ದಕ್ಷಿಣ ಕನ್ನಡದಲ್ಲಿ ಮಹಾಮಳೆ: ಸಂತ್ರಸ್ತರಿಗೆ ಸಕಲ ನೆರವು ನೀಡುವಂತೆ ಸಿಎಂ ಸೂಚನೆ

ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  

Last Updated : May 30, 2018, 10:50 AM IST
ದಕ್ಷಿಣ ಕನ್ನಡದಲ್ಲಿ ಮಹಾಮಳೆ: ಸಂತ್ರಸ್ತರಿಗೆ ಸಕಲ ನೆರವು ನೀಡುವಂತೆ ಸಿಎಂ ಸೂಚನೆ title=

ಬೆಂಗಳೂರು: ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ಕರಾವಳಿ ಜನರಿಗೆ ಮುಂಗಾರು ಪೂರ್ವ ಭಾರೀ ಮಳೆ ದಕ್ಷಿಣ ಕನ್ನಡ ಜನತೆಯನ್ನು ತಲ್ಲಣಗೊಳಿಸಿದೆ. ಗಾಳಿ- ಸಿಡಿಲಿನ ಜತೆಗೆ ಕಳೆದ ಎರಡು ದಿನದಿಂದ ಎಡಬಿಡದೆ ಸುರಿದ ಭಾರಿ ಮಳೆಗೆ  ಮಂಗಳೂರಿನಲ್ಲಿ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉದ್ಭವವಾಗಿದೆ. ಉಡುಪಿಯ ಉದ್ಯಾವರ, ಕಾಪು, ಕಟಪಾಡಿಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದು ವ್ಯಾಪಕ ಹಾನಿ ಉಂಟುಮಾಡಿದೆ. ಇವುಗಳ ಪರಿಣಾಮ ವಿದ್ಯುತ್‌, ಸಾರಿಗೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಮುಂದಿನ 48 ತಾಸುಗಳಲ್ಲಿ ಮತ್ತಷ್ಟು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಇದೇ ವೇಳೆ ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂತ್ರಸ್ತರ ರಕ್ಷಣೆಗೆ ಅಗತ್ಯವಿರುವ ಎಲ್ಲಾ ನೆರವನ್ನು ಜಿಲ್ಲಾಡಳಿತಕ್ಕೆ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.  ಕುಮಾರಸ್ವಾಮಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಬವಿಸಿರುವ ಅತಿವೃಷ್ಟಿ ಬಗ್ಗೆ ಇಂದು ಬೆಳಿಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿರುವ ಸಿಎಂ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ತಕ್ಷಣ ಮೂಲಸೌಕರ್ಯ ಒದಗಿಸುವುದರೊಂದಿಗೆ ಪರಿಹಾರವನ್ನು ನೀಡಲು ಸೂಚನೆ ನೀಡಿದ್ದಾರೆ. ಅಲ್ಲದೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಗೆ ಈಗಾಗಲೇ  ರಾಷ್ತ್ರೀಯ ವಿಪತ್ತು ನಿರ್ವಹಣಾ ದಳ(NDRF)ವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Trending News