ಬೆಂಗಳೂರು: ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾಗೆ ಕನ್ನಡ ಪ್ರೇಕ್ಷಕರಿಂದ ಸರಿಯಾದ ಬೆಂಬಲ ಸಿಗದ ಹಿನ್ನೆಲೆ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದಿಕ್ಷೀತ್ ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಹೊಸಬರ ಪ್ರಯತ್ನಗಳಿಗೆ ಕನ್ನಡಿಗರ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
‘ಸುಮಾರು 5 ವರ್ಷಗಳಿಂದ ನಾವು ಮೈಸೂರಿನ ಹುಡುಗರು ಸೇರಿಕೊಂಡು ಉತ್ತಮ ಸಿನಿಮಾ ಮಾಡಿದ್ದೇವೆ. ನಾವು ಬೆಳೆದು ಬಂದಂತಹ ಸಂಸ್ಕೃತಿಯ ಬಗ್ಗೆ ಮೈಸೂರಿನಲ್ಲಿಯೇ ಚಿತ್ರೀಕರಣ ಮಾಡಿ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ನಿರ್ಮಿಸಿದ್ದೇವೆ. ಈ ಸಿನಿಮಾಗೆ ಚಿಕ್ಕ ವಯಸ್ಸಿನ ಹುಡುಗ ಅಶ್ವಿನ್ ವಿಜಯ್‌ಕುಮಾರ್ ದೊಡ್ಡ ಜವಾಬ್ದಾರಿ ಹೊತ್ತು ಬಂಡವಾಳ ಹೂಡಿದ್ದಾರೆ. ನಮ್ಮ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಜನವರಿ 12ಕ್ಕೆ ಬಿಡುಗಡಯಾದ ದಿನದಿಂದಲೂ ಚಿತ್ರ ನೋಡಿದವರೆಲ್ಲರೂ ಅದ್ಭುತವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ವಿಮರ್ಶೆ ವ್ಯಕ್ತವಾಗಿದೆ. ಚಿತ್ರ ವಿಮರ್ಶಕರು ಸಹ ಉತ್ತಮವಾಗಿ ಮಾತನಾಡಿದ್ದಾರೆ. ನಾವೆಲ್ಲರೂ ಸೇರಿ ಒಂದು ಸದಭಿರುಚಿಯ ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
‘ಸ್ಕ್ರಿಪ್ಟ್ ಸರಿಯಿಲ್ಲದಿದ್ದರೆ ನಾನು ಆ ಸಿನಿಮಾದ ಜೊತೆಗೆ ಕೆಲಸವನ್ನೇ ಮಾಡುವುದಿಲ್ಲ. ನಾನು ಚೂಸಿ ಆಗರುವುದರಿಂದ 2 ವರ್ಷಕ್ಕೆ ಒಂದು ಸಿನಿಮಾಗೆ ಮ್ಯೂಸಿಕ್ ಡೈರೆಕ್ಟ್ ಮಾಡುತ್ತೇನೆ. ಆದರೆ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾಗಾಗಿ 6 ವರ್ಷಗಳ ಕಾಲ ನಾನು ಕೆಲಸ ಮಾಡಿದ್ದೇನೆ. ಈ ಸಿನಿಮಾದ ಕಥೆ ಕೇಳಿ ನಾನು ಫ್ರಿಯಾಗಿ ಮ್ಯೂಸಿಕ್ ಮಾಡುತ್ತೇನೆ ಅಂತಾ ಒಪ್ಪಿಕೊಂಡೆ. ಆದರೆ ಚಿತ್ರದ ನಿರ್ಮಾಪಕರು ತಮ್ಮ ದೊಡ್ಡ ಮನಸ್ಸಿನಿಂದ ನೀವು ಕೂಡ ಸಹ ನಿರ್ಮಾಪಕರಾಗಿ ಕೆಲಸ ಮಾಡಿ. ಲಾಭದಲ್ಲಿ ಪಾಲು ನೀಡುತ್ತೇನೆಂದು ನನಗೆ ಆಫರ್ ನೀಡಿದರು. ಮೈಸೂರಿನಲ್ಲಿ ನಡೆದ ‘ಆರ್ಕೆಸ್ಟ್ರಾ ಮೈಸೂರು’ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಿಡುಗಡೆಯಾದ ದಿನ ನಮ್ಮ ಚಿತ್ರಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ಮೈಸೂರು ಮತ್ತು ಬೆಂಗಳೂರಿನ ಜನರು ನಮ್ಮ ಚಿತ್ರದ ಕೈಹಿಡಿಯಲಿಲ್ಲ’ವೆಂದು ರಘು ದಿಕ್ಷೀತ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ʼನಾನು ಆ ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆʼ.. ಶಾಕಿಂಗ್ ನ್ಯೂಸ್ ಕೊಟ್ಟ ನಟಿ ಅನಸೂಯಾ..!
