ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ? ಅನರ್ಹರಿಗೆ ಮತದಾರರ ಪ್ರಶ್ನೆ

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಇದೀಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಚುನಾವಣಾ ಪ್ರಚಾರದ ವೇಳೆ ಹಲವೆಡೆ ಮತದಾರರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಅನರ್ಹ ಶಾಸಕರು ಪೇಚಿಗೆ ಸಿಲುಕಿದ್ದಾರೆ.

Last Updated : Nov 25, 2019, 10:47 AM IST
ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ? ಅನರ್ಹರಿಗೆ ಮತದಾರರ ಪ್ರಶ್ನೆ title=
File Photo

ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಇದೀಗ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಶತಾಯಗತಾಯ ತಮ್ಮ ಕ್ಷೇತ್ರಗಳಿಂದ ಮತ್ತೆ ಆಯ್ಕೆಯಾಗಲು ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಚುನಾವಣಾ ಪ್ರಚಾರದ ವೇಳೆ ಹಲವೆಡೆ ಮತದಾರರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಅನರ್ಹ ಶಾಸಕರು ಪೇಚಿಗೆ ಸಿಲುಕಿರುವ ಘಟನೆಗಳೂ ನಡೆಯುತ್ತಿದ್ದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಏನು ಆರೋಪಿಸಿ ರಾಜೀನಾಮೆ ನೀಡಿ ಅನರ್ಹತೆಯ ಪಟ್ಟ ಹೊತ್ತಿದ್ದ ಶಾಸಕರು, ಇದೀಗ ಬಿಜೆಪಿ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದೆ. ಹಾಗಾಗಿ ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದು ಮತದಾರರ ಮುಂದೆ ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಅನರ್ಹರ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದು, ನಿಮ್ಮನ್ನು ಗೆಲ್ಲಿಸಿದ್ದಕ್ಕೆ ರೈತರಿಗೆ ಏನು ಮಾಡಿದ್ದೀರಿ? ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ? ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. 

ಹೌದು, ಇದೀಗ ಹುಣಸೂರಿನ ಅನರ್ಹ ಶಾಸಕ ಎಚ್. ವಿಶ್ವನಾಥ್(H Vishwanath) ಅವರಿಗೂ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಸತತ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ವಿಶ್ವನಾಥ್, ಕಳೆದ 2018ರ ವಿಧಾನಸಭಾ ಚುನಾವಣೆಗೂ ಮೊದಲು ಜೆಡಿಎಸ್ ಸೇರಿದ್ದರು. ಅಷ್ಟೇ ಅಲ್ಲ ಕಳೆದ ಚುನಾವಣೆ ವೇಳೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಇವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿರುವ ಎಚ್.ವಿಶ್ವನಾಥ್,  ಹುಣಸೂರು ಮೈಸೂರು ರಸ್ತೆಯ ಕೊಳಗಟ್ಟ ಹಾಗೂ ಶ್ರವಣಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಚುನಾವಣಾ ಪ್ರಚಾರದ ವೇಳೆ ವಿಶ್ವನಾಥ್ ಅವರಿಗೆ ಕ್ಲಾಸ್ ತೆಗೆದುಕೊಂಡ ಎರಡೂ ಗ್ರಾಮಗಳ ಗ್ರಾಮಸ್ಥರು, ಇದುವರೆಗೂ ನೀವು ನಮ್ಮ ಕಷ್ಟ-ಸುಖ ಕೇಳಲು ಎಂದಾದರೂ ಬಂದಿದ್ದೀರಾ? ಚುನಾವಣೆಯಲ್ಲಿ ಮತ ಹಾಕುವ ಮೂಲಕ ನಿಮ್ಮನ್ನು ನಾವು ಗೆಲ್ಲಿಸಿದ್ದೆವು, ಆದರೆ ನೀವು ರೈತರಿಗಾಗಿ ಏನು ಮಾಡಿದ್ದೀರಿ? ನಮ್ಮನ್ನು ಕೇಳದೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ? ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಈ ವೇಳೆ ವಿಶ್ವನಾಥ್ ಅವರು ಮತದಾರರ ಮನವೊಲಿಕೆಗೆ ಎಷ್ಟು ಪ್ರಯತ್ನಿಸಿದರಾದರೂ, ಸಮಾಧಾನಗೊಳ್ಳದ ಗ್ರಾಮಸ್ಥರು ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಜೋರಾಗಿ ಗಲಾಟೆ ಆರಂಭಿಸಿದರು. ಬಳಿಕ ಪೊಲೀಸರು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿ ವಿಶ್ವನಾಥ್ ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.

ವಿಶ್ವನಾಥ್ ಅವರಿಗಷ್ಟೇ ಅಲ್ಲದೆ, ಉಪಚುನಾವಣೆಗಾಗಿ ಪ್ರಚಾರಕ್ಕೆ ತೆರೆಳಿರುವ ವೇಳೆ ಹಲವು ಅನರ್ಹ ಶಾಸಕರಿಗೆ ಇಂತಹದ್ದೇ ಅನುಭವವಾಗಿದೆ. ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿ ನಾರಾಯಣ ಗೌಡ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭವಿಸಿದ್ದು, ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿತ್ತು.
 

Trending News