ಬೆಂಗಳೂರು: ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ, ಅಧಿಕಾರ ಮಾಡುತ್ತಿದ್ದಾರೆ. ಈ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನ ಇವರಿಗೆ ಅಧಿಕಾರ ನೀಡಿರುವುದು ರಾಜ್ಯವನ್ನು ಒಗ್ಗೂಡಿಸಿ ಕೆಲಸ ಮಾಡಲು ಆದರೆ ಅವರು ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನವನ್ನು ನಿಲ್ಲಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಜೊತೆಗಿನ ಜಂಟಿ ಪತ್ರಿಕಾಗೊಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಇಂದು ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವಿಭಾಗದ 7 ಜಿಲ್ಲೆಗಳ ಪದಾಧಿಕಾರಿಗಳ ಸಭೆಯನ್ನು ಮಾಡಲಾಗಿದೆ.
ನಾನು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷನಾಗಿ ಮೂರು ತಿಂಗಳಾಗಿದ್ದು, ಇವತ್ತಿನವರೆಗೂ 21 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಇನ್ನು 10 ಜಿಲ್ಲೆ ಪ್ರವಾಸ ಮಾಡಿದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ಮಾಡಿದಂತಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಗಿ ಮತಗಳು ಬರುವುದು ಒಬಿಸಿ ವರ್ಗದಿಂದ. ಈ ಮತಗಳು ಚದುರಿದ್ದಾವೆಯೇ ಇಲ್ಲವೇ ಎಂಬ ವಿಚಾರವಾಗಿ ಚರ್ಚೆ ಮಾಡಿ ಈ ಎಲ್ಲ ಮತಗಳನ್ನು ಪಕ್ಷದತ್ತ ಸೆಳೆಯಲು ಪೂರ್ವಯೋಜಿನತವಾಗಿ ಸಂಘಟನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಶೇ.55ರಷ್ಟು ಮತದಾರರು ಹಿಂದುಳಿದ ವಗರ್ಗಗಳಿಗೆ ಸೇರಿದ್ದು, ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಇದನ್ನೂ ಓದಿ: ನನಗೆ ಇರೋದು ಒಬ್ಬಳೇ ಹೆಂಡತಿ: ಸಾಕು ಮಗನ ಸಂಸಾರದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ..!
ಎಲ್ಲ ಜಿಲ್ಲೆಗಳಲ್ಲಿ ಇರುವ ಸಣ್ಣ ಪುಟ್ಟ ಸಮುದಾಯಗಳನ್ನು ಮುಂಚೂಣಿಗೆ ತರಲು, ಪಕ್ಷದ ಸಂಘಟನೆಯಲ್ಲಿ ಅಧಿಕಾರ ನೀಡಿ ಅಧಿಕಾರದ ಪಾಲುದಾರನಾಗಿ ಮಾಡುವಂತೆ ಪಕ್ಷದ ನಾಯಕರು ನನಗೆ ಕಾರ್ಯಸೂಚಿ ನೀಡಿದ್ದಾರೆ. ಈ ಆಧಾರದ ಮೇಲೆ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ.
ಇನ್ನು ಜನವರಿ 15ರ ನಂತರ ಹಾಗೂ ಫೆ.15ರ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶಗಳನ್ನು ಮಾಡಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭಾಗವಹಿಸಬೇಕು ಎಂಬ ಸಾಕಷ್ಟು ಆಸೆ ಇದೆ. ಆದರೆ ಅವರು ರಾಜ್ಯ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಸಮಾವೇಶದಲ್ಲಿ ಭಾಗವಹಿಸಲು ಆಗುವುದಿಲ್ಲ. ಹೀಗಾಗಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಶಾಸಕರನ್ನು ಸೇರಿಸಿಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಜಿಲ್ಲಾ ಸಮಾವೇಶಗಳನ್ನು ಮಾಡಲಾಗುವುದು.
ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ಸಮಾವೇಶ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಹೀಗಾಗಿ ಒಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಸಮಾವೇಶ ಮಾಡಲು ನಿರ್ಧರಿಸಲಾಗಿದೆ.
