ಮುನಿರತ್ನಗೆ ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುತ್ತಾ? ಎಲ್ಲವೂ ಸಸ್ಪೆನ್ಸ್!

ಮುನಿರತ್ನ ನಾಯ್ಡು ಅವರ ಹೆಸರಿನಲ್ಲೇನೋ 'ರತ್ನ' ಅಡಗಿದೆ. ಆದರೆ ಕ್ಷೇತ್ರದಲ್ಲಿ ಅವರ ವರ್ಚಸ್ಸು ಕಬ್ಬಿಣಕ್ಕಿಡಿದ ತುಕ್ಕಿನಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

Written by - Yashaswini V | Last Updated : Oct 7, 2020, 09:50 AM IST
  • ಮುನಿರತ್ನ ನಾಯ್ಡು ಅವರ ಹೆಸರಿನಲ್ಲೇನೋ 'ರತ್ನ' ಅಡಗಿದೆ. ಆದರೆ ಕ್ಷೇತ್ರದಲ್ಲಿ ಅವರ ವರ್ಚಸ್ಸು ಕಬ್ಬಿಣಕ್ಕಿಡಿದ ತುಕ್ಕಿನಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
  • ಜೊತೆಗೆ ಅವರು ಪಕ್ಷ ಸೇರಿದ ಬಳಿಕವೂ ಕ್ಷೇತ್ರದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಿಲ್ಲ‌.
  • ಇದು ಕೂಡ ಮುನಿರತ್ನಗೆ ಮುಳುವಾಗುವ ಸಾಧ್ಯತೆ ಇದೆ.
ಮುನಿರತ್ನಗೆ ರಾಜರಾಜೇಶ್ವರಿ ನಗರದ ಟಿಕೆಟ್ ಸಿಗುತ್ತಾ? ಎಲ್ಲವೂ ಸಸ್ಪೆನ್ಸ್! title=

ಬೆಂಗಳೂರು: ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ಬೀಳಿಸಲು ಮತ್ತು ಬಿಜೆಪಿ ಸರ್ಕಾರ ರಚಿಸಲು ಕಾರಣಕರ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಅತಾರ್ಥ್ ಅನರ್ಹ ಶಾಸಕ ಮುನಿರತ್ನ (Muniratna) ನಾಯ್ಡು ಅವರಿಗೆ ಸದ್ಯ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ (BJP) ಟಿಕೆಟ್ ಕೊಡುತ್ತೋ ಇಲ್ಲವೋ ಎನ್ನುವುದು ಇನ್ನೂ ನಿಗೂಢವಾಗಿದೆ.

ತಮ್ಮನ್ನು ಮುಖ್ಯಮಂತ್ರಿ ಮಾಡಲು ಶಾಸಕ ಸ್ಥಾನ 'ತ್ಯಾಗ' ಮಾಡಿದ ಮುನಿರತ್ನ ನಾಯ್ಡುಗೆ ಬಿಜೆಪಿ ಟಿಕೆಟ್ ಕೊಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರ ಶ್ರಮಕ್ಕೆ ಪ್ರತಿಫಲ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಕಾನೂನು ತೊಡಕಿನಲ್ಲಿ ಮುನಿರತ್ನ!
ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ತರಲು ರಾಜೀನಾಮೆ ನೀಡಿದ ಇತರೆ 14 ಮಂದಿ ಚುನಾವಣೆ ಎದುರಿಸಿದರು. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಬಿಟ್ಟರೆ ಉಳಿದವರು ಗೆದ್ದು ಮಂತ್ರಿಯೂ ಆದರು. ಅದರೆ ಮುನಿರತ್ನ ನಾಯ್ಡುಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವೇ ಸಿಕ್ಕಿಲ್ಲ. 2018ರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಇವರ ಪ್ರತಿಸ್ಪರ್ಧಿಯಾಗಿದ್ದ ತುಳಸಿ ಮುನಿರಾಜು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.

ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ: ಅನರ್ಹ ಶಾಸಕ ಮುನಿರತ್ನ

ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಮುನಿರತ್ನ ನಾಯ್ಡು ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದರು. ಅಕ್ರಮವಾಗಿ ಚುನಾವಣೆ ಗೆದ್ದಿದ್ದಾರೆ. ಹಾಗಾಗಿ ಅತಿ ಹೆಚ್ಚು ಮತ ಪಡೆದಿರುವ ಎರಡನೇ ಅಭ್ಯರ್ಥಿಯಾದ ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣ ರಾಜ್ಯ ಹೈಕೋರ್ಟಿನಿಂದ ಸುಪ್ರೀಂ ಕೋರ್ಟಿಗೆ ಬಂದಿದೆ. ಸುಪ್ರೀಂ ಕೋರ್ಟಿ (Supream Court)ನಲ್ಲಿ ಮಂಗಳವಾರ ವಿಚಾರಣೆ ಮುಗಿಸಿ ಆದೇಶವನ್ನು ಕಾಯ್ದಿರಿಸಲಾಗಿದೆ.

ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು 'ಅಪಾರ್ಟ್‌ಮೆಂಟ್ ನಲ್ಲಿ ಪತ್ತೆಯಾಗಿರುವ ಗುರುತಿನ ಚೀಟಿಗಳ ಸಂಖ್ಯೆಗೂ, ಗೆದ್ದ ಅಭ್ಯರ್ಥಿ ಮತ್ತು ನಿಮ್ಮ ಕಕ್ಷಿದಾರ (ತುಳಸಿ ಮುನಿರಾಜು) ಪಡೆದ ಮತಗಳ ಅಂತರಕ್ಕೂ ವ್ಯತ್ಯಾಸವಿದೆ. ಜೊತೆಗೆ ಆ ಎಲ್ಲಾ ಮತಗಳು ನಿಮಗೆ ಬರುತ್ತಿದ್ದವು ಎಂಬ ನಿಲುವಿಗೆ ಹೇಗೆ ಬರಲು ಸಾಧ್ಯ?' ಎಂದು ತುಳಸಿ ಮುನಿರಾಜು ಪರ ವಕೀಲರನ್ನು ಪ್ರಶ್ನಿಸಲಾಗಿದೆ. ಬಳಿಕ ಆದೇಶವನ್ನು ಕಾಯ್ದಿರಿಸಲಾಗಿದೆ. ಇದೇ ವಾದದ ಆಧಾರದ ಮೇಲೆ ತೀರ್ಪು ನನ್ನ ಪರವಾಗಿ ಬರಬಹುದು ಎಂಬ ಆಶಾವಾದ ಮುನಿರತ್ನ ನಾಯ್ಡು ಅವರದು.

ರಾಜಕೀಯ ಕಾರಣವೇ ಬೇರೆ:-
ಇವತ್ತು ಅಥವಾ ನಾಳೆ ಸುಪ್ರೀಂ ಕೋರ್ಟ್ ಏನೇ ಆದೇಶ ಪ್ರಕಟಿಸಿದರೂ ಮುನಿರತ್ನಗೆ ಬಿಜೆಪಿ ಟಿಕೆಟ್ ಸಿಗುವುದು ಬಹಳ ಕಷ್ಟ ಎನ್ನಲಾಗಿದೆ. ಅದಕ್ಕೆ ರಾಜಕೀಯ ಕಾರಣಗಳಿವೆ‌. ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಡುವೆ ನಡೆಯುತ್ತಿರುವ ಶೀತಲ ಸಮರ ಬಹಿರಂಗ ಸತ್ಯ. ಸದ್ಯ ಮುನಿರತ್ನ ನಾಯ್ಡು ಪರ ಯಡಿಯೂರಪ್ಪ, ತುಳಸಿ ಮುನಿರಾಜು ಪರ ಬಿ.ಎಲ್. ಸಂತೋಷ್ ಲಾಬಿ ನಡೆಸುತ್ತಿದ್ದಾರೆ. ಇದು 'ಯಡಿಯೂರಪ್ಪ ನಗಣ್ಯ' ಎಂದು ಸಾಬೀತು ಪಡಿಸಲು ಸಂತೋಷ್ ಅವರಿಗೆ ಸಿಕ್ಕಿರುವ ಮತ್ತೊಂದು ಅವಕಾಶ. ಇದನ್ನವರು ಸುಲಭವಾಗಿ ಕೈಚೆಲ್ಲರು ಎನ್ನಲಾಗಿದೆ.

ವಿಶ್ವಾಸಗಳಿಸದ ಮುನಿರತ್ನ:
ಮುನಿರತ್ನ ನಾಯ್ಡು ಅವರ ಹೆಸರಿನಲ್ಲೇನೋ 'ರತ್ನ' ಅಡಗಿದೆ. ಆದರೆ ಕ್ಷೇತ್ರದಲ್ಲಿ ಅವರ ವರ್ಚಸ್ಸು ಕಬ್ಬಿಣಕ್ಕಿಡಿದ ತುಕ್ಕಿನಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಅವರು ಪಕ್ಷ ಸೇರಿದ ಬಳಿಕವೂ ಕ್ಷೇತ್ರದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಿಲ್ಲ‌. ಇದು ಕೂಡ ಮುನಿರತ್ನಗೆ ಮುಳುವಾಗುವ ಸಾಧ್ಯತೆ ಇದೆ.

ಚುನಾವಣೆ ಮುಂದೂಡಿದ ಮಾಹಿತಿಯೇ ಇಲ್ಲ; ಆರ್ ಆರ್ ನಗರ ಮತದಾರರ ಆಕ್ರೋಶ

ಜೆಡಿಎಸ್ ನತ್ತ ಮುನಿರತ್ನ:
ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಎಂಬ ಸಂಗತಿ ಈಗ ಮುನಿರತ್ನ ನಾಯ್ಡುಗೆ ಗೊತ್ತಾಗಿದೆ. ಅವರೀಗ ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಕಡೆವರೆಗೂ ಬಿಜೆಪಿ ಟಿಕೆಟ್ ಗಾಗಿ ಕಾದು, ಅದು ಸಿಗದಿದ್ದರೆ ಜೆಡಿಎಸ್ ಸೇರಲು ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ‌. ಈಗ ಟಿಕೆಟ್ ಕೈತಪ್ಪಿದರೆ ಬಿಜೆಪಿಯಲ್ಲಿ ಭವಿಷ್ಯ ಇಲ್ಲ. ಸದ್ಯ ವಿಧಾನ ಪರಿಷತ್ ಸ್ಥಾನಗಳು ಖಾಲಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುವ ಸ್ಥಿತಿಯಲ್ಲಿ ಇಲ್ಲ ಎನ್ನುವ ಕಾರಣಗಳಿಗಾಗಿ ಮುನಿರತ್ನ ಜೆಡಿಎಸ್ ಕಡೆ ನಡೆಯಲಿದ್ದಾರೆ. ಜೆಡಿಎಸ್ ಸೇರಿದರೆ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಗಳಿಸಬಹುದು ಎನ್ನುವುದು ಮುನಿರತ್ನ ನಾಯ್ಡು ಲೆಕ್ಕಾಚಾರ. ಒಟ್ಟಿನಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆ ರೋಚಕವಾಗುವುದಂತೂ ಗ್ಯಾರಂಟಿ.
 

Trending News