವ್ರ ಟೀಕಾ ಪ್ರಹಾರ ನಡೆಸಿದರು.ಈ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ರೈತರು, ರೈತ ಬೆಂಬಲಿಗರು, ರೈತಪರ ಸಂಘಟನೆಗಳು ಸೇರಿ 15 ಸಾವಿರಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Today, we are holding a massive protest along with Farmer groups against the anti-Farmer bills passed by the Union Government.
Congress workers & Farmers from across Karnataka have assembled to raise their voice & won't back down till these bills are repealed.#RajBhavanChalo pic.twitter.com/fOPdtfhF7S
— DK Shivakumar (@DKShivakumar) January 20, 2021
ಫ್ರೀಡಂ ಪಾರ್ಕ್ ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D K Shivakumar ) ಅವರ ಭಾಷಣದ ಸಾರಾಂಶ
* ಇಂದು ನಾವೆಲ್ಲ ಒಂದು ಅಪರೂಪದ ಹೋರಾಟಕ್ಕೆ ಸಾಕ್ಷಿಯಾಗಿದ್ದೇವೆ. ಈ ಹೋರಾಟ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಲಿದೆ.
'ಕಿಸಾನ್ ಅಧಿಕಾರ ದಿವಸ್' ಕಳೆದ 15 ರಂದೇ ಮಾಡಬೇಕು ಎಂದು ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿ ಅವರು ಕರೆಕೊಟ್ಟಿದ್ದರು. ಆದರೆ ರಾಜ್ಯದ ಜನ ಸಂಕ್ರಾಂತಿ ಆಚರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ನಾಯಕರು ಸೇರಿ ಚರ್ಚಿಸಿ ಆ ಕಾರ್ಯಕ್ರಮವನ್ನು ಇಂದು ನಡೆಸಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: 'ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತು ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ'
* ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಅಲ್ಲ. ಇದು ಈ ರಾಜ್ಯ ಹಾಗೂ ದೇಶದ ಅನ್ನದಾತನ ಧ್ವನಿ ಪ್ರತಿಬಿಂಬಿಸುವ ಕಾರ್ಯಕ್ರಮ.
* ಕೇಂದ್ರ ಸರ್ಕಾರ ತಂದಿರುವ 3 ಕರಾಳ ಶಾಸನಗಳ ವಿರುದ್ಧ, ರೈತರು, ಕಾರ್ಮಿಕರು ಹಾಗೂ ನೋವು ಅನುಭವಿಸುತ್ತಿರುವ ಜನ ಸಾಮಾನ್ಯರ ಪರವಾಗಿ ಧ್ವನಿ ಎತ್ತಿ, ಅವರ ಬೆನ್ನಿಗೆ ನಿಲ್ಲಲು ಬೀದಿಗಿಳಿದು ಹೋರಾಟ ಮಾಡುವ ಪವಿತ್ರ ದಿನ.
* ಈ ಸ್ವಾತಂತ್ರ್ಯ ಉದ್ಯಾನವನ ವಿಧಾನಸೌಧದ ಸಮೀಪದಲ್ಲಿರಬೇಕು. ವಿರೋಧ ಪಕ್ಷ ಗಟ್ಟಿಯಾಗಿ ಮಾತನಾಡಲು ಒಂದು ಜಾಗ ನೀಡಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲಿದ್ದ ಜೈಲನ್ನು ಸ್ಥಳಾಂತರ ಮಾಡಿ ಈ ಫ್ರೀಡಂ ಪಾರ್ಕ್ ನಿರ್ಮಾಣ ಮಾಡಿತು.
* ಈ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ನಿಮ್ಮ ಧ್ವನಿ, ನೋವು, ಸಂಕಟವನ್ನು ಪ್ರಧಾನಿ, ರಾಷ್ಟ್ರಪತಿಗಳು ಹಾಗೂ ಮುಖ್ಯಮಂತ್ರಿಗಳಿಗೆ ತಲುಪುವಂತೆ ಮಾಡಿದ ಎಲ್ಲ ನಾಯಕರು, ಕಾರ್ಯಕರ್ತರು, ರೈತರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು.
* ಈ ರೈತನಿಗೆ ಸಂಬಳ, ಬಡ್ತಿ, ನಿವೃತ್ತಿ, ಲಂಚ ಇಲ್ಲ ಅಂತಾ ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಕಳೆದ 50 ದಿನಗಳಿಂದ ದೆಹಲಿಯ ಗಡಿಯಲ್ಲಿ ನಿಂತು ರೈತರು ತಮಗಾಗಿರುವ ಅನ್ಯಾಯದ ವಿರುದ್ಧದ ಕೂಗನ್ನು ಸರಕಾರಕ್ಕೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಶ್ರೀಮತಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಂತಿದೆ. ಅನ್ನದಾತನ ಪರವಾಗಿ ಕಾಂಗ್ರೆಸ್ ಸದಾ ನಿಂತಿದೆ, ಮುಂದೆಯೂ ನಿಲ್ಲಲಿದೆ.