ನಂತರ ಮೂರನೇ ಹಂತದಲ್ಲಿ ರಾಜ್ಯ ಮಟ್ಟದ ಹಿಂದುಳಿದ ಸಮಾವೇಶ ಮಾಡುವಂತೆ ರಾಹುಲ್ ಗಾಂಧಿ ಅವರೇ ಸೂಚನೆ ನೀಡಿದ್ದು, ಆ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಾಜ್ಯದ ಮಧ್ಯ ಭಾಗದಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿನ ಜಿಲ್ಲೆಗಳನ್ನು ಮೂರು ಭಾಗಗಳಾಗಿ ಮಾಡಿಕೊಂಡು ಪ್ರತಿಯೊಂದು ಭಾಗಕ್ಕೂ ಒಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ವರದರಾಜ್, ಮುರುಳಿ ಹಾಗೂ ಎಐಸಿಸಿ ಒಬಿಸಿ ವಿಭಾಗದ ಉಸ್ತುವಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ.
ಹಿಂದುಳಿದ ವರ್ಗಗಳ ವಿಶ್ವಾಸ ತೆಗೆದುಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ನಾನು ಚುನಾವಣಾ ಪ್ರಚಾರ ಸಮಿತಿಯ ಭಾಗವೂ ಆಗಿದ್ದೇನೆ. ಇಷ್ಟು ವರ್ಷಗಳಿಂದ ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ನೀಡಿದರೂ ಹಿಂದುಳಿದ ವರ್ಗಗಳಿಗೆ ಸಹಕಾರ ನೀಡುವ ಕಾರ್ಯಕ್ರಮ ನೀಡಿದೆ. ಆಶ್ರಯ ಮನೆ, ಸಿದ್ದರಾಮಯ್ಯ ಅವರ ಭಾಗ್ಯಗಳು, ಭೂ ಹಕ್ಕು ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಹಕಾರಿಯಾಗಿವೆ. ಆದರೆ ಬಿಜೆಪಿ ನಾಯಕರು ಬಹಳ ಆವೇಷದಿಂದ, ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅವರು ಕೆಲಸದ ಆಧಾರದ ಮೇಲೆ ಮತ ಕೇಳುವುದಿಲ್ಲ, ಜಾತಿ, ಧರ್ಮದ ಭಾವನಾತ್ಮಕ ವಿಚಾರದ ಮೇಲೆ ಮತ ಕೇಳುತ್ತಾರೆ.
ಜನರು ಭಾವನಾತ್ಮಕ ವಿಚಾರವಾಗಿ ಹೋದಾಗ ಹೊಟ್ಟೆ ತುಂಬುವುದಿಲ್ಲ ಎಂದು ಅರಿತಿದ್ದಾರೆ. ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ, ಅಧಿಕಾರ ಮಾಡುತ್ತಿದ್ದಾರೆ. ಈ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನ ಇವರಿಗೆ ಅಧಿಕಾರ ನೀಡಿರುವುದು ರಾಜ್ಯವನ್ನು ಒಗ್ಗೂಡಿಸಿ ಕೆಲಸ ಮಾಡಲು ಆದರೆ ಅವರು ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನವನ್ನು ನಿಲ್ಲಸಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಜನರು ಕೂಡ ಇಂದು ಬದಲಾವಣೆಗೆ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಬೇಕಾದ ಕಾರ್ಯಕ್ರಮ ನೀಡಿದ್ದರು ಎಂದು ಭಾವಿಸಿದ್ದಾರೆ. ಪಕ್ಷದ ಎಲ್ಲ ವಿಭಾಗಗಳ ಪೈಕಿ ಒಬಿಸಿ ವಿಭಾಗದಿಂದ ಹೆಚ್ಚಿನ ಸಮಾವೇಶ ಮಾಡಬೇಕು ಎಂದು ನಾವು ಗುರಿ ಇಟ್ಟುಕೊಂಡಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವೂ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.