ಮಣ್ಣೆತ್ತಿನ ಅಮಾವಾಸ್ಯೆ: ಬಲು ಜೋರಾಗಿದೆ ಬಸವಣ್ಣನ ತಯಾರಿ

Mannettina Amavasye: ಒಂದೆಡೆ ಕೃಷಿಕರು ತಮ್ಮ ತಮ್ಮ ಮನೆಗಳಲ್ಲಿರುವ ಬಸವಣ್ಣನ ಸ್ವರೂಪಿಯಾದ ಎತ್ತುಗಳನ್ನು ಪೂಜಿಸಿದರೆ, ಈ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ನಗರ ವಾಸಿಗಳಿಗೆ ಮಣ್ಣಿನ ಎತ್ತುಗಳನ್ನು ತಂದು ಪೂಜಿಸುವುದು ಅನಿವಾರ್ಯ ಎಂತಲೇ ಹೇಳಲಬಹುದು. ಹಾಗಾಗಿಯೇ, ಮಣ್ಣೆತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಲ್ಪಟ್ಟ ಎತ್ತುಗಳಿಗೆ ಭಾರೀ ಬೇಡಿಕೆ ಇದೆ.

Written by - Yashaswini V | Last Updated : May 25, 2023, 10:30 AM IST
  • ಮಣ್ಣೆತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಲ್ಪಟ್ಟ ಎತ್ತುಗಳಿಗೆ ಭಾರೀ ಬೇಡಿಕೆ ಇದೆ.
  • ಇದೊಂದು ರೀತಿಯಲ್ಲಿ ಕುಂಬಾರರಿಗೆ ಸುಗ್ಗಿ ಹಬ್ಬ ಎಂತಲೂ ಹೇಳಲಾಗುತ್ತದೆ.
  • ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ ವಾರದ ಮೊದಲೇ ಮಣ್ಣಿನ ಎತ್ತಿನ ತಯಾರಿಕೆಯಲ್ಲಿ ಕುಂಬಾರರು ನಿರತರಾಗುತ್ತಾರೆ.
ಮಣ್ಣೆತ್ತಿನ ಅಮಾವಾಸ್ಯೆ: ಬಲು ಜೋರಾಗಿದೆ ಬಸವಣ್ಣನ ತಯಾರಿ  title=

Mannettina Amavasya: ನಮ್ಮ ನಾಡು ಮೊದಲೇ ಕೃಷಿ ಪ್ರಧಾನವಾಗಿರುವ ನಾಡು.  ಮಳೆ ಆರಂಭವಾದರೆ ರೈತರಿಗೆ ಹಬ್ಬದ ದಿನಗಳು ಆರಂಭವಾದಂತೆ. ಮುಂಗಾರು ಬಿತ್ತನೆಯ ಕೆಲಸ ಮುಗಿಯುತ್ತಿದ್ದಂತೆ ರೈತರು, ಹಬ್ಬಗಳ ಆಚರಣೆ ಆರಂಭಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾರಹುಣ್ಣಿಮೆಯನ್ನು ಆಚರಿಸಿರುವ ರೈತ ಬಾಂಧವರು ಇದೀಗ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಗೆ ಸಜ್ಜಾಗುತ್ತಿದ್ದಾರೆ.  

ಎತ್ತುಗಳು ಅನ್ನದಾತನ ಸಂಗಾತಿಗಳು. ರೈತರ ಬದುಕಿನಲ್ಲಿ, ಅವರ ಜೀವನದಲ್ಲಿ ಆಧಾರ ಸ್ತಂಬವಾಗಿ ನಿಲ್ಲುವ ಹೊಲದಲ್ಲಿ ರೈತರ ಬೆನ್ನೆಲುಬಾಗಿ ದುಡಿಯುವ ಎತ್ತುಗಳನ್ನು ಬಸವಣ್ಣನೆಂದೇ ಪೂಜಿಸುವುದು ಪ್ರತೀತಿ. ಕಾರ ಹುಣ್ಣಿಮೆಯಲ್ಲಿ ಈ ಬಸವಣ್ಣನನ್ನು ಸಿಂಗರಿಸಿ ಮೆರವಣಿಗೆ ಮಾಡಿದ್ದ ರೈತರು, ಇದೀಗ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣಿನ ಎತ್ತುಗಳನ್ನು ಎಂದರೆ ಮಣ್ಣಿನ ಬಡವಣ್ಣನನ್ನು ಮನೆಗೆ ತಂದು ಪೂಜಿಸುತ್ತಾರೆ. ಇದರೊಂದಿಗೆ ತಮ್ಮ ಮನೆಯ ಆಧಾರ ಸ್ಥಂಬವಾಗಿರುವ ನೈಜ ಎತ್ತುಗಳಿಗೂ ಕೂಡ ಅಲಂಕಾರ ಮಾಡಿ ಭಕ್ತಿಯಿಂದ ಪೂಜಿಸುವುದು ವಾಡಿಕೆ ಆಗಿದೆ. 

