“ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯದಿದ್ದಲ್ಲಿ ಧರಣಿ ಸತ್ಯಾಗ್ರಹ”

ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳ ಮುಂದೆ ಧರಣಿ ಕೂರುವುದಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Written by - Zee Kannada News Desk | Last Updated : Nov 3, 2022, 07:08 PM IST
  • ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಿಸಿತ್ತು.
  • ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ ಬಿಜೆಪಿ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುತ್ತಿದೆ.
  • ಖಜಾನೆಯಲ್ಲಿ ದುಡ್ಡಿಲ್ಲದೆ ಇದ್ದರೆ ಸರ್ಕಾರಕ್ಕೆ ಬೀಗ ಹಾಕಿ ಹೊರಟುಬಿಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
“ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯದಿದ್ದಲ್ಲಿ ಧರಣಿ ಸತ್ಯಾಗ್ರಹ” title=

ಬೆಂಗಳೂರು: ರಾಜ್ಯದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳನ್ನು ತೆರೆದು ಗುಣಮಟ್ಟದ ಊಟ-ತಿಂಡಿ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ. ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳ ಮುಂದೆ ಧರಣಿ ಕೂರುವುದಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್ ಗಳಿಗೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಒಂದು ನೆಪ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ದುರುದ್ದೇಶದಿಂದ ಕ್ಯಾಂಟೀನ್ ನ ಊಟ-ತಿಂಡಿಯ ಗುಣಮಟ್ಟವನ್ನು ಕೆಡಿಸುತ್ತಿದೆ. ಇದರ ಜೊತೆಗೆ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ.

ನಮ್ಮ ಸರ್ಕಾರ ಬೆಂಗಳೂರು ನಗರದ ಎಲ್ಲ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲಿ ಈಗ 40 ಕ್ಯಾಂಟಿನ್ ಗಳು ಮುಚ್ಚಿವೆ. ಬೆಂಗಳೂರು  ನಗರವೂ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್ ಗಳನ್ನು ಕೂಡಾ ಒಂದೊಂದಾಗಿ ಮುಚ್ಚಲಾಗುತ್ತಿದೆ.

ಇದನ್ನೂ ಓದಿ: ಗೊಂಡ ಕುರುಬ ಮತ್ತು ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮನವಿ

ಕ್ಯಾಂಟೀನ್ ಗುತ್ತಿಗೆಯ ನವೀಕರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಕಳೆದ ಆರು ತಿಂಗಳುಗಳಿಂದ ಬಿಬಿಎಂಪಿಗೆ ಕ್ಯಾಂಟೀನ್ ವೆಚ್ಚದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಯಾವುದೇ ಕ್ಷಣದಲ್ಲಿ ಉಳಿದ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ನಿಲ್ಲಿಸಬಹುದು.

ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್ ಗಾಗಿ 2017-18ರಲ್ಲಿ ರೂ. 100 ಕೋಟಿ ಮತ್ತು 2018-19ರಲ್ಲಿ ರೂ.145 ಕೋಟಿಗಳನ್ನು ಬಜೆಟ್ ನಲ್ಲಿ ನೀಡಿತ್ತು. 2022-23ರ  ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಹಣ ನೀಡದೆ ಖರ್ಚಿನ ಭಾರವನ್ನು ಬಿಬಿಎಂಪಿ ತಲೆ ಮೇಲೆ ಹೊರಿಸಿರುವುದೇ ಈಗಿನ ಹಣದ ಕೊರತೆಗೆ ಕಾರಣ.

ಬೆಲೆ ಏರಿಕೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಒಂದು ಊಟಕ್ಕೆ ಇಂದು 50-60 ರೂಪಾಯಿ ನೀಡಬೇಕಾಗಿದೆ. ನಗರದ ಬಡವರು ಮತ್ತು ಬೇರೆ ಊರುಗಳಿಂದ ಬಂದವರಿಗೆ ಅಕ್ಷಯಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿ ಅವರ ಶಾಪಕ್ಕೆ ಯಾಕೆ ತುತ್ತಾಗುತ್ತೀರಿ ಬಿಜೆಪಿ  ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: "ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು"

ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಿಸಿತ್ತು. ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ ಬಿಜೆಪಿ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುತ್ತಿದೆ.

ಬಡಜನರ ಹೊಟ್ಟೆ ಮೇಲೆ ಯಾಕೆ ನಿಮ್ಮ ಕೆಂಗಣ್ಣು ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ? ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಗಳಿಗೆ ದುಡ್ಡು ನೀಡದೆ ಬೀಗ ಹಾಕುತ್ತಿದ್ದೀರಿ, ಖಜಾನೆಯಲ್ಲಿ ದುಡ್ಡಿಲ್ಲದೆ ಇದ್ದರೆ ಸರ್ಕಾರಕ್ಕೆ ಬೀಗ ಹಾಕಿ ಹೊರಟುಬಿಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News