'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಘೋಷಿಸಿದ ನಟ ಉಪೇಂದ್ರ

ಜನರು ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ಮಾಡುವ ನಿಟ್ಟಿನಲ್ಲಿ ಹೊಸ ಪಕ್ಷ ಸ್ಥಾಪನೆ...

Last Updated : Oct 31, 2017, 05:47 PM IST
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಘೋಷಿಸಿದ ನಟ ಉಪೇಂದ್ರ title=
ಬೆಂಗಳೂರು: ಖ್ಯಾತ ನಟ, ನಿರ್ದೇಶಕ ರಿಯಾಲ್ ಸ್ಟಾರ್ ಉಪೇಂದ್ರ ಇಂದು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಎಂಬ ಹೆಸರಿನಲ್ಲಿ ಅಧಿಕೃತವಾಗಿ ತಮ್ಮ ನೂತನ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಜೊತೆಗೆ 'ಪ್ರಜಾಕೀಯ' ಹೆಸರಿನ ವೆಬ್ ಸೈಟ್ ಲಾಂಚ್ ಸಹ ಮಾಡಿದ್ದಾರೆ.
 
ಬೆಂಗಳೂರಿನ ಗಾಂಧಿ ಭವನದಲ್ಲಿ ನೂತನ ಪಕ್ಷವನ್ನು ಘೋಷಿಸಿದ ಉಪೇಂದ್ರ, ತಮ್ಮ ಸಿನಿಮಾಗಳಂತೆಯೇ ವಿಭಿನ್ನವಾಗಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮ ಮಿತ್ರರ ಜೊತೆ ಸಂವಾದ ನಡೆಸಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು.. ರಾಜಕೀಯ ಬದಲಾವಣೆ ಕಾನ್ಸೆಫ್ಟ್ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಲೋಕಾರ್ಪಣೆಗೆ ಮುನ್ನುಡಿ. ಜನರು ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ಮಾಡುವ ನಿಟ್ಟಿನಲ್ಲಿ ಹೊಸ ಪಕ್ಷ ಸ್ಥಾಪನೆ ಎಂದು ಹೇಳಿದರು.
 
ಕೆಪಿಜೆಪಿ ಪಕ್ಷದ ಉದಯದ ಉದ್ದೇಶ, ಮೊದಲಿಗೆ ನಮ್ಮಿಂದ ಬದಲಾವಣೆ ಆಗಬೇಕು, ಜನರೇ ಬದಲಾವಣೆಯ ಸೃಷ್ಟಿಕರ್ತರು. ಹಲವರು ಹಲವು ಸಲಹೆಗಳನ್ನು, ಉತ್ತಮ ಸಂದೇಶಗಳನ್ನೂ ರವಾನಿಸಿದ್ದಾರೆ. ಕೃಷಿ, ಶಿಕ್ಷಣದಲ್ಲಿ ಸಂಪೂರ್ಣ ಬದಲಾಗಬೇಕು ಎಂಬುದು ಹಲವು ಪ್ರಜೆಗಳ ಅಭಿಪ್ರಾಯವಾಗಿದೆ ಎಂದು ವಿವರಿಸಿದರು.
 
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಚಿನ್ಹೆಯಾಗಿ ಆಟೋ ಅಥವಾ ಚಪ್ಪಲಿ ಚಿನ್ಹೆಗಳನ್ನು ನೀಡುವಂತೆ ಉಪೇಂದ್ರ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು. ನಮ್ಮ ಪಕ್ಷ ಕೆಳವರ್ಗದವರ ಮತ್ತು ಕಾರ್ಮಿಕರ ಸ್ವತ್ತು ಎಂದು ತಿಳಿಸಿರುವ ಉಪೇಂದ್ರ ಇಂದಿನ ಸುದ್ದಿಗೋಷ್ಠಿಯಲ್ಲೂ ಖಾಕಿ ವಸ್ತ್ರ ಧರಿಸಿದ್ದರು. ಪತ್ನಿ ಪ್ರಿಯಾಂಕ ಉಪೇಂದ್ರ ಸಹ ಖಾಕಿ ಉಡುಪನ್ನು ಧರಿಸಿದ್ದರು.
 