ಒಂದೆಡೆ ಕೃಷಿಕರು ತಮ್ಮ ತಮ್ಮ ಮನೆಗಳಲ್ಲಿರುವ ಬಸವಣ್ಣನ ಸ್ವರೂಪಿಯಾದ ಎತ್ತುಗಳನ್ನು ಪೂಜಿಸಿದರೆ, ಈ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ನಗರ ವಾಸಿಗಳಿಗೆ ಮಣ್ಣಿನ ಎತ್ತುಗಳನ್ನು ತಂದು ಪೂಜಿಸುವುದು ಅನಿವಾರ್ಯ ಎಂತಲೇ ಹೇಳಲಬಹುದು. ಹಾಗಾಗಿಯೇ, ಮಣ್ಣೆತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಲ್ಪಟ್ಟ ಎತ್ತುಗಳಿಗೆ ಭಾರೀ ಬೇಡಿಕೆ ಇದೆ. ಇದೊಂದು ರೀತಿಯಲ್ಲಿ ಕುಂಬಾರರಿಗೆ ಸುಗ್ಗಿ ಹಬ್ಬ ಎಂತಲೂ ಹೇಳಲಾಗುತ್ತದೆ. ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ ವಾರದ ಮೊದಲೇ ಮಣ್ಣಿನ ಎತ್ತಿನ ತಯಾರಿಕೆಯಲ್ಲಿ ಕುಂಬಾರರು ನಿರತರಾಗುತ್ತಾರೆ. 

ಇದನ್ನೂ ಓದಿ- Thursday Remedy: ಹಣದ ಸಮಸ್ಯೆಗೆ ಗುರುವಾರ ಈ ಕೆಲಸ ಮಾಡಿ

ಇನ್ನೂ ಮಣ್ಣೆತ್ತಿನ ಅಮಾವಾಸ್ಯೆಯ ಸಲುವಾಗಿ ತಯಾರಿಸಿದ ಜೋಡೆತ್ತುಗಳಿಗೆ ಭಾರೀ ಬೇಡಿಕೆ ಇರುವುದರಿಂದ ಈ ಸಮಯದಲ್ಲಿ ಪ್ರತಿ ಜೋಡಿ ಎತ್ತುಗಳು ಸುಮಾರು 20 ರಿಂದ 30 ರೂಪಾಯಿವರೆಗೆ ಮಾರಾಟವಾಗುತ್ತವೆ. ಜೋಡಿ ಎತ್ತಿನ ಜೊತೆಗೆ ಒಂದಿಷ್ಟು ಜೇಡಿ ಮಣ್ಣನ್ನು ಇಟ್ಟು ಪೂಜೆ ಮಾಡುವುದು ವಾಡಿಕೆ ಆಗಿರುವುದರಿಂದ ಎತ್ತುಗಳ ಜೊತೆಗೆ ಸ್ವಲ್ಪ ಮಣ್ಣನ್ನು ಕೂಡ ನೀಡಲಾಗುತ್ತದೆ. ಆದಾಗ್ಯೂ, ಶ್ರಮ ಹೆಚ್ಚಾದರೂ ನಿರೀಕ್ಷಿತ ಆದಾಯ ಬರುವುದಿಲ್ಲ ಎಂದು ಕುಂಬಾರ ವರ್ಗದವರು ಬೇಸರ ವ್ಯಕ್ತಪಡಿಸುತ್ತಾರೆ. 

ವಾಸ್ತವವಾಗಿ, ತಂತ್ರಜ್ಞಾನ ಬದಲಾದಂತೆ ಮಣ್ಣಿನ ಒಲೆಗಳು, ಮಣ್ಣಿನ ಹೂಜಿಗಳು, ಗಡಿಗೆಗಳಿಗೆ ಬೇಡಿಕೆ ಕುಸಿದಿದ್ದು, ಇವುಗಳ ಮಾರಾಟವೂ ಕ್ಷೀಣಿಸಿದೆ. ಇದರಿಂದಾಗಿ ಕುಂಬಾರ ವರ್ಗದ ಜನರ ಆದಾಯವೂ ಕೂಡ ತುಂಬಾ ಕಡಿಮೆ ಆಗಿದೆ. 

