ನವದೆಹಲಿ: 1ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ Homework ನೀಡುವಂತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದ್ದು, ತರಗತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕವನ್ನು ನಿಗದಿಪಡಿಸುವಂತೆ ಸೂಚನೆ ನೀಡಿದೆ.
1ಮತ್ತು 2ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 1.5 ಕೆಜಿ ಹಾಗೂ ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 2 ರಿಂದ 3 ಕೆಜಿಗಿಂತಲೂ ಹೆಚ್ಚು ಇರುವಂತಿಲ್ಲ ಎಂದು ನಿರ್ದೇಶಿಸಿರುವ ಸಚಿವಾಲಯ, ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕ 4 ಕೆಜಿ ಹಾಗೂ 8 ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕ 4.5 ಕೆಜಿಗಿಂತ ಹೆಚ್ಚು ಇರುವಂತಿಲ್ಲ. 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 5 ಕೆಜಿಗಿಂತ ಹೆಚ್ಚು ಇರಬಾರದೆಂದು ಸೂಚನೆ ನೀಡಿದೆ.
ಇದಲ್ಲದೆ, ಬೋಧಿಸುವ ವಿಷಯ ಹಾಗೂ ಶಾಲಾ ಬ್ಯಾಗ್ ಬಾರದ ಬಗ್ಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಮಾರ್ಗದರ್ಶಿ ಸೂತ್ರ ರೂಪಿಸಿವಂತೆ ಹೊಸ ಆದೇಶದಲ್ಲಿ ಸೂಚಿಸಿರುವ ಸಚಿವಾಲಯ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ ಹಾಗೂ ಗಣಿತ ವಿಷಯ ಹೊರತುಪಡಿಸಿ ಉಳಿದ ಯಾವುದೇ ವಿಷಯಗಳನ್ನು ಬೋಧಿಸುವಂತಿಲ್ಲ. ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ NCERT ಸಲಹೆಯಂತೆ ಗಣಿತ ಮತ್ತು ಇವಿಎಸ್ ವಿಷಯ ಬೋಧಿಸಬಹುದೆಂದು ತಿಳಿಸಲಾಗಿದೆ.