ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಪ್ರಾರಂಭ : ಬಸವರಾಜ ಬೊಮ್ಮಾಯಿ

 ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಇಂದು ಪ್ರಕಟಿಸಿದರು.

Written by - Zee Kannada News Desk | Last Updated : Apr 24, 2022, 11:25 PM IST
  • ನಟಸಾರ್ವಭೌಮ ಡಾ ರಾಜಕುಮಾರ್ ಅವರ 94 ನೇ ಜನ್ಮದಿನಾಚರಣೆ ಹಾಗೂ 2017 ನೇ ದಿನದರ್ಶೀ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಪ್ರಾರಂಭ : ಬಸವರಾಜ ಬೊಮ್ಮಾಯಿ title=

ಬೆಂಗಳೂರು:  ಇದೇ ವರ್ಷ ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಇಂದು ಪ್ರಕಟಿಸಿದರು.

ನಟಸಾರ್ವಭೌಮ ಡಾ ರಾಜಕುಮಾರ್ ಅವರ 94 ನೇ ಜನ್ಮದಿನಾಚರಣೆ ಹಾಗೂ 2017 ನೇ ದಿನದರ್ಶೀ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಯಾರೂ ಮನವಿ ಅಥವಾ ಬೇಡಿಕೆ ಸಲ್ಲಿಸದಿದ್ದರೂ ಪ್ರಸಕ್ತ 2022-23 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ತಾವು 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಬದಲಾಗಿ 200 ಚಲನಚಿತ್ರಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದರು.ಕಾಡುಗಳ್ಳ ವೀರಪ್ಪನ್ ಅವರಿಂದ ಬಂಧಮುಕ್ತರಾದ ನಂತರ ಡಾ ರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಯಾವುದೇ ಕಹಿ ಘಟನೆಗಳನ್ನು ಸ್ಮರಿಸದೆಯೇ ಕೆಟ್ಟ ವಿಚಾರಗಳನ್ನು ಪ್ರಸ್ತಾಪಿಸದ ಡಾ ರಾಜ್ ಕುಮಾರ್ ಅವರ ಉದಾತ್ತ ಮನೋಭಾವವನ್ನು ಕೊಂಡಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀವಿತಾವಧಿ ಸಾಧನೆಗಾಗಿ ಸುಪ್ರಸಿದ್ಧ ನಟಿ ಲಕ್ಷ್ಮೀ ಅವರಿಗೆ ಡಾ ರಾಜಕುಮಾರ್ ಪ್ರಶಸ್ತಿ ಹಾಗೂ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ಅವರ ಹೆಸರಿನ ಪ್ರಶಸ್ತಿ ತಮಗೆ ಲಭಿಸುತ್ತಿರುವುದು ರಾಜ್ ಅವರ ಆಶೀರ್ವಾದ ಲಭಿಸಿದಂತೆ ಎಂದು ನಟಿ ಲಕ್ಷ್ಮೀ ಅವರು ಭಾವುಕರಾಗಿ ನುಡಿದರು.

ಇದನ್ನೂ ಓದಿ : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಫೋನ್‌ ನಂಬರ್‌ ಕೊಟ್ಟ ಕಿರಾತಕ: ಮುಂದಾಗಿದ್ದೇನು ಗೊತ್ತಾ?

ಕೆಲಸ ಕಲಿಯಲು ಪುಟ್ಟಣ್ಣ ಕಣಗಾಲ್ ಅವರಲ್ಲಿ ತಾವು ಅವಕಾಶ ಕೋರಿದ ದಿನಗಳನ್ನು ಸ್ಮರಿಸಿದ ನಟ-ನಿರ್ದೇಶಕ ಎಸ್ ನಾರಾಯಣ್ ಅವರು ಪುಟ್ಟಣ್ಣ ಅವರ ಹೆಸರಿನ ಪ್ರಶಸ್ತಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಹಾಗೂ ಈ ದಿನ ತಮ್ಮ ಪಾಲಿನ ಸುದಿನ ಎಂದು ಬಣ್ಣಿಸಿದರು.

ಕನ್ನಡ ಚಲನಚಿತ್ರ ರಂಗಕ್ಕೆ ಹಲವು  ಸದಭಿರುಚಿಯ ಚಿತ್ರಗಳ ಕೊಡುಗೆ ನೀಡಿದ ನಿರ್ಮಾಪಕ ಹಾಗೂ ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದ ಜಿ ಎನ್ ಲಕ್ಷ್ಮೀಪತಿ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪತಿ ಅವರ ಪುತ್ರ ರಾಮಪ್ರಸಾದ್ ಅವರು ತಮ್ಮ ತಂದೆಯ ಪರವಾಗಿ ಮುಖ್ಯಮಂತ್ರಿಯವರಿಂದ ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿದರು. 

ಡಾ ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ವಿಜೇತರಿಗೆ ತಲಾ ಐದು ಲಕ್ಷ ರೂಪಾಯಿ ನಗದು, ಐವತ್ತು ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ, ಸ್ಮರಣಿಕೆ ಮತ್ತು ಫಲ ತಾಂಬೂಲ ನೀಡಿ ಮುಖ್ಯಮಂತ್ರಿ ಗೌರವಿಸಿದ್ದು ಗಮನಾರ್ಹ.

ಉತ್ತಮ ನಟ, ಉತ್ತಮ ನಟಿ ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಗಳ ಹಾಗೂ ಇತರೆ ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಡಾ ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಹಾಗೂ ಕಿರಿಯ ಸಹೋದರ ಪುನೀತ್ ರಾಜ್ ಕುಮಾರ್ ಅವರ ಸರಳತೆ ಮತ್ತು ಮಾನವೀಯತೆಯ ಗುಣಗಳನ್ನು ಅನಾವರಣ ಗೊಳಿಸಿದರು.

ಇದನ್ನೂ ಓದಿ: State Bank of India: ಮಹಿಳಾ ದಿನಾಚರಣೆಗೆ 'SBI' ನಿಂದ ಬಂಪರ್ ಗಿಫ್ಟ್..!

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ ಆರ್ ಜೈರಾಜ್, ಹೆಸರಾಂತ ನಿರ್ಮಾಪಕ ಎಸ್ ಎ ಚಿನ್ನೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ ಎಸ್ ಹರ್ಷ ಅವರೂ ಸೇರಿದಂತೆ ಹಲವು ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.

ಸಮಾರಂಭಕ್ಕೆ ಮುನ್ನ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಪ್ರೇಕ್ಷಕರ ಮನತಣಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿ

 

Trending News