ಈ ಬಗ್ಗೆ ಅಳಲು ತೋಡಿಕೊಂಡಿರುವ ಉಣಕಲ್ ಗ್ರಾಮದ ಕುಂಬಾರ ಶಿವಪ್ಪ ಅವರು, "ನಾವು ವರ್ಷ ಪೂರ್ತಿ ದುಡಿದರೂ ಕೂಡ ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಮ್ಮದು. ಇದರೊಂದಿಗೆ ಮಕ್ಕಳ ಸಾಲಿ, ಬಟ್ಟಿ ಎಲ್ಲಾದಕ್ಕೂ ರೊಕ್ಕ ಹೊಂದಸಬೇಕ್ರಿ. ಮಣ್ಣೆತ್ತಿನ ಅಮಾಸಿಗೆ ಎತ್ತ ಮಾಡತೇವಿ. ದೀಪಾವಳಿಗೆ ಗಪಣತಿ ಮಾಡತೇವಿ. ಒಂದಿಷ್ಟ ರೊಕ್ಕ ಬರತೈತಿ. ಮೊದಲಿಂದ ಮಾಡಿಕೊಂಡ ಬಂದೇವಿ ಅಂತ ಈ ಕೆಲಸ ಮುಂದವರಿಸಿಕೊಂಡ ಹೋಗಾಕತ್ತೇವಿ ನೋಡ್ರಿ” ಸರಕಾರ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಕೊಟ್ಟರ ಒಳ್ಳೆಯದು ಎನ್ನುತ್ತಾರೆ. 

ಇದನ್ನೂ ಓದಿ- Vastu Tips: ಹುಡುಗರು ತಪ್ಪಾಗಿಯೂ ಈ 5 ವಸ್ತುಗಳನ್ನು ಪರ್ಸ್‌ನಲ್ಲಿ ಇಡಬಾರದು

ಮೊದಲು ಹಬ್ಬಗಳನ್ನು ಆಚರಿಸುವು ದೆಂದರೆ ಎಲ್ಲಿಲ್ಲದ ಹಿಗ್ಗು. ಮನೆ ಮಂದಿ ಎಲ್ಲ ಸೇರಿ, ಹಬ್ಬದ ಆಚರಣೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬದ ಸಂಭ್ರಮ ಕೇವಲ ಸಂಪ್ರದಾಯ ಆಚರಣೆಗೆ ಸೀಮಿತವಾಗಿ ಉಳಿದಿದೆ. ಮಣ್ಣೆತ್ತಿನ ಅಮಾವಾಸ್ಯೆಯ ದಿನವೂ ಕೂಡ ಮುಂಜಾನೆ ಮಡಿ ಉಟ್ಟು ಮನೆ ಶುಚಿಗೊಳಿಸಿ ಮಣ್ಣಿನ ಎತ್ತುಗಳನ್ನು ತಂದು ಪೂಜೆ ಮಾಡಿದರೆ, ಹಬ್ಬವೇ ಮುಗಿದು ಹೋದಂತಾಗುತ್ತಿದೆ. 

“ಮೊದ್ಲ ಮನ್ಯಾಗ ಸಾಕಷ್ಟ ಮಂದಿ ಇರತಿದ್ರು. ಹಬ್ಬ ಎಲ್ಲಾರೂ ಕೂಡಿ ಮಾಡತಿದ್ರು. ಈಗೇನ ಮಾಡುದ್ರಿ, ಮನ್ಯಾಗ ಮಕ್ಕಳನ ಸಾಲಿಗೆ ಕಳಸಬೇಕು. ನಾವ ನೌಕರಿಗೆ ಹೋಗಬೇಕು. ಅಂಥಾದ್ರಾಗ ಹಬ್ಬ ಮಾಡಾಕ ಎಲ್ಲಿ ಟೈಮ್ ಸಿಗತೈತಿ. ಬೆಳಿಗ್ಗೆ ಪೂಜಾ ಮಾಡಿ, ಕೈ ಮುಗದ್ರ ಮುಗೀತ ನೋಡಿ” ಎನ್ನುವುದು ಕೆಲವರ ಅನಿಸಿಕೆ ಆಗಿದೆ‌‌. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News