ಬೆಂಗಳೂರು: ವಿಶ್ವಾಸಮತದಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಂಖ್ಯೆಯ ಲೆಕ್ಕದಲ್ಲಿ ಸೋತರೂ ನಾವು ನೈತಿಕವಾಗಿ ಗೆದ್ದಿದ್ದೇವೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹಣ ಮತ್ತು ತೋಳ್ಬಲ ಬಳಸಿಕೊಂಡು ಸಂಖ್ಯೆಯ ಲೆಕ್ಕದಲ್ಲಿ ಗೆದ್ದಿರುವ ಬಿಜೆಪಿ ನೈತಿಕವಾಗಿ ಸೋತಿದೆ. ಆದರೆ, ಸಂಖ್ಯೆಯ ಲೆಕ್ಕದಲ್ಲಿ ನಮ್ಮ ಮೈತ್ರಿ ಸರ್ಕಾರ ಸೋತರೂ ಅವರ ಮಟ್ಟಕ್ಕೆ ಇಳಿಯದೆ ನೈತಿಕವಾಗಿ ನಾವು ಗೆದ್ದಿದ್ದೇವೆ. ಈಗ ನಮ್ಮ ಮನೆ ಸ್ವಚ್ಛವಾಗಿದೆ" ಎಂದು ಹೇಳಿದ್ದಾರೆ.
ಹಣ ಮತ್ತು ತೋಳ್ಬಲ ಬಳಸಿಕೊಂಡು ಸಂಖ್ಯೆಯ ಲೆಕ್ಕದಲ್ಲಿ ಗೆದ್ದಿರುವ ಬಿಜೆಪಿ ನೈತಿಕವಾಗಿ ಸೋತಿದೆ.
ಸಂಖ್ಯೆಯ ಲೆಕ್ಕದಲ್ಲಿ ನಮ್ಮ ಮೈತ್ರಿ ಸರ್ಕಾರ ಸೋತರೂ ಅವರ ಮಟ್ಟಕ್ಕೆ ಇಳಿಯದೆ ನೈತಿಕವಾಗಿ ನಾವು ಗೆದ್ದಿದ್ದೇವೆ.
ಈಗ ನಮ್ಮ ಮನೆ ಸ್ವಚ್ಛವಾಗಿದೆ.@INCKarnataka
— Siddaramaiah (@siddaramaiah) July 23, 2019
ಇದಕ್ಕೂ ಮುನ್ನ, ಮೈತ್ರಿ ಸರ್ಕಾರ ಪತನಗೊಂಡು ಸದನದಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಭಾರತೀಯ ಜನತಾ ಪಕ್ಷದವರ ಕುಮ್ಮಕ್ಕಿನಿಂದಲೇ ಮೈತ್ರಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ಅವರನ್ನು ಹೊರತುಪಡಿಸಿ, ಎಲ್ಲರೂ ಬಿಜೆಪಿಗೆ ವಾಮಮಾರ್ಗದಲ್ಲಿ ಸಹಕಾರ ನೀಡಿದ್ದಾರೆ. ಬಿಜೆಪಿಯವರಿಗೆ ಸಂವಿಧಾನ್ಸದ ಮೇಲೆ ನಂಬಿಕೆಯಿಲ್ಲ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿಯವರು ಮಾನ ಮರ್ಯಾದೆ ಇಲ್ಲದ ಲಜ್ಜೆಗೆಟ್ಟವರು. ಕುದುರೆ ವ್ಯಾಪಾರ ಮಾಡಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಆಡಳಿತ ನಡೆಸಲಿರುವ ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ. ಇವರಿಂದ ಏನನ್ನು ತಾನೇ ನಿರೀಕ್ಷೆ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.