ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ-ಸಿದ್ದರಾಮಯ್ಯ

ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ. 

Written by - Zee Kannada News Desk | Last Updated : Jul 29, 2022, 03:51 PM IST
  • ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ.
  • ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ.
ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ-ಸಿದ್ದರಾಮಯ್ಯ  title=

ಬೆಂಗಳೂರು: ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ.ಈ ಬೆಳವಣಿಗೆಗಳನ್ನು ಕೂಡಾ ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾದೀತು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಸುನೀಲ್ ಕುಮಾರ್, ವಿ.ಎಚ್.ಪಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ಮಾಡಬೇಕಾಗಿದೆ.

ನಳಿನ್ ಕುಮಾರ್ ಕಟೀಲ್ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರ್ ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು.ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ.

ಹತ್ಯೆ ನಡೆಸಿರುವ ದುಷ್ಕರ್ಮಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೆ ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಯಾವುದಾದರೂ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅವುಗಳನ್ನು ನಿಷೇಧಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ ತೋರಬೇಕು. 

ಇದನ್ನೂ ಓದಿ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯಕರ್ತರ ಹತ್ಯೆ; ಇದು ಕಾಣದ ಕೈಗಳ ಷಡ್ಯಂತ್ರವೆಂದ ಬಿಜೆಪಿ 

ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಬೆಂಕಿ ಕಾರಿದರೂ, ಮುಸ್ಲಿಂ ಉದ್ಯಮಿಗಳ ಜೊತೆ ಅವರಿಗೆ ಹಾರ್ದಿಕ ಸಂಬಂಧ ಇರುವುದನ್ನು ಅವರೇ ಹಲವಾರು ಬಾರಿ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧಗಳು ಕೇವಲ ಸಾಮಾಜಿಕವಾದುದ್ದೇ? ಇಲ್ಲವೇ ವ್ಯಾಪಾರ ವಹಿವಾಟಿನದ್ದೇ?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾಕೆ ಹಿಂದುಳಿದ ಜಾತಿಗಳ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮುಘರ್ಷಣೆಯಲ್ಲಿ ಬಲಿಯಾಗುತ್ತಿದ್ದಾರೆ? ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ಪ್ರಾಣವನ್ನೂ ಯಾಕೆ ಕಳೆದುಕೊಳ್ಳುತ್ತಿದ್ದಾರೆ? 

ಬಸವರಾಜ ಬೊಮ್ಮಾಯಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ದುಷ್ಕರ್ಮಿಗಳ ದಾಳಿಯಿಂದ ಬಲಿಯಾಗಿದ್ದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು.

ಮೃತ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಎಷ್ಟೇ ಮೊತ್ತದ ಪರಿಹಾರ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ್ದು, ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

 

Trending News