‘ಒಂದೆರಡು ಥಿಯೇಟರ್ ಮತ್ತು ಮಲ್ಟಿಫೆಕ್ಸ್ ಗಳಲ್ಲಿ ಹೌಸ್‍ಫುಲ್ ಆಗಿದ್ದು ಬಿಟ್ಟರೆ ನಮ್ಮ ಸಿನಿಮಾಗೆ ಜನರು ಸಪೋರ್ಟ್ ಮಾಡಿಲ್ಲ. ಇದರಿಂದ ನಮಗೆ ಮತ್ತು ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಹಲವು ತಿಂಗಳುಗಳಿಂದಲೇ ನಾವು ಸಂಕ್ರಾಂತಿಗೊಂದು ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಹೇಳುತ್ತಲೇ ಬಂದಿದ್ದೇವು. ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆದರೂ ನಮ್ಮ ಸಿನಿಮಾ ಅಂದುಕೊಂಡಂತೆ ಗೆದ್ದಿಲ್ಲ. ಜನರಿಗೆ ಈ ಸಿನಿಮಾ ಮುಟ್ಟುತ್ತೆ ಅನ್ನೋ ನಂಬಿಕೆಯಿಂದ ಮಾಡಿದ್ದರಿಂದಲೇ ನಮಗೆ ಸರಿಯಾದ ಬೆಂಬಲ ಸಿಗಲಿಲ್ಲವೆಂಬ ಬೇಸರವಿದೆ’ ಎಂದು ನೋವು ತೋಡಿಕೊಂಡಿದ್ದಾರೆ.
‘ಜನರ ಮೇಲೆ ನಾವು ಇಟ್ಟುಕೊಂಡಿದ್ದ ನಂಬಿಕೆಯಿಂದಲೇ ಈ ಸಿನಿಮಾ ಸೋತಿತಾ ಅನ್ನೋ ಬೇಜಾರು ನಮ್ಮನ್ನು ಕಾಡುತ್ತಿದೆ. ಸಂಕ್ರಾಂತಿಗೆ ಯಾಕೆ ಕನ್ನಡ ಸಿನಿಮಾ ರಿಲೀಸ್ ಮಾಡಲ್ಲ? ಧಮ್ ಇಲ್ವಾ ನಿಮಗೆ ಅಂತಾ ಜನರು ಕೇಳುತ್ತಾರೆ. ಪರಭಾಷೆಯ ಚಿತ್ರಗಳ ಹಾವಳಿಯ ಭೀತಿಯಿಂದ ಕನ್ನಡ ಸಿನಿಮಾ ರಿಲೀಸ್ ಮಾಡಲ್ವಾ ಅಂತಾನೂ ಕೆಲವರು ಕೇಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಬರೆಯುವ ಕನ್ನಡ ಹೋರಾಟಗಾರರ ಅಭಿಮಾನ ಈಗ ಎಲ್ಲಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಸಂಕ್ರಾಂತಿ ಹಬ್ಬಕ್ಕೊಂದು ಕನ್ನಡ ಸಿನಿಮಾ’ ಅಂತಾನೇ ನಾವು ರಿಲೀಸ್ ಮಾಡಿದ ಸಿನಿಮಾಗೆ ಈ ಗತಿಯಾಗಿದೆ. ಎಲ್ಲಿದೆ ಆ ಹಿಂದಿನ ವೈಭವ? ನೀವು ಥಿಯೇಟರ್‍ಗೆ ಬಂದು ಸಿನಿಮಾ ನೋಡಿ ಅಂತಾ ಇಷ್ಟವಾಗುತ್ತದೆ ಅಂತಾ ನಾನು ವೈಯಕ್ತಿಕ ಗ್ಯಾರಂಟಿ ಕೊಟ್ಟಿದ್ದೇನೆ. ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ನೋಡಿದ್ರೆ ನಿಮ್ಮ ಕಣ್ಣಿಲ್ಲಿ ನೀರು ಬರುತ್ತೆ, ನಗು ಮುಖ ಇರುತ್ತೆ, ಏನೋ ಸಾಧಿಸಬೇಕು ಅನ್ನೋ ಛಲ ನಿಮ್ಲಲ್ಲಿ ಮೂಡುತ್ತೆ. ಇನ್ನೇನು ಕೊಡಬೇಕೋ ನಮಗೆ ಗೊತ್ತಾಗುತ್ತಿಲ್ಲ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ಆದರೆ ಒಟ್ಟಿಗೆ ಕುಟುಂಬ ಸಮೇತ ಬಂದು ಯಾಕೆ ಈ ಸಿನಿಮಾ ನೋಡುತ್ತಿಲ್ಲ?’ವೆಂದು ರಘು ದಿಕ್ಷೀತ್ ಪ್ರಶ್ನಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..! ʼಆದಿಪುರಷʼ ಚಿತ್ರ ಏನಾಯ್ತು..?
ಹಿಂದೆ ಇದ್ದಂತಹ ಕುಟುಂಬ ಸಮೇತ ಕನ್ನಡ ಸಿನಿಮಾ ನೋಡುವ ವೈಭವ ಈಗ ಏಕೆ ಮಾಯವಾಗಿದೆ? ತುಂಬಿದ ಚಿತ್ರಮಂದಿಗಳಲ್ಲಿ ಕನ್ನಡ ಸಿನಿಮಾ ನೋಡುವ ಪದ್ಧತಿ ಎಲ್ಲಿ ಹೋಗಿದೆ? ನಮ್ಮ ಹೃದಯವನ್ನು ಎಷ್ಟು ಗಟ್ಟಿ ಮಾಡಿಕೊಂಡ್ರೂ ಅದನ್ನು ಒಡೆಯುವ ಶಕ್ತಿ ಕನ್ನಡಿಗರಿದೆಯಾ? ಒಳ್ಳೆಯ ಸಿನಿಮಾಗಳನ್ನು ನಾವು ಏಕೆ ಮಾಡಬೇಕು? ಬರೀ ಫೈಟು, ಐಟಂ ಸಾಂಗ್, ಲಾಂಗ್, ಮಚ್ಚು ಇದೇ ಸಾಕಾ ನಿಮಗೆ? ಅಥವಾ ಸ್ಟಾರ್ ಹಿರೋಗಳ ಸಿನಿಮಾಗಳನ್ನು ಮಾತ್ರ ನೀವು ನೋಡುವುದಾ? ಹೊಸಬರ ಪ್ರಯತ್ನಗಳ ಸಿನಿಮಾಗಳನ್ನು ನೋಡುವುದಿಲ್ವಾ?’ ಎಂದು ರಘು ದಿಕ್ಷೀತ್ ಬೇಸರ ತೋಡಿಕೊಂಡಿದ್ದಾರೆ.
‘ಎಲ್ಲವನ್ನೂ ಬಿಟ್ಟು ನಾನು ಕಳೆದ ಹಲವು ವರ್ಷಗಳಿಂದ ಇದೇ ಒಂದು ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾದ್ರೆ ನಾನು ಸಿನಿಮಾಗೆ ಮ್ಯೂಸಿಕ್ ಮಾಡೋದನ್ನು ನಿಲ್ಲಿಸಿಬಿಡ್ಲಾ? ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳಾ? ಏಕೆ ‘ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಿನಿಮಾ ನೋಡುವ’ ಸಂಸ್ಕೃತಿ ನಮ್ಮಿಂದ ದೂರ ಹೋಗಿದೆ? ದಯವಿಟ್ಟು ಹೊಸರಬರ ಪ್ರಯತ್ನ ಮತ್ತು ಕನ್ನಡ ಸಿನಿಮಾಗಳನ್ನು ಬೆಂಬಲಿಸಿರಿ’ ಎಂದು ರಘು ದೀಕ್ಷಿತ್ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.