ಇದನ್ನೂ ಓದಿ: D.K.Shivakumar: 'ರಾಜ್ಯದಲ್ಲಿ 'ತುಘಲಕ್ ಸರ್ಕಾರ' ನಡೆಯುತ್ತಿದೆ'
* ಮಹಾತ್ಮ ಗಾಂಧೀಜಿ ಅವರೂ ತಮ್ಮ ಸ್ವಾತಂತ್ರ್ಯ ಹೋರಾಟವನ್ನು ರೈತರ ಪರವಾಗಿ ಹೋರಾಡುವ ಮೂಲಕವೇ ಆರಂಭಿಸಿದ್ದರು. ಅದನ್ನು ಸ್ಮರಿಸುತ್ತಾ ನಾವು ಇಂದು ಈ ಹೋರಾಟದಲ್ಲಿ ದೀಪ ಹಚ್ಚಿದ್ದೇವೆ.
* ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ನೀವು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದೀರಿ. ಜತೆಗೆ ಇತಿಹಾಸದ ಪುಟ ಸೇರುತ್ತಿದ್ದೀರಿ.
* ಜನರ ಧ್ವನಿಯನ್ನು ನಾವಿಲ್ಲಿ ವ್ಯಕ್ತಪಡಿಸುತ್ತಿದ್ದೇವೆ. ಇಂದು ನೀವೆಲ್ಲ ಬಿಸಿಲಲ್ಲಿ ಮೆರವಣಿಗೆಯಲ್ಲಿ ನಡೆದು ಬಂದು ಈ ದೇಶದ ರೈತರಿಗೆ ಶಕ್ತಿಯಾಗಿ ನಿಂತಿದ್ದೀರಿ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ನಮ್ಮ ನಾಯಕರು ಮಾಡಿರುವ ತ್ಯಾಗಕ್ಕೆ ಗೌರವ ಕೊಡುವುದರ ಜತೆಗೆ ರೈತರ ಜತೆ ನಿಲ್ಲಲು ನೀವು ಇಂದು ರಾಷ್ಟ್ರ ಹಾಗೂ ಕಾಂಗ್ರೆಸ್ ಧ್ವಜ ಹಿಡಿದು, ಹಸಿರು ಶಾಲು ಹಾಕಿಕೊಂಡು ಇಲ್ಲಿ ಬಂದಿದ್ದೀರಿ.
* ಕಳೆದ ಡಿಸೆಂಬರ್ 28ರಂದು ಕಾಂಗ್ರೆಸ್ ಭವನದಲ್ಲಿ ಸಂಸ್ಥಾಪನಾ ದಿನದಂದು ಎಲ್ಲರ ಜತೆ ಚರ್ಚೆ ಮಾಡಿ ಈ ವರ್ಷವನ್ನು ಸಂಘಟನೆ, ಹೋರಾಟದ ವರ್ಷ ಎಂದು ಘೋಷಣೆ ಮಾಡಿದ್ದೇವೆ.
* ಇವತ್ತು ತಾವೆಲ್ಲ ಹೋರಾಟಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದೀರಿ. ಈ ವರ್ಷ ಕನಿಷ್ಠ 100 ಕ್ಷೇತ್ರಗಳಲ್ಲಿ ಎಲ್ಲ ಪ್ರಮುಖ ನಾಯಕರು ಜನರ ಮಧ್ಯೆ ನಿಂತು ಹೋರಾಟ ಮಾಡುತ್ತೇವೆ. ಒಂದು ಕೊಠಡಿಯಲ್ಲಿ ಕೂತು ಸಭೆ ನಡೆಸುವುದಿಲ್ಲ. ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಈ ಹೋರಾಟ ಮಾಡುತ್ತೇವೆ. ಇದು ಕೇವಲ ರಾಜ್ಯ ಮಟ್ಟದ ಹೋರಾಟ ಅಲ್ಲ. ರಾಜ್ಯದ ಎಲ್ಲ ತಾಲೂಕಿನಲ್ಲೂ ಇರುವ ಸಮಸ್ಯೆ.
* ಕೊರೋನಾ ಸಮಯದಲ್ಲಿ ಈ ಸರ್ಕಾರಕ್ಕೆ ಜನರಿಗೆ, ಕಾರ್ಮಿಕರಿಗೆ, ರೈತರಿಗೆ ರಕ್ಷಣೆ ನೀಡಲು ಆಗಲಿಲ್ಲ. ಅವರಿಗೆ ಬೆಂಬಲ ಬೆಲೆ, ಪರಿಹಾರ ಕೊಡಲಿಲ್ಲ. ವೃತ್ತಿಯಲ್ಲಿದ್ದವರಿಗೆ ಹಣ ಕೊಡಲು ಆಗಲಿಲ್ಲ.
* ಈ ಸರ್ಕಾರ ಇರೋದು ಕೇವಲ ಬಂಡವಾಳಶಾಹಿಗಳಿಗೆ. ನಾವು ರೈತರಿಗೆ ಶಕ್ತಿ ನೀಡಲಿಲ್ಲ ಎಂದರೆ, ಪ್ರತಿಭಟನೆ ಮಾಡುತ್ತಾ ಸತ್ತಿರುವ ರೈತರಿಗೆ ಗೌರವ ನೀಡದಿದ್ದರೆ, ಅನ್ನದಾತನ ರಕ್ಷಣೆ ಮಾಡದಿದ್ದರೆ, ನಮ್ಮ ಜನ್ಮ ಸಾರ್ಥಕವಾಗುವುದಿಲ್ಲ.
* ಈ ಹಿನ್ನೆಲೆಯಲ್ಲಿ ನೀವೆಲ್ಲ ಇಂದು ಕೈ ಜೋಡಿಸಿದ್ದೀರಿ. ನಿಮ್ಮ ಧ್ವನಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ತಲುಪಿದೆ ಎಂದು ಭಾವಿಸುತ್ತಾ ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.