close

News WrapGet Handpicked Stories from our editors directly to your mailbox

ಯೋಚಿಸಿ ತಪ್ಪದೇ ಮತಚಲಾಯಿಸಿ: ಜಾವಗಲ್ ಶ್ರೀನಾಥ್

ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಕ್ರಿಕೆಟರ್ ಜಾವಗಲ್ ಶ್ರೀನಾಥ್ ಕರೆ ನೀಡಿದರು.

Updated: Apr 11, 2019 , 07:18 PM IST
ಯೋಚಿಸಿ ತಪ್ಪದೇ ಮತಚಲಾಯಿಸಿ: ಜಾವಗಲ್ ಶ್ರೀನಾಥ್

ಮೈಸೂರು: ಚುನಾವಣೆಯಲ್ಲಿ ಮತದಾನ ಮಾಡುವುದು ಬಹಳ ಮುಖ್ಯವಾದ ಕರ್ತವ್ಯ ಹಾಗೂ ಜವಾಬ್ದಾರಿ. ಹಾಗಾಗಿ ನಾಗರಿಕರು ಯೋಚಿಸಿ ತಪ್ಪದೇ ಮತದಾನ ಮಾಡಿ ಎಂದು ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು.

2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮೈಸೂರು ಮಹಾನಗರಪಾಲಿಕೆ ಸಹಯೋಗದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಸೈಕ್ಲೋತಾನ್ ಕಾರ್ಯಕ್ರಮಕ್ಕೆ ಅವರು ನಗಾರಿ ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.    

ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಮತದಾನ ಪ್ರಮಾಣ ಹೆಚ್ಚಿಸಲು ಹಲವು ರೀತಿಯ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ ಎಂದು ಅವರು ತಿಳಿಸಿದರು.    

ಸೈಕ್ಲೋತಾನ್‍ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸೈಕಲ್ ಸವಾರರು ಭಾಗವಹಿಸಿದ್ದರು. ಎಲ್ಲರೂ ಬಿಳಿ ಬಣ್ಣದ ಟೋಪಿ ಮತ್ತು ಟಿಶರ್ಟ್ ಧರಿಸಿದ್ದರು. ಅದರ ಮೇಲೆ ಮತದಾನದ ದಿನ ಮತ್ತು ಸಮಯವನ್ನು ಮುದ್ರಿಸಲಾಗಿತ್ತು. ಈ ಮೂಲಕ ನಗರ ಪ್ರದೇಶದ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಸಾರಿದರು.
    
ಚಿತ್ರನಟ ಧನಂಜಯ್, ಹಿರಿಯ ಪೊಲೀಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ, ಸ್ವೀಪ್ ಸಮಿತಿ  ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಹಾಗೂ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.