ದೇಶದ ಶಿಕ್ಷಣ ವ್ಯವಸ್ಥೆ ಬದಲಾಗಬೇಕು, ಕೃಷಿಗೆ ಹೆಚ್ಚು ಒತ್ತು ಕೊಡಬೇಕು, ಹಳ್ಳಿಗಳು ಬದಲಾದರೆ ನಗರಗಳು ಬದಲಾಗುತ್ತವೆ. ನಾನೇ ನಿಮ್ಮ ಬ್ರ್ಯಾಂಡ್ ಅಂಬಾಸಿಡರ್, ನೀವು ಐಡಿಯಾ ಕೊಡಿ, ಒಟ್ಟಿಗೆ ಸೇರಿ ಕೈಜೋಡಿಸಿದರೆ ಜನ ಖಂಡಿತ ಗೆಲ್ಲಿಸುತ್ತಾರೆ. ನಮ್ಮಲ್ಲಿ ಕೇವಲ ನಾಯಕರು ಮಾತ್ರ ಮುಂದುವರೆಯುತ್ತಲೇ ಇರ್ತಾರೆ. ಆದರೆ, ಅದನ್ನ ನಾವು ಬದಲಾಯಿಸಬೇಕಿದೆ. ಹೊಸ ಪಕ್ಷದ ಮೂಲಕ ಆ ಕೆಲಸವನ್ನು ಮಾಡುತ್ತೇವೆ. ದುಡ್ಡು, ಜಾತಿ ಬಲ ಇದ್ದರೆ ಮಾತ್ರ ರಾಜಕೀಯ ಎಂಬ ಮನಸ್ಥಿತಿ ಇದೆ. ಆದರೆ, ನಮಗೆ ಇದ್ಯಾವುದೂ ಬೇಡ... ನಾನು ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುತ್ತೇನೆ. ನನಗೆ ತುಂಬಾ ವಿಶ್ವಾಸವಿದೆ. ಈಗಾಗಲೇ ನಾನು ಗೆದ್ದಿದ್ದೇನೆ. ಈಗೇನಿದ್ದರು ಪ್ರಜೆಗಳು ಗೆಲ್ಲಬೇಕಿದೆ. ನಮ್ಮ ಪಕ್ಷ ದುಡ್ಡಿಗಲ್ಲಾ, ಬದಲಾಗಿ ಪ್ರಜ್ಞಾವಂತರಿಗೆ ಎಂದು ಉಪೇಂದ್ರ ತಿಳಿಸಿದರು.
 
ಕೆಪಿಜೆಪಿ ಲಾಂಚ್ ನಲ್ಲಿ ಉಪೇಂದ್ರ ಅವರ ಕುಟುಂಬಸ್ಥರು, ನಟ- ನಿರ್ದೇಶಕ ಕುಮಾರ್ ಗೋವಿಂದ್, ಸಂಗೀತ ನಿರ್ದೇಶಕ ವಿ.ಮನೋಹರ್, ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಶಮಿತಾ ಮಲ್ನಾಡ್, ನಿರ್ಮಾಪಕ ಸೌಂದರ್ಯ ಜಗದೀಶ್ ಸಹ ಬಾಗಿಯಾಗಿದ್ದರು.
 
ಎಲ್ಲರಿಗೂ ಉಚಿತ ಶಿಕ್ಷಣ,ಆರೋಗ್ಯ,ಹಳ್ಳಿಗಳ ಅಭಿವೃದ್ಧಿ ನಮ್ಮ ಆದ್ಯತೆ, ಗುಡಿ ಕೈಗಾರಿಕೆಗಳಿಗೆ ಮೊದಲ ಆದ್ಯತೆ, ಸ್ವಾವಲಂಬಿಯಾಗಲು ಮುಕ್ತ ಅವಕಾಶ ನಮ್ಮ ಮೊದಲ ಆದ್ಯತೆಗಳಾಗಿವೆ. ಉರುಹೊಡೆದು ಪಾಸು ಮಾಡುವ ಚಿಂತನೆ ನಮ್ಮದಲ್ಲ. ಕೃಷಿ, ಕೃಷಿಕರ ಏಳಿಗೆ ನಮಗೆ ಮುಖ್ಯ. ನನ್ನ ಜೊತೆ ನೀವು ಕೈಜೋಡಿಸಿ, 
ನೀವೇ ಸ್ಪರ್ಧಿಸಿ, ನಿಮ್ಮ ಪಬ್ಲಿಸಿಟಿ ಹೊಣೆ ನನಗಿರಲಿ ಎಂದು ಉಪೇಂದ್ರ ಪ್ರಜೆಗಳಿಗೆ ಕರೆ ನೀಡಿದ್ದಾರೆ.
 
ನಮಗೆ ಯಾರೂ ಹೈಕಮಾಂಡ್ ಇಲ್ಲಾ, ಜನರೇ ನಮಗೆ ಹೈಕಮಾಂಡ್ ಇಂದಿನಿಂದಲೇ ನಮ್ಮ ಹೋರಾಟ ಆರಂಭವಾಗಲಿದೆ. ಎಲ್ಲಾ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸುತ್ತೇವೆ.
 
ಪಕ್ಷದಲ್ಲಿ ಸಂಪೂರ್ಣ ಟ್ರಾನ್ಸಫರೆನ್ಸಿ ತರುತ್ತೇವೆ, ಕೊಳಚೆಯಲ್ಲಿ ಕುಳಿತೇ ಕನಸು ಕಾಣುತ್ತೇವೆ, ಅದನ್ನ ಬಿಟ್ಟು ಕೊಳಚೆಯಿಂದ ಮೇಲೆದ್ದು ಬರುವುದರ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ. 80 ರಷ್ಟು ಮಂದಿ ತೆರೆಮರೆಯಲ್ಲಿಯೇ ಇದ್ದಾರೆ- 20 ರಷ್ಟು ಮಂದಿ ಮಾತ್ರ ಮೆರೆಯುತ್ತಿದ್ದಾರೆ. ಸೋಲು ಗೆಲುವು ನಮಗೆ ಬೇಕಿಲ್ಲ, ಪ್ರಯತ್ನ ಮಾಡುವ ಕಡೆ ಮೊದಲು ನಮ್ಮ ಗಮನ ಪ್ರಯತ್ನ ಮಾಡಿದರೆ ಮುಂದಿನದು ಅದಾಗಿಯೇ ಬರುತ್ತದೆ ಎಂದು ಉಪೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Trending News